Site icon Vistara News

Cauvery water dispute : ಡಿಎಂಕೆ ಏಜೆಂಟ್‌ ಆಗಿರುವ ಕಾಂಗ್ರೆಸ್‌; ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಗುಡುಗು

BJP and JDS Protest in vidhanasoudha against congress Government

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಬಿಜೆಪಿ – ಜೆಡಿಎಸ್‌ ನಾಯಕರು (BJP JDS leaders) ಜಂಟಿಯಾಗಿ ಬುಧವಾರ (ಸೆಪ್ಟೆಂಬರ್‌ 27) ಅಖಾಡಕ್ಕೆ ಇಳಿದಿದ್ದು, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ. ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್.‌ ಯಡಿಯೂರಪ್ಪ (Former Chief Minister BS Yediyurappa), ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former Chief Minister and JDS Legislature Party leader HD Kumaraswamy) ವಿಧಾನಸೌಧದಲ್ಲಿ ಗುಡುಗಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಮೊದಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ (Tamil Nadu Chief Minister Stalin) ಜತೆ ಹೋಗಿ ಮಾತುಕತೆ ನಡೆಸಲಿ. ರಾಜ್ಯದ ಸಂಕಷ್ಟದ ಬಗ್ಗೆ ಮನವರಿಕೆ ಮಾಡಲಿ ಎಂದು ಸಲಹೆ ನೀಡಿದ್ದಾರೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ ಬಿ.ಎಸ್.‌ ಯಡಿಯೂರಪ್ಪ ಗುಡುಗಿದ್ದಾರೆ.

ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯಿಂದ ನಡೆದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ತಮಿಳುನಾಡಿನ ಜತೆ ಒಳ್ಳೆಯ ಸಂಬಂಧ ಇರುವ ಸಿಎಂ, ತಕ್ಷಣ ಅಲ್ಲಿನ ಸಿಎಂ ಜತೆ ಮಾತನಾಡಬೇಕು. ಡಿ.ಕೆ. ಶಿವಕುಮಾರ್ ಅವರು, ನಮ್ಮಲ್ಲಿ ಹೆಚ್ಚುವರಿ ನೀರು ಇದೆ ಎಂದು ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಅವರ ಜತೆ ಮಾತನಾಡದೆ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಮಾತುಕತೆಯಲ್ಲಿ ಇವರಿಗೆ ಯಾವುದೇ ಆಸಕ್ತಿ ಇಲ್ಲ. ಅದರ ಬದಲಿಗೆ ನಮ್ಮ ಬಳಿ ಹೆಚ್ಚುವರಿ‌ ನೀರಿದೆ ಎಂಬ ಅರ್ಥ ಬರುವಂತೆ ಡಿಕೆಶಿ ಮಾತಾಡಿರೋದು ಎಷ್ಟು ಸರಿ ಅಂತ ಅವರಿಗೆ ಅವರೇ ಪ್ರಶ್ನೆ ಮಾಡಿಕೊಳ್ಳಲಿ. ಇಂಥ ಸಂದರ್ಭದಲ್ಲಿ ತಮ್ಮ ನಿಲುವು ಸ್ಪಷ್ಟವಾಗಿ ತಿಳಿಸುತ್ತಿಲ್ಲ. ಇಂತಹ ಮಾತು ಬಿಟ್ಟು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಿತ್ತು. ಇದನ್ನು ನಾನು ಖಂಡಿಸುತ್ತೇನೆ ಎಂದು ಬಿ.ಎಸ್.‌ ಯಡಿಯೂರಪ್ಪ ಹೇಳಿದರು.

ಸುಪ್ರೀಂ ಕೋರ್ಟ್ (Supreme Court) ಮುಂದೆ ವಾದ ಮಾಡಿ ತಜ್ಞರ ಸಮಿತಿ ಕಳುಹಿಸಿಕೊಡುವಂತೆ ಮನವರಿಕೆ ಮಾಡಿಕೊಡಲಿ. ತಜ್ಞರ ಸಮಿತಿ ಕಳುಹಿಸಿಕೊಟ್ಟು ವಾಸ್ತವಾಂಶ ತಿಳಿದುಕೊಳ್ಳುವ ಕೆಲಸ ಮಾಡಲಿ. ಇದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ರಾಜಕೀಯ ದೊಂಬರಾಟ‌ ಮಾಡುತ್ತಿದೆ, ಇದನ್ನು ಖಂಡಿಸುತ್ತೇನೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು (Congress Government) ಡಿಎಂಕೆ ಏಜೆಂಟರಂತೆ ವರ್ತಿಸುತ್ತಿದೆ. ಡಿಎಂಕೆ ಜತೆ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದು ಬಿ.ಎಸ್.‌ ಯಡಿಯೂರಪ್ಪ ಟೀಕಿಸಿದರು.‌

ರಾಜ್ಯದ ಜನರು ಬೀದಿಗಿಳಿದು ಹೋರಾಡುತ್ತಿದ್ದು, ಬಿಜೆಪಿ- ಜೆಡಿಎಸ್ ಇದಕ್ಕೆ ಎಲ್ಲ ರೀತಿಯ ಬೆಂಬಲ ಕೊಡುತ್ತದೆ ಎಂದು ಬಿ.ಎಸ್.‌ ಯಡಿಯೂರಪ್ಪ ಪ್ರಕಟಿಸಿದರು. ಈಗಲಾದರೂ ಇದನ್ನು ಸರಿಪಡಿಸಿ. ಇಲ್ಲವಾದರೆ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ‌ಬಿ.ಎಸ್.‌ ಯಡಿಯೂರಪ್ಪ ಎಚ್ಚರಿಸಿದರು.

ನಾಡಿಗೆ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ: ಎಚ್.ಡಿ.‌ ಕುಮಾರಸ್ವಾಮಿ

ನಾಡಿಗೆ ದ್ರೋಹ ಬಗೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಕಿಡಿಕಾರಿದರು.

ನಮ್ಮ ನಾಡಿನ ರೈತರ ಕುರಿತು ಈ ಸರ್ಕಾರ ನಿರ್ಲಕ್ಷ್ಯ ತೋರಿದೆ. ಸರ್ಕಾರವು ಕಾವೇರಿ ವಿಚಾರದಲ್ಲಿ ನಿರಂತರವಾಗಿ ಎಡವಿದೆ. ಇದು ಖಂಡನೀಯ. ನೀರಿನ ಲಭ್ಯತೆಗೆ ಅನುಗುಣವಾಗಿ ಕಾವೇರಿ ನೀರು ಬಿಡುವ ಕುರಿತು ನಿರ್ಧಾರ ಆಗಬೇಕು. ಪ್ರಾಧಿಕಾರದ ಮುಂದೆ ವಾಸ್ತವಾಂಶಗಳನ್ನು ಇಟ್ಟು ಎರಡೂ ರಾಜ್ಯಗಳಿಗೆ ಅನ್ಯಾಯ ಆಗದಂತೆ ಪರಿಹಾರ ಲಭಿಸಬೇಕಿದೆ. ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಸಣ್ಣತನವನ್ನು ತೋರಿಸುತ್ತಿದೆ. ಜವಾಬ್ದಾರಿ ನಿರ್ವಹಣೆ ಮಾಡುವಲ್ಲಿ ‌ರಾಜ್ಯ ಸರ್ಕಾರ ವಿಫಲವಾಗಿದೆ. ಇದು ರೈತರ ಬದುಕಿನ ಪ್ರಶ್ನೆ ಎಂದು ಎಚ್.ಡಿ.‌ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಸಿ.ಟಿ. ರವಿ, ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿಯ ಸಂಸದರು, ಬಿಜೆಪಿ- ಜೆಡಿಎಸ್ ಪಕ್ಷಗಳ ಶಾಸಕರು, ವಿಧಾನ ಪರಿಷತ್ ಸದಸ್ಯರು, ಎರಡೂ ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.

Exit mobile version