Site icon Vistara News

Cauvery Dispute : ಕಾವೇರಿ ನೀರು ಬಿಟ್ಟು INDIA ಬಲಪಡಿಸಲು ಸಿದ್ದರಾಮಯ್ಯ, ಡಿಕೆಶಿ ಸಂಚು; ಬಿಎಸ್‌ವೈ ಆರೋಪ

BS Yediyurappa

ಬೆಂಗಳೂರು: ರಾಜ್ಯದ ಜನರು ನೀರಿಲ್ಲದೆ ತತ್ತರಿಸುತ್ತಿದ್ದರೂ ತಮಿಳುನಾಡಿಗೆ ನೀರು ಹರಿಸುವ (Releasing water to Tamilnadu) ರಾಜ್ಯ ಸರ್ಕಾರದ (Karnataka Government) ಕ್ರಮದ ಹಿಂದೆ ಇಂಡಿಯಾ ಒಕ್ಕೂಟವನ್ನು (India Bloc) ಬಲಗೊಳಿಸುವ ಹುನ್ನಾರವಿದೆ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಇರುವುದರಿಂದ ‘ಇಂಡಿಯಾ ಒಕ್ಕೂಟ’ವನ್ನು ಬಲಪಡಿಸಲು ನಿತ್ಯ 5 ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ಕರ್ನಾಟಕದಿಂದ ಬಿಡಲಾಗುತ್ತಿದೆ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೊದಲೇ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಬೇಕಿತ್ತು.
ಸುಪ್ರೀಂ ಕೋರ್ಟನ್ನು ಅಪ್ರೋಚ್ ಮಾಡದೆ ತಮಿಳುನಾಡನ್ನು ತೃಪ್ತಿಪಡಿಸಲು ನೀರು ಹರಿಸಿರುವುದು ಅಕ್ಷಮ್ಯ ಅಪರಾಧ. ಸುಪ್ರೀಂ ಕೋರ್ಟಿಗೆ ಈ ವಿಚಾರವನ್ನು ಮನವರಿಕೆ ಮಾಡುವಲ್ಲಿ ಈ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಯಡಿಯೂರಪ್ಪ ಆಕ್ಷೇಪಿಸಿದರು.

ʻʻಕಾವೇರಿ ಸಂಕಷ್ಟವನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಬೇಕಾದುದು ಅತ್ಯಂತ ಅವಶ್ಯಕ. ಇದನ್ನು ಸರಕಾರ ಮಾಡುತ್ತಿಲ್ಲ. ತಮಿಳುನಾಡಿನಲ್ಲಿ ಕಾವೇರಿ ನೀರನ್ನು ನಂಬಿ ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿದೆ. ಕಾಯ್ದೆ ಪ್ರಕಾರ 1.08 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬಹುದು. ಆದರೆ, 3.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇಷ್ಟು ಪ್ರದೇಶಕ್ಕೆ ನೀರು ಕೊಡಲು ಅಸಾಧ್ಯ ಎಂದು ರಾಜ್ಯ ಸರಕಾರವು ಸುಪ್ರೀಂ ಕೋರ್ಟಿಗೆ ಅರ್ಥ ಮಾಡಿಸಬೇಕಿದೆ. ಆದರೆ, ಅದರಲ್ಲಿ ವಿಫಲವಾಗಿದೆʼʼ ಎಂದು ನುಡಿದರು.

ಇದನ್ನೂ ಓದಿ: Cauvery Dispute : ಕಾವೇರಿ ಕೊಳ್ಳದಲ್ಲಿ ಜನಜಾಗೃತಿ ಯಾತ್ರೆಗೆ ಬಿಜೆಪಿ ನಿರ್ಧಾರ; ಕೇಂದ್ರಕ್ಕೆ ಪತ್ರ ಬರೆದ ಸಿಎಂ ಮೇಲೆ ಸಿಟ್ಟು

ತಮಿಳುನಾಡಿನಲ್ಲಿ ಕುರುವೈ ಬೆಳೆಯನ್ನು ಹಿಂದೆಂದಿಗಿಂತ ಹೆಚ್ಚು ಬೆಳೆಯಲಾಗುತ್ತಿದೆ. ರಾಜ್ಯದ ರೈತರ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ ಎಂದರಲ್ಲದೆ, ಸುಪ್ರೀಂ ಕೋರ್ಟಿನ ಮುಂದೆ ಸಮರ್ಪಕ ವಾದ ಮಂಡಿಸಿ ರಾಜ್ಯದ ಹಿತವನ್ನು ಕಾಪಾಡಲು ಆಗ್ರಹಿಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ವೈಫಲ್ಯವನ್ನು ಖಂಡಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರು

ಸೆ. 21ರ ಸುಪ್ರೀಂ ವಿಚಾರಣೆ ಗಮನಿಸಿ ಕಾವೇರಿ ಹೋರಾಟ ಎಂದ ಬೊಮ್ಮಾಯಿ

ಕಾವೇರಿ ಜಲಾನಯನ ಪ್ರದೇಶದ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಮತ್ತು ಹಾಸನ ಜಿಲ್ಲೆಗಳ ಎಲ್ಲ ತಾಲ್ಲೂಕುಗಳಲ್ಲಿ ಕಾವೇರಿ ಜನಜಾಗೃತಿ ಯಾತ್ರೆಯನ್ನು ಕೈಗೊಳ್ಳಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಮಾಧ್ಯಮ ಗೋಷ್ಠಿಯಲ್ಲಿ ಪ್ರಕಟಿಸಿದರು.

ಸೆ. 21ರ ಸುಪ್ರೀಂ ಕೋರ್ಟ್ ತೀರ್ಪಿನ ಸಂಬಂಧ ಸರಕಾರದ ನಡೆಯನ್ನು ಕಾದು ನೋಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಜನಜಾಗೃತಿ ಯಾತ್ರೆಯನ್ನು ಮಾಡುತ್ತೇವೆ. ಪಾದಯಾತ್ರೆ, ಧರಣಿ, ಸತ್ಯಾಗ್ರಹದ ರೂಪದಲ್ಲಿ ಹೋರಾಟ ಇರಲಿದೆ ಎಂದರು. ಹೋರಾಟದ ಮುಂದಿನ ರೂಪುರೇಷೆಯನ್ನು 21ರಂದು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡದೆ ಇರಲು ನಾವು ನಿರ್ಧರಿಸಿದ್ದೆವು. ಆದರೆ, ಸುಪ್ರೀಂ ಕೋರ್ಟಿನಲ್ಲಿ ಪ್ರಕರಣ ಇರುವಾಗ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಮಾತುಕತೆಗೆ ಕೋರಿದ್ದಾರೆ. ಮಾತುಕತೆಗೆ ತಮಿಳುನಾಡು, ಕೇರಳ, ಪಾಂಡಿಚೇರಿ ಬರುವುದೇ? ಇದೆಲ್ಲ ಅವರಿಗೆ ಗೊತ್ತಿದ್ದರೂ ಕೂಡ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯದ ನೀರಿನ ಹಕ್ಕನ್ನು ರಕ್ಷಿಸಲು ಈ ರಾಜ್ಯ ಸರಕಾರಕ್ಕೆ ಬದ್ಧತೆ, ದಕ್ಷತೆ ಮತ್ತು ಯೋಗ್ಯತೆ ಇಲ್ಲ ಎಂದು ಆಕ್ಷೇಪಿಸಿದರು.

Exit mobile version