Site icon Vistara News

Caste Census : ಕಾಂತರಾಜು ವರದಿ ಸ್ವೀಕರಿಸಿದರೆ ಡೇಂಜರ್‌; ಸರ್ಕಾರಕ್ಕೆ ಶಾಮನೂರು ಎಚ್ಚರಿಕೆ

Shamanuru Shivashankarappa Siddaeamaiah

ಬೆಂಗಳೂರು: ಜಾತಿಗಣತಿಗೆ (Caste Census) ಸಂಬಂಧಿಸಿ ಕಾಂತರಾಜು ವರದಿಯನ್ನು (Kantharaju report) ಸ್ವೀಕರಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ (Parliament Elections 2024) ಹಿನ್ನಡೆಯಾಗಲಿದೆ ಎಂದು ಹಿರಿಯ ವೀರಶೈವ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಎಚ್ಚರಿಸಿದ್ದಾರೆ.

ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ ಅವರು, ಸದಾಶಿವ ನಗರದಲ್ಲಿರುವ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂತರಾಜ್ ವರದಿ ತಿರಸ್ಕಾರಕ್ಕೆ ಆಗ್ರಹಿಸಿದರು. ಒಕ್ಕಲಿಗ ಸಮುದಾಯ ಕಾಂತರಾಜು ವರದಿ ಸ್ವೀಕರಿಸಬಾರದು ಎಂದು ಆಗ್ರಹಿಸಿ ಸಹಿ ಸಂಗ್ರಹ ಮಾಡಿದ ಬೆನ್ನಿಗೇ ಲಿಂಗಾಯತ ಸಮುದಾಯದಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಇದರಿಂದ ವರದಿಯನ್ನು ಜಾರಿ ಮಾಡಿಯೇ ಸಿದ್ಧ ಎಂದು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತಾಗಿದೆ.

ಜಾತಿ ಗಣತಿ ವಿಚಾರವನ್ನು ಮುನ್ನೆಲೆಗೆ ತಂದರೆ ಲೋಕಸಭಾ ಚುನಾವಣೆಯಲ್ಲಿ 100% ತೊಂದರೆ ಆಗುತ್ತದೆ. ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆಗಿತ್ತಲ್ಲ, ಅದೇ ರೀತಿ ಆಗಲಿದೆ ಎಂದು ಹೇಳಿದರು.

ಶಾಮನೂರು ಶಿವಶಂಕರಪ್ಪ ವಿರೋಧ ಯಾಕೆ?

ಜಾತಿ ಜನಗಣತಿ ವರದಿ ಸರಿ ಇಲ್ಲ. ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿಲ್ಲ. ಎಲ್ಲೋ ಕೋಣೆಯಲ್ಲಿ ಕುಣಿತು ಮಾಡಲಾಗಿದೆ. ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು, ವೈಜ್ಞಾನಿಕವಾಗಿ ಸಮಿಕ್ಷೆ ಆಗಬೇಕು ಎಂದು ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದರು.

ಕಾಂತರಾಜು ವರದಿಯಲ್ಲಿ ಏನಿದೆ ಎನ್ನುವುದೆಲ್ಲ ಲೀಕ್‌ ಆಗಿದೆ. ಕಾಂತರಾಜು ಅವರು ಕೊಟ್ಟ ಮೂಲ ವರದಿಯೇ ನಾಪತ್ತೆಯಾಗಿದೆ ಎನ್ನಲಾಗುತ್ತಿದೆ. ಅದೇನೇ ಇರಲಿ, ಅದರಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಾಗಿದೆ. ಅದು ಲೋಪದಿಂದ ಕೂಡಿದೆ ಅಂತಲೇ ನಾವು ವಿರೋಧ ಮಾಡ್ತಾ ಇದ್ದೀವಿ. ಲಿಂಗಾಯದ ವೀರಶೈವ ಅಂತ ಬರೆದುಕೊಂಡೇ ಇಲ್ಲ ಅಂತ ಗೊತ್ತಾಗಿದೆ. ಅನೇಕ ಲೋಪದೋಷಗಳು ಎದ್ದು ಕಾಣುತ್ತಿದೆ. ಈ ಸಮಿಕ್ಷೆಯ ವರದಿಗೆ ಎಲ್ಲರ ವಿರೋಧವಿದೆ ಎಂದು ಅವರು ಹೇಳಿದರು.

ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ, ಈಗಲಾದರೂ ಮನೆ ಮನೆಗೆ ಹೋಗಿ ಗಣತಿ ಮಾಡಿ. ಎಲ್ಲೊ ಕುಳಿತುಕೊಂಡು ಗಣತಿ ಮಾಡುವುದಲ್ಲ ಎಂದು ಶಾಮನೂರು ಹೇಳಿದರು.

ಲಿಂಗಾಯತರ ಒಟ್ಟಾರೆ ಜನಸಂಖ್ಯೆ 60-70 ಲಕ್ಷ ಅಂತ ಅದರಲ್ಲಿ ಇದೆಯಂತೆ. ಇದನ್ನೆಲ್ಲ ಒಪ್ಪಲು ಸಾಧ್ಯವೇ ಎಂದು ಕೇಳಿದ ಅವರು, ನಾವೂ ಸಹ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

ಬಿಜೆಪಿ, ಜೆಡಿಎಸ್ ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾನು ಈಗಾಗಲೇ ಈ ಬಗ್ಗೆ ಸಿದ್ದರಾಮಯ್ಯನವರ ಬಗ್ಗೆ ಚರ್ಚೆ ಮಾಡಿದ್ದೇನೆ. ನೋಡೋಣ ತಡಿಯಪ್ಪ ಎಂದು ಹೇಳಿದ್ದಾರೆ ಎಂದು ಶಿವಶಂಕರಪ್ಪ ತಿಳಿಸಿದ್ದಾರೆ. ಯಾರು ವಿರೋಧ ಮಾಡ್ತಾರೊ ಅದನ್ನ ಸಿಎಂ ಬೇಕು ಅಂತಾರೆ, ಅವರು ಹಾಗೆಯೇ ಎಂದು ನಗುತ್ತಾ ಹೇಳಿದರು ಶಿವಶಂಕರಪ್ಪ.

ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೋದೋರಿಗೆ ಸೋಲು

ಪ್ರತ್ಯೇಕ ಲಿಂಗಾಯದ ಧರ್ಮ ಅಂತ ಹೋದವರೆಲ್ಲ ಸೋತು ಹೋಗಿದ್ದಾರೆ. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ರು ಎಂದು ಹೇಳಿದರು. ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆಗೆ ಶಾಮನೂರು ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻಅವನು ಹಿಂದೆ ಹೀಗೇ ಏನೇನೋ ಮಾತಾಡ್ತಿದ್ದ. ಅವನು ಕ್ಯಾಬಿನೆಟ್ ಹೊರಗಿದ್ದಾನೆ. ಅದಕ್ಕೆ ಏನೋನೊ ಮಾತಾಡ್ತಿದ್ದಾನೆʼʼ ಎಂದರು.

Exit mobile version