Site icon Vistara News

Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ‌ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್

DK Shivakumar DCM reply to opposition

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ (Cauvery water dispute) ನಿತ್ಯ 12,500 ಕ್ಯೂಸೆಕ್‌ ನೀರು ಬಿಡುಗಡೆಗೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water Regulation Committee – CWRC) ತಿರಸ್ಕಾರ ಮಾಡಿದ್ದು ಸಂತಸ ತಂದಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (Deputy CM DK Shivakumar) ಹೇಳಿದ್ದಾರೆ. ಇನ್ನು ಮಳೆಗಾಗಿ ಹೋರಾಟಗಾರರು ಎಲ್ಲರೂ ಸೇರಿ ಭಗವಂತನಲ್ಲಿ ಪ್ರಾರ್ಥನೆ (Pray for rain) ಮಾಡೋಣ ಎಂದು ಕೇಳಿಕೊಂಡಿದ್ದಾರೆ.

ಸದಾಶಿವನಗರದ ನಿವಾಸದ ಬಳಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, 12,500 ಕ್ಯೂಸೆಕ್‌ ನೀರಿಗೆ ತಮಿಳುನಾಡು ಬೇಡಿಕೆ ಇಟ್ಟಿತ್ತು. 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ನಮ್ಮ ರಾಜ್ಯದ ಅಧಿಕಾರಿಗಳು ಸಮಿತಿಗೆ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವ ಸಮಿತಿಗೆ ಧನ್ಯವಾದ ಎಂದರು.

ಇದನ್ನೂ ಓದಿ: Cauvery water dispute : ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

ಅಣೆಕಟ್ಟೆ ಕೆಳಗಿನ ಕಾವೇರಿ ಜಲಾನಯನ ಪ್ರದೇಶದಿಂದ (cauvery basin area) ಸಾಮಾನ್ಯವಾಗಿ 2000 ಕ್ಯೂಸೆಕ್‌ ಹರಿದು ಹೋಗುತ್ತಿರುತ್ತದೆ. 1000 ಸಾವಿರ ಕ್ಯೂಸೆಕ್‌ ಬಿಡಬೇಕಾಗುತ್ತದೆ. ಕನಕಪುರ, ಬೆಂಗಳೂರು ಕಡೆಯ ಮಳೆ ನೀರು ಹೋಗುತ್ತಾ ಇರುತ್ತದೆ. ಎರಡು ಮೂರು ದಿನದಿಂದ ಒಳಹರಿವು ಚೆನ್ನಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಮೇಕೆದಾಟು ಯೋಜನೆಯೇ ಪರಿಹಾರ

ಇಂತಹ ಸಂಕಷ್ಟದ ಸಮಯದಲ್ಲಿ ಮೇಕೆದಾಟು ಯೋಜನೆಯೇ (Mekedatu Project) ಪರಿಹಾರವಾಗಿದೆ. ಈ ಯೋಜನೆಯಿಂದ 66 ಟಿಎಂಸಿ ನೀರು ಅವರಿಗೆ ಸೇರುತ್ತದೆ. ಕೆಆರ್‌ಎಸ್, ಕಬಿನಿ, ಹೇಮಾವತಿ ಅಣೆಕಟ್ಟೆಗಳ ಮೇಲಿನ ಒತ್ತಡ ತಗ್ಗುತ್ತದೆ. ಬೆಂಗಳೂರಿನ ಕುಡಿಯುವ ನೀರಿಗೂ ಸಾಕಷ್ಟು ಅನುಕೂಲ ಆಗುತ್ತದೆ‌‌. ಕಳೆದ ವಾರ ಸುಪ್ರೀಂ ಕೋರ್ಟ್ (Supreme Court) ತೀರ್ಪು ನೀಡುವ ಹೊತ್ತಿನಲ್ಲಿ “ಕರ್ನಾಟಕದವರು ಎಷ್ಟು ಬೇಕಾದರೂ ಅಣೆಕಟ್ಟು ಕಟ್ಟಿಕೊಳ್ಳಲಿ, ನಿಮಗೆ ತೊಂದರೆ ಏನು? ನಿಮ್ಮ ಪಾಲಿನ ನೀರು 177 ಟಿಎಂಸಿ ನಿಮಗೆ ಸಿಗುತ್ತದೆ” ಎಂದು ಸ್ಪಷ್ಟವಾಗಿ ಹೇಳಿದೆ ಎಂಬುದಾಗಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮೇಕೆದಾಟು ಅಣೆಕಟ್ಟು ನೀರನ್ನು ಕನಕಪುರದವರು ಬಳಸಿಕೊಳ್ಳುತ್ತಾರೆ ಎಂದು ಯಾರೋ ಹೇಳುತ್ತಿದ್ದರು. ಅಣೆಕಟ್ಟು ಇರುವುದೇ ತಮಿಳುನಾಡು ಗಡಿಯಲ್ಲಿ ಎಂದು ಡಿ.ಕೆ. ಶಿವಕುಮಾರ್‌ ಛೇಡಿಸಿದರು.

ಕೇಂದ್ರದ ಮೇಲೆ ಒತ್ತಡ ತರುತ್ತೇವೆ

ಕಾವೇರಿ ನೀರಿನ ಎರಡೂ ಸಮಿತಿಗಳಿಗೆ ಮೇಕೆದಾಟು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಸುಪ್ರೀಂ ಕೋರ್ಟಿನ ತೀರ್ಪಿನಿಂದ ಮತ್ತೊಮ್ಮೆ ಭರವಸೆ ಮೂಡಿದೆ. ಆದ ಕಾರಣ ನಮ್ಮ ಸಂಸದರು, ಕೇಂದ್ರ ಸಚಿವರಿಗೆ ಕೇಂದ್ರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಮತ್ತೊಮ್ಮೆ ಬಂದ್‌ ಮಾಡಲು ಆಗಲ್ಲ

ರಾಜ್ಯದ ಜನರು ಶಾಂತಿಯುತ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ಬಂದ್‌ ಮಾಡಲು ನ್ಯಾಯಾಲಯ ಬಿಡುವುದಿಲ್ಲ, ಆದ ಕಾರಣ ಸೆ. 29ರ ಬಂದ್‌ಗೆ ಅವಕಾಶವಿಲ್ಲ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾವೇರಿ ಹೋರಾಟದ ಜೊತೆಗೆ ರಾಜಕೀಯ ಟೀಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಟೀಕೆ ಮಾಡಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಅವರು ತಮ್ಮ ಅಸ್ತಿತ್ವಕ್ಕೆ ಮಾಡುತ್ತಾರೆ. ವಿರೋಧ ಪಕ್ಷಗಳ ಬಾಯಿ ಮುಚ್ಚಿಸಲು ಆಗುವುದಿಲ್ಲ. ಬೇಸರ ಮಾಡಿಕೊಳ್ಳಲೂ ಹೋಗುವುದಿಲ್ಲ. ಪ್ರಜಾಪ್ರಭುತ್ವದ ಹಕ್ಕನ್ನು ನಾವು ಪ್ರಶ್ನಿಸಬಾರದು. ಮಾಧ್ಯಮಗಳು ಸಹ ನಮ್ಮ‌ ಮೇಲೆ ಇಲ್ಲಸಲ್ಲದ ಕಥೆಗಳನ್ನು ಹೇಳುತ್ತಾರೆ,‌ ಇದೆಲ್ಲ ರಾಜಕೀಯದ ಒಂದು ಭಾಗ ಎಂದು ಉತ್ತರಿಸಿದರು.

ನಿಮ್ಮ ಆಡಳಿತಾವಧಿಯಲ್ಲಿ ಮೇಕೆದಾಟು ಯೋಜನೆ ಆಗುತ್ತದೆಯೇ ಎನ್ನುವ ಪ್ರಶ್ನೆಗೆ “ಕಾಲವೇ ಉತ್ತರ ಕೊಡುತ್ತದೆ” ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದನ್ನೂ ಓದಿ: Cauvery water dispute : ಸರ್ಕಾರದ ನಿಲುವನ್ನು ಹೇಳುವವರೆಗೆ ಕಾಯುತ್ತೇನೆ: ಎಚ್.ಡಿ. ದೇವೇಗೌಡ

ಮಳೆಗಾಗಿ ಪ್ರಾರ್ಥನೆ ಮಾಡೋಣ

ಜಯನಗರದಲ್ಲಿ ದಾಂಧಲೆ ನಡೆದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ಸಾರ್ವಜನಿಕರ ಆಸ್ತಿ ಹಾನಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ನಾನು ಇದನ್ನು ಮಾಡುವುದಿಲ್ಲ, ನ್ಯಾಯಾಲಯ ಮಾಡುತ್ತದೆ. ಬಂದ್ ಮಾಡುವ ಮುಂಚಿತವಾಗಿ ಸೂಚನೆಯನ್ನೂ ನೀಡಿದೆ. ಕಾವೇರಿ ವಿಚಾರವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ‌. ರಾಜ್ಯದ ಜನರೆಲ್ಲರೂ ಮಳೆಗಾಗಿ ಪ್ರಾರ್ಥನೆ ಮಾಡೋಣ ಹೇಳಿದರು.

Exit mobile version