ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಹುಸೇನ್ (Syed Ahmed Hussain) ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ವಿವಾದ ಬಗೆಹರಿಯಬೇಕಾದರೆ ಉಭಯ ರಾಜ್ಯಗಳ ಸಹಕಾರದ ಅಗತ್ಯವಿದೆ. ನೀರಿಗೂ ತೆರಿಗೆ ಕೊಡುವ ಪರಿಸ್ಥಿತಿ ಬರಬಾರದು ಎಂದು ಕಿವಿಮಾತನ್ನು ಹೇಳಿದ್ದಾರೆ. ಜತೆಗೆ ಜಲ ಸತ್ಯಾಗ್ರಹದ ಬಗ್ಗೆ ಉಲ್ಲೇಖಿಸಿದ್ದಾರೆ. ಇನ್ನು ಬೆಂಗಳೂರಿನವರು ನೀರಿಗಾಗಿ ಏಕೆ ಹೋರಾಟ (fight for water) ಮಾಡಲು ಮುಂದಾಗಿದ್ದಾರೆ ಎಂಬುದನ್ನೂ ಅವರು ವಿವರಿಸಿದ್ದಾರೆ. ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸೈಯದ್ ಜಲ ಪಾಠ ಮಾಡಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಹುಸೇನ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ (DCM DK Shivakumar) ಸಹ ಇದೇ ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಜಲ ವಿವಾದ ಅಂತ್ಯವಾಗಬೇಕು. ಇದಕ್ಕೆ ಉಭಯ ರಾಜ್ಯಗಳ ಸಹಕಾರ ಅಗತ್ಯವಿದೆ. ಮೇಕೆದಾಟು ಯೋಜನೆ (Mekedatu Project) ಒಂದೇ ಕಾವೇರಿ ವಿವಾದಕ್ಕೆ ಪರಿಹಾರವೆಂದು ತಜ್ಞರು ಹೇಳಿದ್ದಾರೆ. ಕಳೆದ ಸರ್ಕಾರ ಈ ಯೋಜನೆಗೆ ಸಾವಿರ ಕೋಟಿ ರೂಪಾಯಿ ಇಟ್ಟಿದೆ. ಪರಿಸರ ಅನುಮತಿ ಪಡೆಯಲು ವಿಫಲವಾಗಿ ಹಣ ಖರ್ಚಾಗಿಲ್ಲ. ಸದ್ಯ ಯೋಜನೆಯ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಕಳುಹಿಸಲಾಗಿದೆ. ಸಿಡಬ್ಲ್ಯುಎಂಎ ಮತ್ತು ಕೇಂದ್ರ ಪರಿಸರ ಅನುಮತಿ ಪಡೆಯುವ ಹಂತದಲ್ಲಿದೆ. ಸಾಧ್ಯವಾದಷ್ಟು ಬೇಗ ಈ ಯೋಜನೆಗೆ ಅನುಮೋದನೆ ನೀಡಬೇಕು. ಬೆಂಗಳೂರು ನಗರ ಜನರಿಗೆ ಸಹಾಯ ಮಾಡಬೇಕು. ಇದಕ್ಕೆ ರಾಜಕೀಯ ದೃಢ ನಿರ್ಧಾರ ಅಗತ್ಯವಿದೆ. ಹೀಗಾಗಿ ಸಿಎಂ, ಡಿಸಿಎಂ, ಪ್ರಧಾನಿಗಳು ಸೂಕ್ತ ಕ್ರಮವಹಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಸಯ್ಯದ್ ಅಹ್ಮದ್ ಹುಸೇನ್ ಪತ್ರದಲ್ಲೇನಿದೆ?
ಮಾನ್ಯರೇ, ಭಾರತಕ್ಕೆ ಸ್ವಾತಂತ್ರ್ಯ ನೀಡುವ ಸಂದರ್ಭದಲ್ಲಿ ಇಂಗ್ಲೆಂಡ್ ಪ್ರಧಾನಿ ಹೇಳಿದ ಮಾತೊಂದನ್ನು ಅತ್ಯಂತ ಬೇಸರದಿಂದ ಉಲ್ಲೇಖಿಸಬೇಕೆನಿಸುತ್ತಿದೆ.
ಇದನ್ನೂ ಓದಿ: Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್ ಸಲಹೆ
“ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ರಾಜ್ಯಾಧಿಕಾರ ದುಷ್ಟರು, ಸಾಮರ್ಥ್ಯ ಇಲ್ಲದವರು ಹಾಗೂ ಆಯೋಗ್ಯರ ಕೈಗೆ ಹೋಗುತ್ತದೆ. ಭಾರತದ ಎಲ್ಲ ರಾಜಕೀಯ ನಾಯಕರು ಕಡಿಮೆ ಸಾಮರ್ಥ್ಯವಂತರು ಹಾಗೂ ಒಣ ಪೌರುಷವಾದಿಗಳು. ಅವರು ಸಿಹಿ ನಾಲಿಗೆ ಮತ್ತು ಮೂರ್ಖ ಹೃದಯಗಳನ್ನು ಹೊಂದಿರುತ್ತಾರೆ. ಅವರು ಅಧಿಕಾರಕ್ಕಾಗಿ ತಮ್ಮ ತಮ್ಮಲ್ಲೇ ಕಚ್ಚಾಡುತ್ತಾರೆ ಮತ್ತು ರಾಜಕೀಯ ಜಗಳದಲ್ಲಿ ಭಾರತ ಕಳೆದುಹೋಗುತ್ತದೆ. ಭಾರತದಲ್ಲಿ ಗಾಳಿ ಮತ್ತು ನೀರಿಗೆ ತೆರಿಗೆ ವಿಧಿಸುವ ದಿನ ಬರಲಿದೆ” ಎಂದು ಚರ್ಚಿಲ್ ಭವಿಷ್ಯ ನುಡಿದಿದ್ದರು.
ಚರ್ಚಿಲ್ ಅವರ ಹೇಳಿಕೆಯ ಮೊದಲಾರ್ಧ ಭಾಗ ಚರ್ಚೆಯ ವಸ್ತುವಾದರೂ ಕೊನೆಯ ಭಾಗ ಮಾತ್ರ ಸತ್ಯ ಎನ್ನಿಸುತ್ತಿದೆ. ದುರಂತವೆಂದರೆ ಇಂದು ಭಾರತದಲ್ಲಿ ಗಾಳಿ ಮತ್ತು ನೀರಿಗೆ ತೆರಿಗೆ ವಿಧಿಸುವ ಹಂತಕ್ಕೆ ನಮ್ಮ ವ್ಯವಸ್ಥೆ ತಲುಪಿದೆ.
ಕುಡಿವನ ನೀರು, ಆಮ್ಲಜನಕದ ಮೇಲಿನ ಜಿಎಸ್‌ಟಿ ರದ್ದತಿಗೆ ಮನವಿ
ಎಲ್ಲರಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಪ್ರಾಥಮಿಕ ಜವಾಬ್ದಾರಿಯಿಂದ ನಮ್ಮ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ನಾವು ಕುಡಿಯುವ ನೀರಿನ ಬಾಟಲಿಗೆ 18% ಮತ್ತು ವೈದ್ಯಕೀಯ ದರ್ಜೆಯ ಆಮ್ಲಜನಕದ ಮೇಲೆ 5% ಜಿಎಸ್‌ಟಿಯನ್ನು ವಿಧಿಸುತ್ತಿದ್ದೇವೆ. ಹೀಗಾಗಿ ಚರ್ಚಿಲ್ ನುಡಿದ ಭವಿಷ್ಯವನ್ನು ಸುಳ್ಳಾಗಿಸಲು ಪ್ಯಾಕ್ ಮಾಡಲಾದ ಕುಡಿಯುವ ನೀರು ಮತ್ತು ವೈದ್ಯಕೀಯ ದರ್ಜೆಯ ಆಮ್ಲಜನಕದ ಮೇಲಿನ GST ತೆರಿಗೆಯನ್ನು ರದ್ದುಪಡಿಸುವಂತೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ.
ಇನ್ನೊಂದು ಸಂಗತಿಯನ್ನು ನಾನು ಈ ಸಂದರ್ಭದಲ್ಲಿ ನಿಮ್ಮ ಅವಗಾಹನೆಗೆ ತರಲು ಬಯಸುತ್ತೇನೆ. ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಲ ಸತ್ಯಾಗ್ರಹ ಪ್ರಾರಂಭಿಸಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್. 1927ರಲ್ಲಿ ದಲಿತರು ಹಾಗೂ ಶೋಷಿತ ವರ್ಗದವರಿಗೆ ಕುಡಿಯುವ ನೀರು ನಿರಾಕರಿಸುತ್ತಿದ್ದ ಅನಿಷ್ಠ ಪದ್ಧತಿಯನ್ನು ಖಂಡಿಸಿ ಅವರು ಪ್ರಾರಂಭಿಸಿದ ಜಲ ಸತ್ಯಾಗ್ರಹ ಇಂದಿಗೂ ಪ್ರಸ್ತುತ ಎಂದು ನಾನು ಭಾವಿಸಿದ್ದೇನೆ. ಇಂದು ದಲಿತರಿಗೆ ಮಾತ್ರವಲ್ಲದೆ ದೇಶದ ಬಹುತೇಕ ಜನವರ್ಗಕ್ಕೆ ನೀರು ಮರೀಚಿಕೆಯಾಗುತ್ತಿದೆ. ಜೀವಜಲಕ್ಕೆ ತೆರಿಗೆ ಕಟ್ಟುವುದು ಅಥವಾ ನೀರನ್ನು ಕೊಂಡು ಕುಡಿಯುವುದು ಸಾಮಾಜಿಕ ವಿಕೃತಿ ಎನ್ನದೇ ವಿಧಿ ಇಲ್ಲ. ಇದು ನಮ್ಮ ಭಾರತೀಯ ಪರಂಪರೆಗೆ ಸಂಪೂರ್ಣ ವಿರುದ್ಧ ಹೀಗಾಗಿ ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ನೀರು ಲಭಿಸುವಂತೆ ಮಾಡುವುದು ಈ ಕ್ಷಣದ ಅಗತ್ಯತೆ ಮಾತ್ರವಲ್ಲ, ಬದುಕುವ ಹಕ್ಕಿಗೆ ನೀಡುವ ಗೌರವವೂ ಹೌದು.
ಕುಡಿಯುವ ನೀರು ದುಬಾರಿ
ಈ ಸಂದರ್ಭದಲ್ಲಿ ಬೆಂಗಳೂರಿನ ಈಗಿನ ನೀರಿನ ಪರಿಸ್ಥಿತಿಯನ್ನು ಹಂಚಿಕೊಳ್ಳಲು ನನಗೆ ಅತೀವ ಬೇಸರ ಮತ್ತು ನೋವಾಗುತ್ತದೆ. ಬೆಂಗಳೂರಿನ ನಿವಾಸಿಯಾಗಿ ನಾನು ನೀರಿನ ಬಿಕ್ಕಟ್ಟನ್ನು ಹತ್ತಿರದಿಂದ ನೋಡಿದ್ದೇನೆ. ಬೋರ್‌ವೆಲ್ ಮತ್ತು ಕಾವೇರಿ: 1 ರಿಂದ 5ನೇ ಹಂತದವರೆಗಿನ ಯೋಜನೆಗಳು ಬೆಂಗಳೂರಿಗರ ನೀರಿನ ಅಗತ್ಯವನ್ನು ಭಾಗಶಃ ಪೂರೈಸಿದೆಯಾದರೂ ಭಾರಿ ವೆಚ್ಚ ತಗುಲಿದೆ. ವಿಶೇಷವಾಗಿ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಲ್ಲಿ, ನೀರು ದುಬಾರಿಯಾಗುವ ಜತೆಗೆ ಕುಡಿಯಲು ಯೋಗ್ಯವಾಗಿಲ್ಲ.
ಎಲ್ಲ ವಾರ್ಡ್‌ಗಳಲ್ಲೂ ಜಲ ಸಂಕಷ್ಟ ಎದುರಾಗಬಹುದು ಎಚ್ಚರ!
ಉದಾಹರಣೆಗೆ ಸಾಫ್ಟ್‌ವೇರ್ ರಫ್ತು ಸೇವೆಯಲ್ಲಿ ಅತಿ ಹೆಚ್ಚು ಕೊಡುಗೆ ನೀಡುವ ಐಟಿ ಹಬ್ ಮಹದೇವಪುರದಲ್ಲಿ ಟ್ಯಾಂಕರ್‌ಗಳ ಮೂಲಕ ನೀರನ್ನು ಖರೀದಿಸಲು ಆರ್‌ಡಬ್ಲ್ಯುಎಯ ಅಗತ್ಯತೆಯಿಂದಾಗಿ ನಿರ್ವಹಣಾ ಶುಲ್ಕವನ್ನು ಪಾವತಿಸುವುದರ ಜತೆಗೆ ಶುಲ್ಕ ಕಟ್ಟಬೇಕಾಗಿದೆ. ಮನೆ/ಅಪಾರ್ಟ್‌ಮೆಂಟ್ ವಾಸಿಗಳು ಮಾಸಿಕ ಎರಡು ಸಾವಿರ ರೂ. ನಿಂದ ಮೂರು ಸಾವಿರ ರೂಪಾಯಿವರೆಗೆ ಖರ್ಚು ಮಾಡಬೇಕಾಗುತ್ತದೆ. ಜತೆಗೆ ಕುಡಿಯುವ ನೀರಿನ ಬಾಟಲಿಗಳಿಗಾಗಿ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿಯಿಂದ ಒಂದೂವರೆ ಸಾವಿರ ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಇಲ್ಲಿನ ಪ್ರತಿ ಕುಟುಂಬ ಮಾಸಿಕ ಸರಾಸರಿ 3.5 ಸಾವಿರ ರೂ. ನಿಂದ 4 ಸಾವಿರದವರೆಗೆ ವ್ಯಯಿಸುತ್ತಿದೆ. ಇದು ಮಹಾದೇವಪುರಕ್ಕೆ ಮಾತ್ರ ಸೀಮಿತವಾದ ವಿದ್ಯಮಾನವಲ್ಲ ನಗರದ ಬಹುತೇಕ ವಾರ್ಡ್‌ಗಳಿಗೆ ಕೆಲವೇ ವರ್ಷದಲ್ಲಿ ಈ ಪರಿಸ್ಥಿತಿ ವಿಸ್ತರಣೆಯಾಗುವ ಆತಂಕ ಎದುರಾಗಿದೆ. ಬೆಂಗಳೂರು ಜಾಗತಿಕ ಮಹಾನಗರವೆಂದು ಹೆಸರು ಗಳಿಸಿದ್ದರೂ ದುರದೃಷ್ಟವಶಾತ್ ಇಲ್ಲಿನ ಜಲಮೂಲಗಳು ಅತಿಯಾದ ಶೋಷಣೆ ಹಾಗೂ ಕಲುಷಿತಗೊಂಡಿದೆ.
2011 ರಿಂದ ಭಾರತೀಯ ವಿಜ್ಞಾನ ಸಂಸ್ಥೆ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಅಂತರ್ಜಲ ಮಂಡಳಿ ಮತ್ತು ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಬೆಂಗಳೂರಿನ ನೀರಿನ ಮೂಲಗಳ ಅತಿಯಾದ ಶೋಷಣೆಯಿಂದಾಗಿ ಆರ್ಸೆನಿಕ್ ಅಂಶ ಹೆಚ್ಚುತ್ತಿರುವ ಬಗ್ಗೆ ವಿಶ್ಲೇಷಣಾ ವರದಿಯನ್ನು ಆಗಾಗ ಬಿಡುಗಡೆ ಮಾಡಿವೆ. ಜತೆಗೆ ನೀರಿನಲ್ಲಿ ನೈಟ್ರೇಟ್‌ಗಳು, ಗಡಸುತನ, ಕ್ಯಾಲ್ಸಿಯಂ, ಮೆಗ್ನಿಸಿಯಮ್, ಕರಗಿದ ಘನವಸ್ತುಗಳು, ಸಲ್ಫೇಟ್‌ಗಳು ಮತ್ತು ಫ್ಲೋರೈಡ್‌ಗಳಂತಹ ವಿಷಯುಕ್ತಗಳ ಸಮೀಕರಣ ಹಾಗೂ ಅತಿಯಾದ ಸಾಂದ್ರತೆಯಿಂದಾಗಿ ಬೆಂಗಳೂರಿನ ನೀರಿನ ಮೂಲಗಳು ಹೆಚ್ಚು ಕಲುಷಿತಗೊಂಡಿವೆ ಎಂದು ಕಳವಳ ವ್ಯಕ್ತಪಡಿಸಿವೆ.
ಕೇಂದ್ರೀಯ ಅಂತರ್ಜಲ ಮಂಡಳಿ (CGWB) ನಡೆಸಿದ ಇತ್ತೀಚಿನ ಸಂಶೋಧನೆ ಪ್ರಕಾರ, ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಅಂತರ್ಜಲವು 30 ug/L (ಮೈಕ್ರೋಗ್ರಾಂ/ಲೀಟರ್) ಗಿಂತ ಹೆಚ್ಚಿನ ಸಾಂದ್ರತೆಯೊಂದಿಗೆ ಅಧಿಕ ಭಾರದ ಮೆಟಲ್ ಯುರೇನಿಯಂ ಅನ್ನು ಒಳಗೊಳ್ಳುತ್ತಿವೆ. ಇದು ಅತ್ಯಂತ ಆತಂಕದ ವಿಚಾರವಾಗಿದೆ.
ಬೆಂಗಳೂರು ವಿಶ್ವದ ಎರಡನೇ ಅತ್ಯಂತ ಕಲುಷಿತ ಜಲ ಮೂಲ ಹೊಂದಿದ ನಗರ
Tapsafe ನಂತಹ ಅಂತಾರಾಷ್ಟ್ರೀಯ ಏಜೆನ್ಸಿಗಳು ಸಹ ತನ್ನ ಇತ್ತೀಚಿನ ವರದಿಯೊಂದರಲ್ಲಿ ಬೆಂಗಳೂರು ವಿಶ್ವದ ಎರಡನೇ ಅತ್ಯಂತ ಕಲುಷಿತ ಜಲ ಮೂಲ ಹೊಂದಿದ ನಗರವಾಗಿದೆ. ಕೊಳವೆ ಬಾವಿಯ ಗುಣಮಟ್ಟವು ಕುಡಿಯುವುದಕ್ಕೆ ಸುರಕ್ಷಿತವಾಗಿಲ್ಲ ಎಂದಿದೆ. ಟ್ಯಾಪ್ ವಾಟರ್ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಬೆಂಗಳೂರು ದೇಶದಲ್ಲೇ ಅತ್ಯಂತ ಕಲುಷಿತ ನಗರವಾಗಿ ಅಗ್ರಸ್ಥಾನದಲ್ಲಿದೆ. ಮನಿಲಾ ನಂತರ ನಾವು ಎರಡನೇ ಸ್ಥಾನದಲ್ಲಿದ್ದೇವೆ ಎಂಬುದು ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ.
ಕಾವೇರಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ನಡೆಯುತ್ತಿರುವ ವಿವಾದ ನಿಮ್ಮ ಅವಗಾಹನೆಗೆ ಇದೆ ಎಂದು ನಾನು ಭಾವಿಸಿದ್ದೇನೆ. ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ನೀರಿನ ಕೊರತೆ ಕಾವೇರಿ ಜಲಾನಯನ ಪಾತ್ರದಲ್ಲಿ ಇದೆ. ಉಭಯ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿವೆ. ಕರ್ನಾಟಕದಲ್ಲಿ ಪ್ರತಿಭಟನೆ – ಬಂದ್ ನಡೆಯುತ್ತಿದೆ. ಶತಮಾನಗಳಷ್ಟು ಹಳೆಯದಾದ ಕಾವೇರಿ ವಿವಾದವನ್ನು ಬಗೆಹರಿಸುವುದಕ್ಕೆ ಇದು ಸಕಾಲ. ಮೇಕೆದಾಟು ಕುಡಿಯುವ ನೀರಿನ ಯೋಜನೆಯ ಅನುಷ್ಠಾನದಿಂದ ಬೆಂಗಳೂರಿಗರು ಎದುರಿಸುವ ನೀರಿನ ಕೊರತೆಯನ್ನು ನೀಗಿಸುವುದಕ್ಕೆ ಸಾಧ್ಯ ಎಂದು ಬಹುತೇಕ ತಜ್ಞರ ಅಂಬೋಣ. ಇದರಿಂದ ಕೆಆರ್‌ಎಸ್ ಜಲಾಶಯದ ಮೇಲಿನ ಪಾರಂಪರಿಕೆ ಅವಲಂಬನೆ ತುಸು ತಗ್ಗಿಸಬಹುದು. ಈ ಯೋಜನೆ ಕಾರ್ಯಗತಗೊಳಿಸಲು ಅಗತ್ಯವಾದ ಅನುಮತಿಗಳನ್ನು ಪಡೆಯುವಲ್ಲಿನ ವಿಳಂಬ ಬೆಂಗಳೂರಿಗೆ ಆತಂಕ ತಂದೊಡ್ಡಿದೆ ಎಂಬ ಕಳವಳವನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಬೆಂಗಳೂರಿಗೆ 20 ಟಿಎಂಸಿಯಷ್ಟು ನೀರಿನ ಕೊರತೆ ಇದೆ. ಪ್ರಸ್ತಾವಿತ ಮೇಕೆದಾಟು ಯೋಜನೆಯನ್ನು ಬೆಂಗಳೂರಿನಿಂದ ಸುಮಾರು 100 ಕಿ.ಮೀ. ದಕ್ಷಿಣಕ್ಕೆ ರಾಮನಗರ ಜಿಲ್ಲೆಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ ಎಂಬುದು ತಮ್ಮ ಘನ ಅವಗಾಹನೆಯಲ್ಲಿದೆ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆಗಳನ್ನು ಪರಿಹರಿಸುವುದು ಮತ್ತು ಅಂತರ್ಜಲವನ್ನು ಮರುಪೂರಣಗೊಳಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಮೇಕೆದಾಟು ಯೋಜನೆ ಜಾರಿಯಾಗಲಿ
ಮೇಕೆದಾಟು ಸಮತೋಲನ ಜಲಾಶಯದ ಕಲ್ಪನೆಯು ಹಲವಾರು ವರ್ಷಗಳಿಂದ ಚರ್ಚೆಯಲ್ಲಿದೆ. 2014ರಲ್ಲಿ ಕರ್ನಾಟಕ ಸರ್ಕಾರವು ಯೋಜನೆಗೆ ಪ್ರಸ್ತಾಪಿಸಿತು. ಮರು ವರ್ಷದಲ್ಲಿ ವಿವರವಾದ ಯೋಜನಾ ವರದಿಗಾಗಿ ಹಣವನ್ನು ಮಂಜೂರು ಮಾಡಿತು. ನಂತರದ ವರ್ಷಗಳಲ್ಲಿ ಕೇಂದ್ರ ಜಲ ಆಯೋಗವು 2018 ರಲ್ಲಿ ಮೇಕೆದಾಟು ಯೋಜನೆಗೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ತೆರವುಗೊಳಿಸಿತು. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಗಳಿಗೆ ಹೆಚ್ಚುವರಿ ಬೆಂಬಲವನ್ನು ಒದಗಿಸಿತು. ಬೆಳೆಯುತ್ತಿರುವ ನಗರಕ್ಕೆ ಸ್ಥಿರವಾದ ನೀರಿನ ಪೂರೈಕೆಯನ್ನು ಖಾತ್ರಿಪಡಿಸಿತು. 2021-22 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ತನ್ನ ಬಜೆಟ್‌ನಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 1000 ಕೋಟಿ ರೂ.ಗಳನ್ನು ಮೀಸಲಿಟ್ಟಿತು. ಆದರೆ ಪರಿಸರ ಅನುಮತಿ ಮತ್ತು ಇತರ ಕಡ್ಡಾಯ ಅನುಮತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗದ ಕಾರಣ ಒಂದು ಪೈಸೆಯನ್ನೂ ಖರ್ಚು ಮಾಡಲು ಸಾಧ್ಯವಾಗಲಿಲ್ಲ.
ವಾಸ್ತವವಾಗಿ, ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಕೇಂದ್ರೀಯ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಕಳುಹಿಸಲಾಗಿದೆ. ಪ್ರಸ್ತುತ ಇದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲೂ ಎಂಎ) ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಪರಿಸರದ ಅನುಮತಿ ಪಡೆಯುವ ಹಂತದಲ್ಲಿ ಇದೆ. ದಯವಿಟ್ಟು, ಸಾಧ್ಯವಾದಷ್ಟು ಬೇಗ ಈ ಅನುಮೋದನೆಗಳನ್ನು ನೀಡುವ ಮೂಲಕ ಬೆಂಗಳೂರಿನ ಜನರಿಗೆ ಸಹಾಯ ಹಸ್ತ ನೀಡಬೇಕೆಂದು ತಮ್ಮಲ್ಲಿ ಅರಿಕೆ ಮಾಡುತ್ತೇನೆ.
ಇದನ್ನೂ ಓದಿ: Cauvery water dispute : ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕಿಚ್ಚು; ಮೈತ್ರಿ ಬಳಿಕ ಮೊದಲ ಜಂಟಿ ಪ್ರತಿಭಟನೆ
ದೃಢವಾದ ಮಧ್ಯಸ್ಥಿಕೆ ಬೇಕು
ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಶಕಗಳ ಹಳೆಯ ಜಲ ವಿವಾದಕ್ಕೆ ಅಂತ್ಯ ಹಾಡಲು ದೃಢವಾದ ಅಂತಾರಾಜ್ಯ ಸಹಕಾರದ ಅಗತ್ಯವಿದೆ. ಜಲ ನಿರ್ವಹಣೆಯ ವಿಷಯಗಳಲ್ಲಿ ನಿಮ್ಮ ದೃಢವಾದ ಮಧ್ಯಸ್ಥಿಕೆಯಿಂದ ಮಾತ್ರ ವಿವಾದ ಅಂತ್ಯಗೊಳ್ಳಲು ಸಾಧ್ಯವಿದೆ. ಹಂಚಿಕೆಯಾದ ಜಲ ಸಂಪತ್ತಿನ ಸುಸ್ಥಿರ ಮತ್ತು ಸಮಾನ ಬಳಕೆಯನ್ನು ಖಾತ್ರಿಪಡಿಸಿಕೊಳ್ಳಲು ಕಾನೂನು ಚೌಕಟ್ಟುಗಳನ್ನು ಗೌರವಿಸಲು ಮತ್ತು ಒಳಗೊಂಡಿರುವ ಎಲ್ಲ ಪಾಲುದಾರಿಕೆಯ ಜಂಜಡಗಳನ್ನು ಪರಿಹರಿಸಲು ನಿಮ್ಮ ಹೃದಯಪೂರ್ವಕ ಮಧ್ಯಸ್ಥಿಕೆ ನಿರ್ಹಾಯಕವಾಗಿದೆ ಎಂದು ಭಾವಿಸುತ್ತೇನೆ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಹ್ಮದ್ ಹುಸೇನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.