Site icon Vistara News

Caste Census : ಡಿಕೆಶಿ ಒಕ್ಕಲಿಗರಿಗೆ ಮಾತ್ರ ಡಿಸಿಎಂನಾ?; ಶೋಷಿತ ಸಮುದಾಯಗಳ ಒಕ್ಕೂಟ ಆಕ್ರೋಶ

Caste Census DK Shivakumar

ಬೆಂಗಳೂರು: ಕಾಂತರಾಜು ವರದಿ (Kantharaju Report) ಜಾರಿ ಮಾಡಬಾರದು ಎಂಬ ಒಕ್ಕಲಿಗರ ಸಮುದಾಯದ ಮನವಿಗೆ ಸಹಿ ಹಾಕಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಅವರ ನಿಲುವಿನ ಬಗ್ಗೆ ಕರ್ನಾಟಕ ಶೋಷಿತ ಸಮುದಾಯಗಳ ‌ಮಹಾ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ಜಾತಿ ಗಣತಿಗೆ (Caste Census) ಸಂಬಂಧಿಸಿದ ಕಾಂತರಾಜ್ ಕಮಿಟಿ ವರದಿ ಸರ್ಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಸಭೆ ಮಾಡಿರುವ ಒಕ್ಕೂಟಗಳು ಡಿ.ಕೆ. ಶಿವಕುಮಾರ್‌ ಅವರು ಕೇವಲ ಒಕ್ಕಲಿಗರಿಗೆ ಸೀಮಿತವಾದ ಉಪ ಮುಖ್ಯಮಂತ್ರಿಯೇ ಎಂದು ಪ್ರಶ್ನೆ ಮಾಡಿದೆ.

ಶಾಸಕರ ಭವನದಲ್ಲಿ ಜಂಟಿಯಾಗಿ ಸಭೆ ನಡೆಸಿದ ಎರಡೂ ಒಕ್ಕೂಟಗಳು ಕಾಂತರಾಜ್ ವರದಿ ಸ್ವೀಕಾರ ಮಾಡುವಂತೆ ಒತ್ತಾಯ ಮಾಡಿವೆ. ಜತೆಗೆ ಡಿಸೆಂಬರ್ ನಲ್ಲಿ ಅಹಿಂದ ಸಮಾವೇಶ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಿವೆ. ಈ ಮೂಲಕ ಕಾಂತರಾಜು ವರದಿ ಜಾರಿಗೆ ಸಂಬಂಧಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿವೆ.

ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ‌ ಅವರು, ಈ ರಾಜ್ಯದ ಉಪ ಮುಖ್ಯಮಂತ್ರಿ ಸಹಾ ಕಾಂತರಾಜು ಆಯೋಗದ ವರದಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಮಾತನಾಡುವ ಬದಲು ಅವರ ಜನಾಂಗದ ಉಪ ಮುಖ್ಯಮಂತ್ರಿ ಅನ್ನೋ ರೀತಿ ಆಡ್ತಿದ್ದಾರೆ. ಅವರನ್ನ ಕೇಳಬೇಕು ನೀವು ಯಾವ ಉಪ ಮುಖ್ಯಮಂತ್ರಿ ಅಂತ ಎಂದು ಹೇಳಿದರು. ಅವರು ಯಾವ ನೈತಿಕತೆ ಇಟ್ಟುಕೊಂಡು ಡಿಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಾರೆ ಎಂದು ಪ್ರಶ್ನಿಸಿದ ಅವರು ಡಿ.ಕೆ. ಶಿವಕುಮಾರ್‌ ರಾಜೀನಾಮೆಗೆ ಒತ್ತಾಯಿಸುವ ಅವಶ್ಯಕತೆ ಇದೆ ಎಂದರು.

ಕಾಂತರಾಜು ವರದಿಯಲ್ಲಿ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂಬ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಲಿಂಗಾಯತರು ಉಪ ಜಾತಿಯಲ್ಲಿ ಗುರುತಿಸಿಕೊಂಡು ಬೇರೆ ಬೇರೆ ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ನಾವಾ ಹೊಣೆ ಎಂದು ಪ್ರಶ್ನಿಸಿದರು.

ಶಾಮನೂರು ವಿರುದ್ಧ ಎಚ್.‌ ವಿಶ್ವನಾಥ್‌ ಹಿಗ್ಗಾಮುಗ್ಗಾ ವಾಗ್ದಾಳಿ

ಈ ನಡುವೆ, ಕಾಂತರಾಜು ವರದಿಯನ್ನು ವಿರೋಧಿಸಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಮೇಲೆ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ʻʻಶಾಮನೂರುಗೆ ಓದಲು ಬರುತ್ತಾ ಎಂದು ಮೊದಲು ಕೇಳಿ.. ಅವರು ಯಾರ ಮತಗಳ ಮೇಲೆ ಬಂದಿದ್ದಾರೆ? ಯಾರ ಮತಗಳ ಮೇಲೆ ಅಪ್ಪ ಮಕ್ಕಳು ಗೆದ್ದಿದ್ದಾರೆ. ಸುಮ್ಮನೆ ನಾಟಕ‌ ಮಾಡಿಕೊಂಡು, ಬೂಟಾಟಿಕೆ ಮಾಡಿಕೊಂಡಿದ್ದರೆ ಯಾರೂ ಒಪ್ಪುವುದಿಲ್ಲʼʼ ಎಂದರು.

ʻʻಕಾಂತರಾಜ್ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರು ತಮ್ಮ ತಮ್ಮ ಸಮುದಾಯಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದ್ದರು. ಬಿಜೆಪಿ – ಜೆಡಿಎಸ್ ನವರು ಸಾಮಾಜಿಕ ನ್ಯಾಯಕ್ಕೆ ಬೆಂಬಲ ಮಾಡಿಲ್ಲʼʼ ಎಂದು ಹೇಳಿದರು ವಿಶ್ವನಾಥ್‌

ʻʻಹಿಂದೆ ಹಾವನೂರು ವರದಿಯನ್ನು ಕೂಡಾ ವಿರೋಧ ಮಾಲಾಗಿತ್ತು. ವಿಧಾನಭೆಯಲ್ಲೇ ಹರಿದು ಹಾಕಿದ್ದರು, ಕತ್ತೆ ಮೇಲೆ ಮೆರವಣಿಗೆ ಮಾಡಿದ್ದರು. ಆದರೆ ದೇವರಾಜ ಅರಸು ಎದೆಗುಂದದೆ ಜಾರಿ ಮಾಡಿದರು. ಅದೇ ರೀತಿಯಾಗಿ ಕಾಂತರಾಜ್ ವರದಿಯನ್ನ ಸರ್ಕಾರ ಸ್ವೀಕಾರ ಮಾಡಬೇಕು. ಸ್ವೀಕಾರ ‌ಮಾಡಿ ಸಾರ್ವಜನಿಕವಾಗಿ ಚರ್ಚೆಗೆ ಬಿಡಬೇಕುʼʼ ಎಂದು ಎಚ್ ವಿಶ್ವನಾಥ್ ಒತ್ತಾಯ ಮಾಡಿದರು.

Exit mobile version