Site icon Vistara News

Caste Census Report : ಜಾತಿ ಗಣತಿ ಮೂಲ ವರದಿಯೇ ನಾಪತ್ತೆ!?

Caste Census Report

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಜಾತಿ ಗಣತಿ ವರದಿಯ (Caste Census Report) ಮೂಲ ಪ್ರತಿ (Original copy) ಕಣ್ಮರೆಯಾಗಿದೆಯೇ? ಇಂಥದ್ದೊಂದು ಪ್ರಶ್ನೆ ಈ ಹುಟ್ಟಿಕೊಂಡಿದೆ. ಈ ವರದಿಯನ್ನು ಸ್ವೀಕಾರ ಮಾಡಿ ಬಿಡುಗಡೆ ಮಾಡಲು ಸಿಎಂ ಉತ್ಸಾಹ ತೋರಿದ್ದರು. ಈ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ವರದಿಯು ಬಿಡುಗಡೆ ಆಗಬೇಕಿತ್ತು. ಲೋಕಸಭಾ ಚುನಾವಣೆ (Lok Sabha Election 2024) ಹೊತ್ತಿಗೆ ಇದರ ಲಾಭ ಪಡೆಯಲು ಕಾಂಗ್ರೆಸ್‌ ಸರ್ಕಾರ (Congress Government) ಮುಂದಾಗಿತ್ತು. ಆದರೆ, ಈಗ ಇದರ ಮೂಲ ಪ್ರತಿಯೇ ಕಣ್ಮರೆಯಾಗಿದೆ ಎಂಬ ಅನುಮಾನ ಕಾಡತೊಡಗಿದೆ.

ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಮುಖ್ಯಸ್ಥ ಕಾಂತರಾಜು ಅವರು ನೀಡಿದ್ದ ಜಾತಿ ಗಣತಿ ವರದಿ ಇದಾಗಿತ್ತು. ಇದರ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಪತ್ರ ಬರೆದು ಎರಡು ವರ್ಷ ಕಳೆದರೂ ಸರ್ಕಾರದಿಂದ ಯಾವುದೇ ಉತ್ತರ ಇಲ್ಲ. ಜಾತಿಗಣತಿಯ ಮೂಲ ಪ್ರತಿ ಸರ್ಕಾರದ ಖಜಾನೆಯಿಂದಲೇ ನಾಪತ್ತೆಯಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

2018ರಿಂದ 2020ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಕಚೇರಿಯ ತಿಜೋರಿಯಲ್ಲಿದ್ದ ಮೂಲ ಪ್ರತಿ ನಾಪತ್ತೆಯಾಗಿದೆ. ಮೂಲ ಪ್ರತಿಗಳ ಬದಲಾಗಿ ಕೇವಲ ನಕಲು ಪ್ರತಿಗಳನ್ನು ಹಾಗೂ ಸ್ಕ್ಯಾನ್ ಮಾಡಿದ ಕೆಲವು ದಾಖಲೆಗಳನ್ನು ಮಾತ್ರ ಆಯೋಗದ ತಿಜೋರಿಯಲ್ಲಿ ಉಳಿಸಲಾಗಿದೆ.

ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿರುವ ಜಾತಿಗಣತಿಗೆ ಈಗ ನಾಟಕೀಯ ತಿರುವು ಸಿಕ್ಕಿದೆ. ಈವರೆಗೆ ಸರ್ಕಾರ ಈ ವಿಷಯವನ್ನು ಮುಚ್ಚಿಟ್ಟಿದ್ದು ಏಕೆ ಎಂಬ ಪ್ರಶ್ನೆ ಕಾಡತೊಡಗಿದೆ.

ಏನಿದು ನಾಪತ್ತೆ ಪ್ರಕರಣ?

2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಸೂಚಿಸಿತ್ತು. 2015ರಲ್ಲಿ ಎಚ್. ಕಾಂತರಾಜ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ವರದಿ ಸಿದ್ಧಪಡಿಸಿ ಭದ್ರತಾ ಕೊಠಡಿಯಲ್ಲಿ ವರದಿಯ ಮೂಲ ಪ್ರತಿ ಸಹಿತ ಹಲವು ದಾಖಲೆಗಳನ್ನು ಆಯೋಗ ಇರಿಸಿತ್ತು.

ನಂತರ 2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಅವಧಿಯಲ್ಲಿ ಹಿಂದುಳಿದ ವರ್ಗದ ಆಯೋಗಕ್ಕೆ ಅಧ್ಯಕ್ಷರ ನೇಮಕ ಆಗಿರಲಿಲ್ಲ. ನಂತರ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಯಪ್ರಕಾಶ್ ಹೆಗಡೆಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅವರ ಅವಧಿಯಲ್ಲಿ ಅಂದರೆ 2021ರ ಆಗಸ್ಟ್‌ನಲ್ಲಿ ಆಯೋಗವು ಜಾತಿಗಣತಿಯ ವರದಿಯನ್ನು ಹುಡುಕಿದಾಗ ಮೂಲ ಪ್ರತಿ ಕಣ್ಮರೆಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಆಯೋಗದ ಅಂದಿನ ಸದಸ್ಯ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್ ಅವರು ಸರ್ಕಾರಕ್ಕೆ ಪತ್ರ ಬರೆದು ಮೂಲ ಪ್ರತಿ ಕಳ್ಳತನ ಆಗಿರುವ ಬಗ್ಗೆ ಪತ್ರ ಬರೆದಿದ್ದರು. 2022ರ ಏಪ್ರಿಲ್‌ನಲ್ಲಿ ಸದಸ್ಯ ಕಾರ್ಯದರ್ಶಿಯಾಗಿದ್ದ ದಯಾನಂದ ಅವರು ಪ್ರಸಾದ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಮೂಲ ದಾಖಲೆ ಅಲ್ಲದ ಸ್ಕ್ಯಾನ್ ಪ್ರತಿಯು ನಮಗೆ ಲಭ್ಯವಾಗಿದೆ. ಅದರಲ್ಲಿ ತಮ್ಮ ಸಹಿ ಇದ್ದು ಅದು ಅಧಿಕೃತ ಸಹಿ ಹೌದೋ ಅಲ್ಲವೋ ಎಂಬುದನ್ನು ತಿಳಿಸಿ ಎಂದು ಮಾಹಿತಿಯನ್ನು ಕೇಳಿದ್ದರು.

ಇದನ್ನೂ ಓದಿ: HD Kumaraswamy : ನೀವೇನು ಮಾಡಿದೀರಿ? ರೈತ ಸಾಂತ್ವನ ಯಾತ್ರೆ ಲೇವಡಿ ಮಾಡಿದ ಸಿಎಂಗೆ HDK ತಿರುಗೇಟು

ಡಾ. ಪ್ರಸಾದ್ ಅವರು ಯಾವ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದು ದಾಖಲೆಗಳಲ್ಲಿ ಲಭ್ಯವಾಗಿಲ್ಲ. ಈ ಎಲ್ಲ ದಾಖಲೆಗಳಿಂದ ಸರ್ಕಾರದಲ್ಲಿ ಜಾತಿಗಣತಿಯ ಮೂಲ ಪ್ರತಿ ಕಣ್ಮರೆ ಆಗಿದೆ ಎಂಬುದು ಗೊತ್ತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version