Site icon Vistara News

Cauvery Dispute : ಮಾಡೋದೆಲ್ಲ ಮಾಡಿ ಬಿಜೆಪಿ ಸಂಸದರನ್ನು ದೂರೋದ್ಯಾಕೆ?; ರಾಜ್ಯ ಸರ್ಕಾರಕ್ಕೆ ಪ್ರಲ್ಹಾದ್‌ ಜೋಶಿ, ಡಿವಿಎಸ್‌ ಕ್ಲಾಸ್‌

Pralhad Joshi Siddaramaiah and DV Sadananda Gowda

ನವದೆಹಲಿ: ಕಳೆದ ಆಗಸ್ಟ್‌ ಅಂತ್ಯದಿಂದಲೇ ತಮಿಳುನಾಡಿಗೆ ಕಾವೇರಿ ನೀರು (Cauvery Dispute) ಬಿಡಲಾಗುತ್ತಿದೆ. ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಸಂತುಷ್ಟಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಂಡ ಬಳಿಕ ಈಗ ಸಭೆ ಕರೆಯಲಾಗಿದೆ. ಇಷ್ಟರ ಮೇಲೆ ಬಿಜೆಪಿ ಸಂಸದರ ಮೇಲೆ ಗೂಬೆ ಕೂರಿಸಲಾಗುತ್ತಿದೆ. ನೀವು ಮಾಡೋದೆಲ್ಲ ಮಾಡಿ ಬಿಜೆಪಿ ಸಂಸದರನ್ನು ದೂರುತ್ತೀರಾ- ಹೀಗೆಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ (Pralhad Joshi) ಮತ್ತು ಮಾಜಿ ಸಚಿವ ಡಿ.ವಿ.ಸದಾನಂದ ಗೌಡ (DV Sadananda Gowda) ಅವರು.

ಬುಧವಾರ ದಿಲ್ಲಿಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ನಡೆದ ರಾಜ್ಯದ ಸರ್ವ ಪಕ್ಷಗಳ ಸಂಸದರ ಸಭೆಯಲ್ಲಿ (All Party MPs Meet) ಮಾತನಾಡಿದ ಇಬ್ಬರು ನಾಯಕರು ಸರಕಾರದ ನಿಲುವುಗಳನ್ನು ಪ್ರಶ್ನೆ ಮಾಡಿದರು. ಪ್ರಲ್ಹಾದ್‌ ಜೋಶಿ ಅವರು ಕಾವೇರಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಹೆಸರನ್ನು ಎಳೆದು ತರಬೇಡಿ ಎಂದು ಕಟುವಾಗಿ ಹೇಳಿದರು. ಉಳಿದ ಮಾತುಗಳನ್ನು ಹೊರಗೆ ಪತ್ರ ಮಾಧ್ಯಮಗಳ ಮುಂದೆ ಹೇಳಿದರು. ಡಿ.ವಿ. ಸದಾನಂದ ಗೌಡ ಅವರಂತೂ ಸಭೆಯಲ್ಲೇ ತಮ್ಮ ಆಕ್ರೋಶ ತೆರೆದಿಟ್ಟರು.

ನೀರು ಬಿಡುವಾಗ ಬಿಜೆಪಿ ಸಂಸದರು ನೆನಪಾಗಲಿಲ್ಲವೇ? ಜೋಶಿ ಪ್ರಶ್ನೆ

ಸಿದ್ದರಾಮಯ್ಯ ಸರ್ಕಾರ ಆಗಸ್ಟ್‌ನಿಂದಲೇ ತಮಿಳುನಾಡಿಗೆ ನೀರು ಬಿಡುತ್ತಿದೆ. ಇಂಡಿಯಾ ಮೈತ್ರಿಕೂಟದ ಭಾಗಿಯಾಗಿರುವ ಡಿಎಂಕೆಯನ್ನು ಸಂತುಷ್ಟಗೊಳಿಸಲು ಸಿದ್ದರಾಮಯ್ಯ ಸರ್ಕಾರ ನೀರು ಬಿಡುತ್ತಿದೆ. ನೀರು ಬಿಡುವಾಗ ಸರ್ಕಾರಕ್ಕೆ ಬಿಜೆಪಿ ಸಂಸದರ ನೆನಪಾಗಲಿಲ್ಲವೇ ಎಂದು ಪ್ರಲ್ಹಾದ್‌ ಜೋಶಿ ಅವರು ಮಾಧ್ಯಮಗಳ ಮುಂದೆ ಪ್ರಶ್ನಿಸಿದರು.

ಸೆಪ್ಟೆಂಬರ್ 13ರಂದು ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ 2,500 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸಲು ಒಪ್ಪಿಕೊಂಡು ಈಗ ಸಭೆ ಕರೆದಿದೆ. ಇದರ ಆರ್ಥವೇನು? ಮಾಡೋದನ್ನೆಲ್ಲ ಮಾಡಿ ಸಂಸದರನ್ನು ದೂರುವುದು ಸರಿಯಲ್ಲ. ಬಿಜೆಪಿ ಸಂಸದರು ನಿಸ್ಸಂದೇಹವಾಗಿ ರಾಜ್ಯ ಸರ್ಕಾರದ ಜೊತೆ ಇದ್ದಾರೆ ಎಂದರು. ಮಂಗಳವಾರ ರಾತ್ರಿ ಡಿಕೆ ಶಿವಕುಮಾರ್ ತಮ್ಮ ಮನೆಗೆ ಬಂದು ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಸಭೆಗಾಗಿ ಮನವಿ ಮಾಡಿದ್ದಾರೆ, ಅದನ್ನು ಏರ್ಪಡಿಸುತ್ತೇನೆ ಎಂದು ಹೇಳಿದರು.

ಸ್ವಲ್ಪ ನೀರು ಬಿಡ್ತೇವೆ ಅಂದರೆ ಆಗುತ್ತದಾ? ಪ್ರಲ್ಹಾದ್‌ ಜೋಶಿ ಪ್ರಶ್ನೆ

ʻʻಕಾವೇರಿ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ದಿನಕ್ಕೆ 2500 ಕ್ಯೂಸೆಕ್‌ ನೀರು ಬಿಡುವುದಾಗಿ ಹೇಳಿದೆ. ಹಾಗಾಗಿ CWMA 5000 ಕ್ಯೂಸೆಕ್ ನೀರು ಬಿಡಲು ಹೇಳಿದೆ. ನೀರಿಲ್ಲ ನಾವು ನೀರು ಬಿಡಲು ಸಾದ್ಯವಿಲ್ಲ ಅಂತ ಸಭೆಯಲ್ಲಿ ಹೇಳಬೇಕಿತ್ತು. ಸ್ವಲ್ಪ ನೀರು ಬಿಡ್ತಿವಿ ಅಂತ ಹೇಳಿದ್ಮೇಲೆ ಮತ್ತೇನಾಗುತ್ತದೆʼʼ ಎಂದು ಸರ್ಕಾರ ನೀರು ಬಿಡುವ ಬಗ್ಗೆ ನೀಡಿರುವ ದಾಖಲೆ ಸಮೇತ ಮಾಹಿತಿ ನೀಡಿದರು ಪ್ರಲ್ಹಾದ್ ಜೋಶಿ.

ʻʻಕರ್ನಾಟಕ ಹಿತಕಾಪಾಡುವಲ್ಲಿ ನಮ್ಮ ಬದ್ಧತೆ ಇದೆ. ಮೊದಲು ನೀರು ಹರಿಸಿ ಈಗ ಸಭೆ ಮಾಡುವುದು ಸರಿಯಲ್ಲ. ಮೈತ್ರಿ ಗಟ್ಟಿಗೊಳಿಸಲು ನೀರು ಹರಿಸಲಾಗಿದೆ. ಈಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗಬಾರದು ಎಂದು ಹೇಳಿದ್ದೇನೆʼʼ ಎಂದು ವಿವರಿಸಿದರು ಪ್ರಲ್ಹಾದ್‌ ಜೋಶಿ.

ʻʻನೀವು ಮೊದಲು ನೀರು ಹರಿಸುವಾಗ ಯಾರನ್ನು ಕೇಳಿದ್ರಿ? ಆಗ ನಿಮಗೆ ಸಂಸದರ ನೆನಪು ಆಗಲಿಲ್ವಾ‌.? ಈ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದ್ದೇನೆ. ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ನಮ್ಮಲ್ಲಿ ನೀರು ಇಲ್ಲ ಎಂದು ಅಫಿಡವಿಟ್ ಹಾಕ್ತಾರೆ. ಮತ್ತೆ ಯಾವುದೋ ಒತ್ತಡದಲ್ಲಿ ನೀರು ಹರಿಸ್ತಾರೆʼʼ ಎಂದು ಹೇಳಿದರು.

ʻʻಸಂಸದರು ಏನೂ ಮಾಡಿಲ್ಲ ಎನ್ನುವುದು ತಪ್ಪು. ರಾಜಕೀಯ ಮಾಡಬಾರದು. ಇದರಲ್ಲಿ ರಾಜಕೀಯಕ್ಕೋಸ್ಕರ ಪ್ರಧಾನಿ ಮಂತ್ರಿ ಜೊತೆ ಮಾತಾಡುತ್ತೇವೆ ಅಂತ ಹೇಳೋಕೆ ಆಗಲ್ಲ. ತಮಿಳುನಾಡು ಸಿಎಂ ಅವರನ್ನು ತಬ್ಬಿಕೊಂಡು ಸಭೆ ಮಾಡಿದವರು ಯಾರು..? ಆಗ ಕೇಳದವರು ಈಗ ಕೇಂದ್ರವನ್ನು ಕೇಳ್ತಿದ್ದಾರೆʼʼ ಎಂದು ಜೋಶಿ ಹೇಳಿದರು.

ಇದನ್ನೂ ಓದಿ: Cauvery Dispute : ಮೋದಿ ಮಧ್ಯಪ್ರವೇಶಕ್ಕೆ ಮನವಿ, CWMA ಆದೇಶಕ್ಕೆ ತಡೆ ಕೋರಿ ಸುಪ್ರೀಂಗೆ ಅರ್ಜಿ; ಸಿಎಂ ಸಿದ್ದರಾಮಯ್ಯ

ನೀರು ಖಾಲಿಯಾದ ಮೇಲೆ ಮಾತನಾಡಿದರೆ ಏನುಪಯೋಗ?: ಡಿವಿಎಸ್‌ ಪ್ರಶ್ನೆ

ʻʻನೀವು ಮೊದಲೇ ಎಲ್ಲಾ ನೀರನ್ನು ಬಿಟ್ಟು ಈಗ ನೀರು ಖಾಲಿಯಾದ ಮೇಲೆ ನಮ್ಮನ್ನು ಕರೆದು ಮಾತನಾಡಿದರೆ ಏನು ಉಪಯೋಗ? ಮುಂದಾಲೋಚನೆ ಮಾಡದೆ ಸರ್ಕಾರ ನೀರು ಬಿಡುವ ನಿರ್ಧಾರವನ್ನು ಕೈಗೊಂಡು ನೀರನ್ನ ಬಿಟ್ಟು, ಈಗಲೂ ಮತ್ತೆ ತಾತ್ಕಾಲಿಕವಾದ ಪರಿಹಾರ ಹುಡುಕೋ ಕೆಲಸ‌ ಮಾಡುತ್ತಿದೆʼʼ ಎಂದು ಮಾಜಿ ಕೇಂದ್ರ ಸಚಿವರ ಡಿ.ವಿ. ಸದಾನಂದ ಗೌಡ ಹೇಳಿದರು.

ʻʻಸರ್ಕಾರ ಈ ಮೊದಲೇ ಸಭೆ ಕರೆದು ನಿರ್ಧಾರ ಮಾಡಬೇಕಿತ್ತು. ನೆಲಜಲದ ವಿಚಾರದಲ್ಲಿ ನಾವೆಲ್ಲರೂ ಸದಾ ಸರ್ಕಾರದ ಪರ ನಿಲ್ಲುತ್ತೇವೆ. ಆದರೆ ಸರ್ಕಾರದ ದೂರ ದೃಷ್ಟಿ ಇಲ್ಲದ ನಿರ್ಧಾರಕ್ಕೆ ಬೇಸರವಾಗಿದೆʼʼ ಎಂದರು ಸದಾನಂದ ಗೌಡ.

ʻʻಪ್ರತಿ ಬಾರಿ ಸದನ ನಡೆದಾಗ‌ ಸರ್ಕಾರ ಸಂಸದರ ಸಭೆ ಕರೆಯಬೇಕು. ರಾಜ್ಯದ ವಿಚಾರ ಚರ್ಚೆ ಮಾಡಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳಬೇಕು. ತಮಿಳುನಾಡು ಸರ್ಕಾರ ಇದನ್ನೇ ಮಾಡುತ್ತದೆʼʼ ಎಂದು ಡಿ.ವಿ.ಎಸ್‌ ಸಲಹೆ ನೀಡಿದರು. ರಾಜ್ಯದ‌ ವಿಚಾರದಲ್ಲಿ ರಾಜಕೀಯ ಮಾಡೊದು ಬೇಡ ಎಂದು ಕಿವಿಮಾತು ಹೇಳಿದರು.

Exit mobile version