Site icon Vistara News

Caste Census : ಜಾತಿ ಗಣತಿ ವರದಿಗೆ ಭಾರಿ ಅಪಸ್ವರ; ಅವೈಜ್ಞಾನಿಕ ಎಂದ ಸಿದ್ದಗಂಗಾ ಶ್ರೀ

Caste Census siddalinga Swameeji

ಬೆಂಗಳೂರು: ಬಹು ವಿವಾದಿತ ಜಾತಿ ಗಣತಿ ವರದಿಯನ್ನು (Caste Census report) ಕೊನೆಗೂ ರಾಜ್ಯ ಸರ್ಕಾರ ಸ್ವೀಕಾರ ಮಾಡಿದೆ. ಇದರ ನಡುವೆಯೇ ಈ ವರದಿ ಅವೈಜ್ಞಾನಿಕ ಎಂಬ ಅಪಸ್ವರ ಮತ್ತೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅವರಿಂದ ಸ್ವೀಕಾರ ಮಾಡಿದ ಈ ವರದಿಯ ಬಗ್ಗೆ ಮೊದಲಿನಿಂದಲೂ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದಿಂದ ಆಕ್ಷೇಪವಿದೆ. ವರದಿ ಮಂಡನೆಯಾಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ (Siddalinga swameeji) ಅವರು, ಇದು ವೈಜ್ಞಾನಿಕವಾಗಿಲ್ಲ ಎಂಬ ಪರೋಕ್ಷ ಅಭಿಪ್ರಾಯ ವ್ಯಕ್ತಪಡಿಸಿದರು.

ʻʻಜಾತಿ ಗಣತಿ‌ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಇದಕ್ಕೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಜಾತಿ ಆಧಾರದ ಮೇಲೆ ಸವಲತ್ತುಗಳನ್ನು ಕೊಡಬೇಕಾಗುತ್ತದೆ. ಈ ವರದಿಯನ್ನು ವೈಜ್ಞಾನಿಕವಾಗಿ ರೂಪಿಸಲಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆʼʼ ಎಂದು ಶ್ರೀಗಳು ಹೇಳಿದರು.

ವ್ಯಾಪಕವಾಗಿ ಎಲ್ಲರನ್ನೂ ಸಂದರ್ಶನ ಮಾಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಗಣತಿ ವಿಚಾರದಲ್ಲಿ ಎಲ್ಲರಿಗೂ ಸಂದರ್ಶನ ಆಗಿದೆಯೋ ಗೊತ್ತಿಲ್ಲ, ನನ್ನನ್ನಂತೂ ಯಾರೂ ಬಂದು ಸಂದರ್ಶನ ಮಾಡಿಲ್ಲ. ಎಲ್ಲರನ್ನೂ ಕೇಳಿ, ಪ್ರತಿಯೊಬ್ಬರನ್ನು ವಿಚಾರಿಸಿ ವರದಿ ಮಾಡಿದರೆ ಸೂಕ್ತ. ಎಲ್ಲರಿಗೂ ಸೌಲಭ್ಯ ಲಭ್ಯವಾಗುವ ರೀತಿಯಲ್ಲಿ ಮಾಡಿದರೆ ಉಪಕಾರವಾಗುತ್ತದೆ ಎಂದು ಶ್ರೀಗಳು ಹೇಳಿದರು.

ʻʻನಾನ್ಯಾವ ಜಾತಿ, ಏನು ಅಂತಾ ಯಾರೂ, ಯಾವ ಮಾಹಿತಿಯನ್ನೂ ಕೇಳಿಲ್ಲ. ಎಲ್ಲರ ಬಳಿಯೂ ಹೋಗಿದ್ವಿ ಅಂತಾ ಹೇಳ್ತಾರಲ್ವಾ? ನನ್ನ ಬಳಿಯೇ ಬಂದಿಲ್ಲʼʼ ಎಂದು ಹೇಳಿರುವ ಸಿದ್ದಗಂಗಾ ಶ್ರೀಗಳು ಪರೋಕ್ಷವಾಗಿ ವರದಿ ವೈಜ್ಞಾನಿಕವಾಗಿ ಆಗಿಲ್ಲ ಎಂದಿದ್ದಾರೆ.

ʻʻಪ್ರತಿಯೊಬ್ಬರನ್ನು ಕೇಳ್ತಾರಾ? ಅಥವಾ ಸಮಾಜದ ಮುಖಂಡರನ್ನ ಮಾತ್ರ ಕೇಳ್ತಾರಾ? ಏನು ಅಂತಾ ಗೊತ್ತಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಮಾತನಾಡೋಕೆ ಹೋಗಲ್ಲ. ಎಲ್ಲರನ್ನೂ ಒಳಗೊಂಡಂತ ವರದಿ ಸ್ವೀಕಾರ ಆಗಲಿ. ಮತ್ತು ಆಯಾ ಜಾತಿಯ ಜನಸಂಖ್ಯೆ ಆಧಾರದ ಮೇಲೆ ಸೌಲಭ್ಯಗಳು ವಿತರಣೆ ಆಗಲಿʼʼ ಎನ್ನುವುದು ಶ್ರೀಗಳ ಅಭಿಮತ.

ಜಾತಿ ಗಣತಿಯಲ್ಲಿ ಕೆಲವು ದೋಷಗಳಿವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ ಎಂದು ಹೇಳಿದರು.

ʻʻನಾಲ್ಕು ಜನರ ಮನೆಗೆ ಹೋಗಿದ್ದರೆ, ಇನ್ನು ಕೆಲವರ ಮನೆಗೆ ಹೋಗಲೇ ಇಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಕೆಲ ಗೊಂದಲಗಳಿವೆ. ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ.ʼʼ ಎಂದು ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಇದನ್ನೂ ಓದಿ Caste Census: ಬಹು ವಿವಾದಿತ ಜಾತಿ ಗಣತಿ ವರದಿ ಸ್ವೀಕರಿಸಿದ ಸಿದ್ದರಾಮಯ್ಯ; ಜೇನುಗೂಡಿಗೆ ಕೈ ಹಾಕಿತೇ ಸರ್ಕಾರ?

ಹಾಲಿ ವರದಿಯಲ್ಲೇನಿದೆ?

ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಹೇಳಿಕೆ ಅನುಸಾರ ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಗ್ರ ವರದಿಯಾಗಿದೆ. ಅಲ್ಲದೆ, ಜಾತಿವಾರು ಜನಸಂಖ್ಯೆ ವಿವರವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ.

ವರದಿಯಲ್ಲಿನ ಪ್ರಮುಖ ಅಂಶಗಳು

  1. ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ, ಎಸ್‌ಟಿ ಹೊರತುಪಡಿಸಿ)
  2. ಜಾತಿವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಸಿ ಸಂಪುಟ ೧)
  3. ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು ( ಎಸ್‌ಟಿ ಸಂಪುಟ ೧)
  4. ವಿಧಾನಸಭಾ ಕ್ಷೇತ್ರವಾರು ಜಾತಿವಾರು ಅಂಕಿ ಅಂಶಗಳು
  5. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶದ ವರದಿ 2024

ಒಟ್ಟು 13 ಪ್ರತಿಗಳ ಸಮಗ್ರ ಸಂಪುಟ ವರದಿ ಇದಾಗಿದೆ. ಶೀಲ್ಡ್‌ ಬ್ಯಾಕ್ಸ್‌ನಲ್ಲಿ ವರದಿ ಪ್ರತಿಯನ್ನು ತರಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹಾಗೂ ಆಯೋಗದ ಸದಸ್ಯರು ವರದಿ ಸಲ್ಲಿಕೆ ಮಾಡಿದ್ದಾರೆ.

Exit mobile version