ನವದೆಹಲಿ: ನಾನು ಮಾಜಿ ಪ್ರಧಾನಿಯಾಗಿ ಸುಪ್ರೀಂ ಕೋರ್ಟ್ ತೀರ್ಪಿನ (Supreme court order) ಬಗ್ಗೆ ಜಾಸ್ತಿ ಮಾತನಾಡಲ್ಲ. ಆದರೆ, ಒಂದು ಸಲಹೆ ಕೊಡುತ್ತೇನೆ. ಕಾವೇರಿ ನೀರಿನ ವಾಸ್ತವ (Realistic state of Cauvery water) ಏನು ಎಂಬುದನ್ನು ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಸೇರದ (Cauvery Dispute) ಅಧಿಕಾರಿಗಳ ತಂಡದಿಂದ ಅಧ್ಯಯನ ಮಾಡಿ (Officials out of Both states) ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ (HD Devegowda) ಹೇಳಿದ್ದಾರೆ.
ಶುಕ್ರವಾರ ದಿಲ್ಲಿಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾನು ರಾಜ್ಯಸಭೆಯಲ್ಲಿ ಕಾವೇರಿ ವಿಷಯ ಪ್ರಸ್ತಾಪ ಮಾಡಿದ್ದನ್ನು ನೆನಪಿಸಿಕೊಂಡರು. ಇದುವರೆಗೆ ಏನೇ ತಪ್ಪುಗಳಾಗಿದ್ದರೂ ತಾನು ರಾಜ್ಯ ಸರ್ಕಾರ ಇಡುವ ಮುಂದಿನ ಹೆಜ್ಜೆಗಳಿಗೆ ಬೆಂಬಲ ನೀಡುವುದಾಗಿ ಹೇಳಿದರು.
ಅಧಿಕಾರಿಗಳು ವರ್ಚ್ಯುವಲ್ ಆಗಿ ಮಾತನಾಡಿದರೆ ಆಗುತ್ತದಾ?
ಕಾವೇರಿ ವಿಚಾರ ಎನ್ನುವುದು ತುಂಬ ಸೂಕ್ಷ್ಮ. ಆದರೆ, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರ ಸಭೆ ನಡೆದಾಗಲೆಲ್ಲ ನಮ್ಮ ಅಧಿಕಾರಿಗಳು ಬೆಂಗಳೂರಿನಿಂದಲೇ ವರ್ಚ್ಯುವಲ್ ಆಗಿ ಭಾಗವಹಿಸುತ್ತಿದ್ದರು. ಹೀಗೆ ಮಾಡಿದರೆ ಆಗುತ್ತದಾ? ಈ ವಿಚಾರವನ್ನು ಎಚ್.ಡಿ ಕುಮಾರಸ್ವಾಮಿ ಅವರು ಆಗಲೇ ಸರ್ವ ಪಕ್ಷ ಸಭೆಯಲ್ಲೇ ಹೇಳಿದ್ದಾರೆ ಎಂದು ಹೇಳಿದ ಎಚ್.ಡಿ ದೇವೇಗೌಡರು, ನೀವು ವಾಸ್ತವಾಂಶ ಸರಿಯಾಗಿ ತಿಳಿಸದೆ ಸಂಕಷ್ಟ ಸಿಲುಕಿದ್ದೀರಿ ಎನ್ನುವುದನ್ನೂ ಕುಮಾರಸ್ವಾಮಿ ಹೇಳಿದ್ದಾರೆ ಎಂದರು.
ನಂಗೆ ಏಳೋದಕ್ಕೇ ಆಗುತ್ತಿರಲಿಲ್ಲ. ಆದರೂ ಎದ್ದು ಮಾತನಾಡಿದ್ದೇನೆ
ರಾಜ್ಯದ ಅಧಿಕಾರಿಗಳು ವರ್ಚುವಲ್ ಮುಖಾಂತರ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ದೇವೇಗೌಡರು, ನೋಡಿ ನನಗೆ ಏಳೋದಕ್ಕೂ ಆಗುತ್ತಿರಲಿಲ್ಲ. ಆದರೂ ಸೆ. 17ರಂದು ಬೆಂಗಳೂರಿನಿಂದ ದೆಹಲಿಗೆ ರಾಜ್ಯ ಸಭೆ ಕಲಾಪದಲ್ಲಿ ಭಾಗವಹಿಸಲು ಬಂದೆ. ಮಂಡಿ ನೋವಿನ ಹಿನ್ನಲೆಯಲ್ಲಿ ರಾಜ್ಯಸಭೆಯಲ್ಲಿ ಮುಂದೆ ಕೂರಲು ಆಗದೆ ಹಿಂದೆ ಕುಳಿತಿದ್ದೆ. ನನಗೆ ಏಳುವುದೇ ಕಷ್ಟವಾದರೂ ಕಾವೇರಿ ವಿಷಯ ಬಂದಾಗ ಹೌಸ್‌ನಲ್ಲಿ ಎದ್ದುನಿಂತು ಮಾತನಾಡಿದ್ದೇನೆ. ಕಾವೇರಿ ವಿಚಾರವಾಗಿ ವಸ್ತುಸ್ಥಿತಿ ಅರಿಯಲು ಬೇರೆ ರಾಜ್ಯದ ಅಧಿಕಾರಗಳನ್ನು ಕಳಿಸುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಹಿಂದಿನ ಹಾಗೇ ಸಹಕಾರ ಕೊಡುತ್ತೇನೆ ಎಂದು ಹೇಳಿದ್ದೇನೆ
ʻʻಕಾವೇರಿ ವಿಷಯದ ಬಗ್ಗೆ ಬೆಂಗಳೂರಿನಲ್ಲಿದ್ದಾಗಲೇ ಕೋಲಾರದ ಎಂಎಲ್‌ಸಿಯನ್ನು ಕಳುಹಿಸಿದ್ದರು. ಸರ್ವಪಕ್ಷ ಸಭೆಗೆ ಬನ್ನಿ ಸಲಹೆ ಕೊಡಿ ಎಂದು ಹೇಳಿದರು. ನಾನು ಈಗ ಬರುವ ಸ್ಥಿತಿಯಲ್ಲಿಲ್ಲ. ಹಿಂದೆ ಹೇಗೆ ಸಹಕಾರ ಕೊಟ್ಟಂತೆ ಸಹಕಾರ ಕೊಡ್ತೀನಿ ಎಂದು ಹೇಳಿದ್ದೆ. ಮೊನ್ನೆ ಕೂಡ ಇಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಹೋಗುವ ಸ್ಥಿತಿಯಲ್ಲಿರಲಿಲ್ಲ. ಪ್ರಜ್ವಲ್ ರೇವಣ್ಣ ಆ ಸಭೆಗೆ ಹೋಗಿದ್ದರು. ಅದರಲ್ಲಿ ಏನ್ ಚರ್ಚೆ ಆಗಿದೆಯೋ ಗೊತ್ತಿಲ್ಲ. ಇದರಲ್ಲಿ ನಮ್ಮ ವಿಶೇಷ ಭಿನ್ನಾಭಿಪ್ರಾಯ ಇಲ್ಲʼʼ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ರಾಜ್ಯಸಭೆಯಲ್ಲಿ ಕಾವೇರಿ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಲಿಲ್ಲವಲ್ಲ ಎಂಬ ಪ್ರಶ್ನೆಗೆ ʻʻಈ ಬಗ್ಗೆ ನನ್ನ ಬಾಯಲ್ಲಿ ಏನೇನು ಹೇಳಿಸಬೇಡಿ. ಅವರೊಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರುʼʼ ಎಂದಷ್ಟೇ ಹೇಳಿದರು ದೇವೇಗೌಡರು.
1995ರಲ್ಲೇ ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ ತಂದಿದ್ದೆ
ಮಹಿಳಾ ಮೀಸಲಾತಿ ಹಾಗೂ ಕಾವೇರಿ ವಿಚಾರವಾಗಿ ಕಲಾಪದಲ್ಲಿ ಮಾತನಾಡಿದ್ದೇನೆ. 1995ರಲ್ಲಿ ನಾನೇ ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ ತಂದಿದ್ದೆ ಎಂದು ದೇವೇಗೌಡರು ನೆನಪಿಸಿಕೊಂಡರು.
ಮೈತ್ರಿ ವಿಚಾರದಲ್ಲಿ ನಾನು ಏನನ್ನೂ ಮಾತಾಡೋಲ್ಲ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವನ್ನು ಕೇಳಿದಾಗ, ಮೈತ್ರಿ ವಿಚಾರದಲ್ಲಿ ನಾನು ಏನನ್ನೂ ಮಾತಾಡೋಲ್ಲ. ನಾನು ಮೊದ್ಲೇ ಹೇಳಿದ್ದೆ. ಮೈತ್ರಿ ವಿಚಾರದ ಬಗ್ಗೆ ನಾನು ಯಾವುದೇ ರಿಯಾಕ್ಷನ್ ಕೊಡೋಲ್ಲ. ಆ ಬಗ್ಗೆ ಮಾತಾಡೋಕೆ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಈ ಬಗ್ಗೆ ಎಲ್ಲಾ ತೀರ್ಮಾನ ಮಾಡ್ತಾರೆ. ಹೋರಾಟ ಮಾಡ್ತಾ ಇರೋದು ಕುಮಾರಸ್ವಾಮಿ. ನನಗೆ ಈ ವಿಚಾರ ಮಾತಾಡೋ ಮನಸ್ಸಿಲ್ಲ ಎಂದರು.