ಬೆಂಗಳೂರು: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿರುವುದನ್ನು ರಾಜ್ಯ ಸರ್ಕಾರ ಪ್ರಶ್ನೆ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ. ನಮ್ಮ ಜಲಾಶಯಗಳೆಲ್ಲ ಖಾಲಿ ಆಗಿವೆ. ಬೆಂಗಳೂರಿಗೆ ಕುಡಿಯುವ ನೀರಿಗೂ (Drinking water for Bengaluru) ಸಮಸ್ಯೆ ಆಗಿದೆ. ಇಂಥ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ (Supreme Court) ಸರ್ಕಾರ ಮೇಲ್ಮನವಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ವಾಸ್ತವಿಕ ಪರಿಸ್ಥಿತಿಯನ್ನು ತಿಳಿಸಬೇಕು. ಅಗತ್ಯ ಬಿದ್ದರೆ ಪ್ರಾಧಿಕಾರದ ನಿಯೋಗ ರಾಜ್ಯಕ್ಕೆ ಬಂದು ವಾಸ್ತವಿಕ ಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ನಾವು ನೀರು ಬಿಡುವ ಸ್ಥಿತಿಯಲ್ಲಿ ಇಲ್ಲ ಅನ್ನೋದನ್ನು ಮನದಟ್ಟು ಮಾಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು.
ಕೇಂದ್ರದ ಜಲ ಶಕ್ತಿ ಸಚಿವರಿಗೆ ತಮಿಳುನಾಡು ಸಂಸದರ ನಿಯೋಗ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಯಡಿಯೂರಪ್ಪ, ತಮಿಳುನಾಡು ಸಂಸದರು ಯಾರನ್ನಾದರೂ ಭೇಟಿ ಮಾಡಲಿ. ಅವರ ಬಗ್ಗೆ ನಾನು ಚರ್ಚೆ ಮಾಡಲು ಇಷ್ಟಪಡುವುದಿಲ್ಲ. ಈ ವಿಚಾರದಲ್ಲಿ ನಾವು ಏನು ಹೇಳಬೇಕೋ ಅದನ್ನು ಸರ್ಕಾರಕ್ಕೆ ಹೇಳಿದ್ದೇವೆ ಎಂದು ಹೇಳಿದರು.
ಬೊಮ್ಮಾಯಿ ಕೂಡಾ ಏನು ಮಾಡೋಕೆ ಆಗುತ್ತೆ: ಡಿ.ಕೆ. ಶಿವಕುಮಾರ್
ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಾವೇರಿ ನೀರು (Cauvery water to Tamil Nadu) ಬಿಡಿ ಅಂದಾಗ, ನಾವೇನು ಮಾಡಲು ಆಗುತ್ತದೆ? ಬಸವರಾಜ ಬೊಮ್ಮಾಯಿ (Basavaraj Bommai) ಏನು ಮಾಡಲು ಆಗುತ್ತದೆ? ನಾವೆಲ್ಲರೂ ಸುಪ್ರೀಂ ಕೋರ್ಟ್‌ಗೆ ಗೌರವ ಕೊಡಲೇ ಬೇಕು ಎಂದು ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಸರ್ಕಾರದಲ್ಲಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಲಹೆಯನ್ನು ಪಡೆದುಕೊಳ್ಳುತ್ತೇನೆ. ಅವರ ಸಲಹೆಯನ್ನು ಒಪ್ಪುತ್ತೇನೆ. ಆದರೆ, ಅವರ ಸರ್ಕಾರ ಇದ್ದಾಗ ಏನು ಮಾಡಿದ್ದರು? ರಾತ್ರೋ ರಾತ್ರಿ ನೀರು ಬಿಟ್ಟಿಲ್ಲವೇ? ನಮಗೂ ಯಾವುದೇ ಕಾರಣಕ್ಕೂ ನೀರು ಬಿಡಲು ಇಷ್ಟ ಇಲ್ಲ. ಆದರೆ, ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಮುಂದೆ ಹೋಗಬೇಕು. ಹಾಗಾಗಿ ಕೋರ್ಟ್ ಸೂಚನೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಇರುವ ಸಂಬಂಧ ನಾನು ನವ ದೆಹಲಿಗೆ ಹೋಗುತ್ತಿದ್ದೇನೆ. ಪಾರ್ಲಿಮೆಂಟ್ ಸದಸ್ಯರನ್ನು ಭೇಟಿ ಮಾಡುತ್ತೇನೆ. ಕೇಂದ್ರ ಸರ್ಕಾರದ ಮೇಲೆ ನಾವೆಲ್ಲರೂ ಸೇರಿ ಒತ್ತಡ ಹಾಕುತ್ತೇವೆ. ನಮ್ಮ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಲೇಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ, ಅವರಿಂದ ಸಲಹೆ ಕೊಡಿಸಬೇಕು. ರಾಜಕಾರಣವನ್ನು ಪಕ್ಕಕ್ಕೆ ಇಟ್ಟು, ಜನರ ಹಿತ ಕಾಪಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Weather report : ಬೆಂಗಳೂರು ಸೇರಿ ಕರಾವಳಿಯಲ್ಲಿಂದು ಮಳೆ ಚುರುಕು
ದೇವೇಗೌಡರು ಪಾರ್ಲಿಮೆಂಟ್‌ನಲ್ಲಿ ಇದ್ದಾರೆ. ಅವರ ಸಲಹೆ ಕೂಡ ನಮಗೆ ಬಹಳ ಮುಖ್ಯವಾಗುತ್ತದೆ. ಅವರ ಹಿರಿತನದ ಅನುಭವವು ನಮಗೆ ಬೇಕಿದೆ. ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದರು. ಸಿಎಂ ಆಗಿದ್ದವರು. ಈಗ ಇರುವ ತಜ್ಞರೆಲ್ಲರೂ ಅವರ ಸರ್ಕಾರ ನೇಮಕ ಮಾಡಿದವರೇ ಇದ್ದಾರೆ. ಹೀಗಾಗಿ ಮೊದಲು ದೆಹಲಿಗೆ ನಡೆಯಿರಿ, ನಿಮ್ಮ ಅಧಿಕಾರ ಬಳಸಿ ರಾಜ್ಯದ ಹಿತವನ್ನು ಕಾಪಾಡಿ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.