ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ (Supreme court) ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ವಿಶ್ಲೇಷಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ನೀರು ಬಿಟ್ಟು ತಪ್ಪು ಮಾಡಿತು. ಈಗ ಕೋರ್ಟ್ ಮುಂದೆ ಸಮರ್ಪಕವಾದ ವಾದ ಮಂಡಿಸುವಲ್ಲಿ ವಿಫಲವಾಯಿತು. ಸರಿಯಾಗಿ ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವುದು ಸಾಬೀತಾಗಿದೆ ಎಂದರು.
ಕೋರ್ಟ್ ಆದೇಶಕ್ಕೂ ಮೊದಲೇ ನೀರು ಬಿಟ್ಟು ತಪ್ಪು ಮಾಡಿದರು. ಈಗ ಕೋರ್ಟ್ ಲ್ಲಿ ಸರಿಯಾಗಿ ವಾದ ಮಂಡಿಸದೇ ವಿಫಲರಾದರು. ಈಗ ಮತ್ತೆ ತಪ್ಪು ಮಾಡುವುದು ಬೇಡ, ಮೇಲ್ಮನವಿ ಸಲ್ಲಿಸುವ ಕೆಲಸ ಆಗಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಲಹೆ ನೀಡಿದರು.
ಈಗಲಾದರೂ ಸ್ಟಾಲಿನ್ ಜತೆ ಮಾತನಾಡಿ
ಇನ್ನಾದರೂ ಕಾಂಗ್ರೆಸ್ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ, ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಡಿಎಂಕೆಯ ನಾಯಕರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು.
ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ವೈಮನಸ್ಸು ಇರುವುದು ಜಗಜ್ಜಾಹೀರಾಗಿದೆ ಎಂದೂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮುಂದೇನು ಮಾಡಬೇಕು?: ಬಿಎಸ್‌ವೈ ಸಲಹೆಗಳು ಇಂತಿವೆ.
- ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದರಿಂದ ಡಿಎಂಕೆ ನಾಯಕರ ಜತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಕಾಂಗ್ರೆಸ್ ನಾಯಕರು ಪ್ರಯತ್ನಿಸಬೇಕು.
- ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವ ಸರಕಾರ ತಕ್ಷಣವೇ ಸುಪ್ರೀಂ ಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು.
- ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ ಜಲಾಶಯಗಳಿಗೆ ಭೇಟಿ ಕೊಟ್ಟು ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಆದೇಶ ನೀಡುವಂತೆ ಮೇಲ್ಮನವಿ ಸಲ್ಲಿಸಬೇಕು.
- ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಸುಪ್ರೀಂ ಕೋರ್ಟ್ ಜಲಾಶಯಗಳ ವೀಕ್ಷಣೆಗೆ ಯಾವುದಾದರೂ ಸಮಿತಿಯನ್ನು ಕಳುಹಿಸಿ ಕೊಡಲಿ ಇದನ್ನ ಸರ್ಕಾರ ಮೇಲ್ಮನವಿಯಲ್ಲಿ ಮನವಿ ಮಾಡಬೇಕು.
ಕಾವೇರಿ ಸಮಸ್ಯೆಗೆ ಡಿಎಂಕೆ-ಕಾಂಗ್ರೆಸ್ ಹೊಂದಾಣಿಕೆ ಕಾರಣ ಎಂದ ಬಿಎಸ್‌ವೈ
ಸರ್ಕಾರ ಮೊದಲಿನಿಂದಲು ಕಾವೇರಿ ವಿಚಾರದಲ್ಲಿ ತಪ್ಪು ಮಾಡಿಕೊಂಡು ಬಂದಿದೆ. ಡಿಎಂಕೆ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಕೂಡಾ ಇದಕ್ಕೆ ಒಂದು ಕಾರಣ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.
ʻʻರಾಜ್ಯಕ್ಕೆ ಬಹಳ ಇಕ್ಕಟ್ಟಿನ ಪರಿಸ್ಥಿತಿ ಇದೆ. ಸುಪ್ರೀಂಕೋರ್ಟ್ ಹೇಳಿದಂತೆ ನೀರು ಬಿಟ್ಟರೆ ಕುಡಿಯುವ ನೀರಿನ ಹಾಹಾಕಾರ ಎದುರಾಗಲಿದೆ. ಆಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ರಾಜ್ಯದ ಜನ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಾನೂನು ಹೋರಾಟ ಮುಂದುವರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡೋಣʼʼ ಎಂದು ಹೇಳಿದರು.
ಇದನ್ನೂ ಓದಿ: Cauvery Dispute : ಸುಪ್ರೀಂ ಆದೇಶ ಪಾಲಿಸಿದರೆ ಬರಿದಾಗಲಿದೆ KRS; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ, ಎಲ್ಲಿಂದ ತರೋದು ನೀರು?
ಪಾದಯಾತ್ರೆಯಿಂದ ಕಾವೇರಿ ಸಮಸ್ಯೆ ಬಗೆಹರಿಯದು ಎಂದು ಬಿಎಸ್‌ವೈ
ಕಾವೇರಿ ವಿಚಾರದಲ್ಲಿ ಬಿಜೆಪಿ ಹೋರಾಟ ವಿಚಾರದ ಬಗ್ಗೆ ಪ್ರಸ್ತಾಪಿಸಿದಾಗ, ʻʻಹೋರಾಟ ಮಾಡುವುದೇನಿದೆ? ರಾಜ್ಯ ಸರ್ಕಾರ ಕಾನೂನು ಹೋರಾಟ ಮುಂದುವರಿಸಬೇಕು. ರಾಜ್ಯದ ಜನ ಕಾನೂನು ಸುವ್ಯವಸ್ಥೆ ಕಾಪಾಡಬೇಕುʼʼ ಎಂದರು. ಪಾದಯಾತ್ರೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದು ಕೋರ್ಟ್ ಕೆಲಸ ಎಂದರು ಬಿಎಸ್‌ವೈ.
ಬಿಜೆಪಿ ಜತೆ ಮೈತ್ರಿ ಬಗ್ಗೆ ಚರ್ಚೆ ಮಾಡಲು ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ದೆಹಲಿಗೆ ಹೋದ ವಿಚಾರದ ಬಗ್ಗೆ ಕೇಳಿದಾಗ ನನಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿ ಬಗ್ಗೆ ವರಿಷ್ಠರು ನಿರ್ಧಾರ ಮಾಡ್ತಾರೆ ಎಂದರು.