ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation commitee-CWRC) ತಮಿಳುನಾಡಿಗೆ (Tamil Nadu) ಪ್ರತಿದಿನ 1 ಟಿಎಂಸಿ (TMC) ಅಡಿ ನೀರು ಬಿಡಲು ಕರ್ನಾಟಕಕ್ಕೆ (Karnataka) ಸೂಚಿಸಿದೆ. ಕಾವೇರಿ ಬಿಕ್ಕಟ್ಟು (Cauvery Dispute) ಮತ್ತೆ ತಲೆದೋರಿರುವ ಹಿನ್ನೆಲೆಯಲ್ಲಿ ಇಂದು (ಜುಲೈ 14) ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಸರ್ವಪಕ್ಷ ಸಭೆ ಕರೆದಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ 4 ಗಂಟೆಗೆ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ, ಜೆಡಿಎಸ್, ಸರ್ವೋದಯ ಪಕ್ಷದ ನಾಯಕರು ಸೇರಿದಂತೆ ರಾಜ್ಯದ ಕೇಂದ್ರ ಸಚಿವರು, ಕಾವೇರಿ ಕಣಿವೆಯ ಸಂಸದರು, ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ.
ಕಾವೇರಿ ನೀರಾವರಿ ನಿಯಂತ್ರಣ ಸಮಿತಿಯು ಪ್ರತಿದಿನ ತಮಿಳುನಾಡಿಗೆ 1 ಟಿಎಂಸಿ ನೀರು ಬಿಡುಗಡೆಗೆ ಆದೇಶ ನೀಡಿದ್ದು, ಇದಕ್ಕೆ ವಿರೋದ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ನಡೆಯನ್ನು ಚರ್ಚಿಸುವ ನಿಟ್ಟಿನಲ್ಲಿ ಈ ಸಭೆ ಕರೆಯಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಮಳೆ ಕೊರತೆ
ಸದ್ಯಕ್ಕೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಜೂನ್ – ಜುಲೈ ತಿಂಗಳಲ್ಲಿ ಆಗಬೇಕಿದ್ದ ಮಳೆ ಸರಿಯಾಗಿ ಆಗಿಲ್ಲ. ಶೇ. 28ರಷ್ಟು ಮಳೆ ಕೊರತೆ ಎದುರಾಗಿದೆ. ಹೀಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಸಿಡಬ್ಲ್ಯುಆರ್‌ಸಿ ಆದೇಶದ ವಿರುದ್ಧ ಸಿಡಬ್ಲ್ಯುಎಂಎಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಇದೀಗ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಜತೆ ಕೈ ಜೋಡಿಸುವಂತೆ ಪ್ರತಿಪಕ್ಷಗಳಲ್ಲಿ ಮುಖ್ಯಮಂತ್ರಿ ಮನವಿ ಮಾಡಲಿದ್ದಾರೆ. ದೆಹಲಿಯಲ್ಲಿ ನಡೆದಿದ್ದ ನೂತನ ಸಂಸದರ ಸಭೆಯ ವೇಳೆ ಕರ್ನಾಟಕದ ಕಷ್ಟದ ಸಮಯದಲ್ಲಿ ರಾಜ್ಯದ ಹಿತ ಕಾಪಾಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದರು.
ಸದ್ಯ ಮುಂಗಾರು ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವ ಕಾರಣ ಮುಂದೆ ಹೀಗೆ ಮಳೆ ಕೈ ಕೊಟ್ಟರೆ ಸಮಸ್ಯೆ ಆಗಬಹುದು ಎಂದು ರಾಜ್ಯ ಸರ್ಕಾರ ಲೆಕ್ಕಾಚಾರ ಹಾಕಿಕೊಂಡಿದೆ. ಈಗಿನ ಪರಿಸ್ಥಿತಿಯಲ್ಲಿ ನಿರಂತರವಾಗಿ ತಮಿಳುನಾಡಿಗೆ ನೀರು ಬಿಟ್ಟರೆ ಮುಂದೆ ಸಮಸ್ಯೆ ಆಗಲಿದೆ. ಹೀಗಾಗಿ ನಾವು ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನ ತಗೆದುಕೊಂಡಿದ್ದೇವೆ. ಪ್ರತಿಪಕ್ಷಗಳೆಲ್ಲ ಸರ್ಕಾರದ ಪರವಾಗಿ ನಿಲ್ಲಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Cauvery Dispute: ಕರ್ನಾಟಕದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ; ತಮಿಳುನಾಡಿಗೆ CWRC ಚಾಟಿ
ಜತೆಗೆ ಕೇಂದ್ರದ ಬಳಿಗೆ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಪ್ರತಿಪಕ್ಷಗಳ ಸಲಹೆ ಕೇಳಲಿದ್ದಾರೆ. ನೀರು ಬೀಡಲು ಸದ್ಯಕ್ಕೆ ಸಾಧ್ಯವಿಲ್ಲ. ಇದರ ಬಗ್ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಇನ್ನೊಂದು ಕಡೆ ಕೇಂದ್ರ ನೀರಾವರಿ ಸಚಿವರ ಬಳಿಗೂ ನಿಯೋಗ ಕೊಂಡೊಯ್ದು ರಾಜ್ಯದ ವಾಸ್ತವ ಪರಿಸ್ಥಿತಿ ಸಲ್ಲಿಸೋಣ ಎಂದು ಮುಖ್ಯಮಂತ್ರಿ ಪ್ರತಿಪಕ್ಷಗಳ ಬಳಿ ಹೇಳುವ ಸಾಧ್ಯತೆ ಇದೆ. ಮಾತ್ರವಲ್ಲ ಕೇಂದ್ರ ಸಚಿವರು ಸಹ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಂಡಬೇಕು ಎಂದು ಸಿದ್ದರಾಮಯ್ಯ ವಿನಂತಿಸಲಿದ್ದಾರೆ ಎನ್ನಲಾಗಿದೆ.