ಬೆಂಗಳೂರು: “ಕೆಆರ್‌ಎಸ್ ಅಣೆಕಟ್ಟಿನ (KRS Dam) ಬೀಗ ನಮ್ಮ ಕೈಯಲ್ಲಿ ಇಲ್ಲ? ಅದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಈ ಕಾನೂನು ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಅವರಿಗೆ ಗೊತ್ತಿಲ್ಲವೆ? ರಾಜಕಾರಣ ಯಾವ ವಿಚಾರದಲ್ಲಿ ಮಾಡಬೇಕೊ ಅದರಲ್ಲಿ ಮಾಡಬೇಕು, ಎಲ್ಲಾ ವಿಚಾರದಲ್ಲೂ ಅಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ವಾಗ್ದಾಳಿ ನಡೆಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಸಿಎಸ್‌ಆರ್ ಅನುದಾನ ಸದ್ಬಳಕೆ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳು, ‘ಸರ್ಕಾರ ರಾಜ್ಯದ ರೈತರ ಹಿತ ಮರೆತು ತಮಿಳುನಾಡಿಗೆ ಕಾವೇರಿ ನೀರು (Cauvery dispute) ಹರಿಸಿದೆ’ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರ ಟೀಕೆ ಕುರಿತು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ತಮಿಳುನಾಡಿಗೆ ನೀರು ಬಿಡುವವರು ನಾವಲ್ಲ. ಅದರ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ. ಈ ಬಗ್ಗೆ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೇ?
ʻʻರಾಜ್ಯದ ರೈತರ ಹಿತ ಕಾಪಾಡುವುದಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈ ಕಾರಣಕ್ಕೆ ಈಗಾಗಲೇ ನಾನು ಸಚಿವನಾದ ಬಳಿಕ 2 ಬಾರಿ ಬೆಳೆಗಳಿಗೆ ನೀರು ಹರಿಸಲು ಅನುಮತಿ ನೀಡಿದ್ದೇನೆ. ತಮಿಳುನಾಡಿನವರು 27 ಟಿಎಂಸಿ ನೀರು ಕೇಳಿದ್ದಾರೆ, ಅವರು ಕೇಳಿದಷ್ಟು ನೀರು ಕೊಟ್ಟಿಲ್ಲ. ನಾವು ನಮಗೆ ಇಚ್ಛೆ ಬಂದಂತೆ ವರ್ತಿಸಿದರೆ ಕೋರ್ಟ್ ಕೇಳಬೇಕಲ್ಲ. ತಮಿಳುನಾಡು ಇತ್ತೀಚೆಗೆ ನಡೆದ ಕಾವೇರಿ ಟ್ರಿಬ್ಯುನಲ್ ಸಭೆಯನ್ನು ಬಹಿಷ್ಕರಿಸಿ ಹೋಗಿದ್ದಾರೆ ಅವರು, ಹೀಗೆ ಸಂಘರ್ಷ ಮಾಡಿಕೊಂಡು ಇರಲು ಆಗುತ್ತದೆಯೇ? ಸರ್ಕಾರ ನಡೆಸುವವರು ಎಲ್ಲಾ ರೀತಿಯಲ್ಲೂ ಆಲೋಚನೆ ಮಾಡಬೇಕು. ನಾವು ಕಾನೂನು ತಜ್ಞರ ಸಲಹೆ ಕೇಳಿ ಅದರ ಅನುಗುಣವಾಗಿ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ ಇನ್ನಷ್ಟು ದೊಡ್ಡ ನಷ್ಟವನ್ನು ನಾವು ಅನುಭವಿಸಬೇಕಾಗುತ್ತದೆ.” ಎಂದು ಡಿ.ಕೆ. ಶಿವಕುಮಾರ್.
ರೈತರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, “ಪ್ರತಿಭಟನೆ ಮಾಡುತ್ತಿರುವವರು ನಮ್ಮ ರೈತರೇ, ಪ್ರತಿಭಟನೆ ಅವರ ಹಕ್ಕು. ಆದರೆ ಸುಪ್ರಿಂ ಕೋರ್ಟ್ ನಮ್ಮ ಮಾತು ಕೇಳಬೇಕಲ್ಲ. ರೈತರಿಗೂ ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಹಿಂದೆಯೂ ಅನೇಕ ಬಾರಿ ಕಾನೂನು ಹೋರಾಟ ನಡೆದಿದೆ.
ಕಳೆದ 30-40 ವರ್ಷಗಳಲ್ಲಿ ಈ ವರ್ಷ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಇಂತಹ ಸಂಕಷ್ಟದ ಕಾಲದಲ್ಲೂ ನಾವು ನಮ್ಮ ರಾಜ್ಯದ ರೈತರ ಪರವಾಗಿಯೂ ಇದ್ದೇವೆ ಹಾಗೂ ಕಾನೂನಿಗೂ ಗೌರವ ನೀಡುತ್ತಿದ್ದೇವೆ ಎನ್ನುವ ಕಾರಣಕ್ಕೆ ನೀರು ಬಿಡುಗಡೆ ಮಾಡಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: Commission Politics : ಗುತ್ತಿಗೆದಾರರ ಬಿಲ್ ಕೊಡದಿದ್ರೆ ಕಾಂಗ್ರೆಸ್‌ಗೆ ಗಂಡಾಂತರ; ಬೆಂಗಳೂರು ಶಾಸಕರ ವಾರ್ನಿಂಗ್!
ನಾನು 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ
“ಸಿಎಸ್‌ಆರ್ ಹಣದ ಮೂಲಕ ನೂತನ ಶಾಲೆಗಳನ್ನು ನಿರ್ಮಾಣ ಮಾಡಬೇಕು ಹಾಗೂ ಸದ್ಬಳಕೆ ಹೇಗೆ ಮಾಡಬೇಕು ಎಂಬುದಾಗಿ ಸರ್ಕಾರ ಯೋಜನೆ ರೂಪಿಸುತ್ತಿದೆ. ನನ್ನದೂ 3 ಶಿಕ್ಷಣ ಸಂಸ್ಥೆಗಳಿದ್ದು ಪಂಚಾಯಿತಿ ಮಟ್ಟದಲ್ಲಿ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದರು.
“ಸಿಎಸ್‌ಆರ್ ಹಣವು ಕೇವಲ ನಗರೀಕರಣಕ್ಕೆ ಮಾತ್ರ ಬಳಕೆಯಾಗುತ್ತಿದೆ, ಇದನ್ನು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಬೇಕು ಎಂಬುದು ನಮ್ಮ ಆಶಯ, ಪ್ರತಿ ಪಂಚಾಯಿತಿಯಲ್ಲಿ 3 ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಕನಸಾಗಿದೆ ಅದಕ್ಕೆ ಹಣದ ಸದ್ಬಳಕೆ ಕುರಿತು ಸಭೆ ನಡೆಸಲಾಯಿತು” ಎಂದು ಮಾಹಿತಿ ನೀಡಿದರು.
ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶಾಲೆಯ ಅಧ್ಯಾಪಕರನ್ನೇ ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸಿ ಪಾಠ ಮಾಡಬೇಕು. ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನಮ್ಮ ಕರ್ನಾಟಕದ ಪ್ರತಿ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು. ಎಂಬುದು ನಮ್ಮ ಸರ್ಕಾರದ ಮಹತ್ವದ ಯೋಚನೆ ಮತ್ತು ಯೋಜನೆ” ಎಂದು ಹೇಳಿದರು.