Site icon Vistara News

Cauvery water dispute : ಬಿಜೆಪಿ-ಜೆಡಿಎಸ್‌ ಜಂಟಿ ಹೋರಾಟದಲ್ಲಿ ಕಾಣದ ಸಾಮ್ರಾಟ್; ಈ ಮಾಜಿಗಳೂ ಗೈರು!

R Ashok with bjp logo

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಬುಧವಾರ ಜೆಡಿಎಸ್‌ ಹಾಗೂ ಬಿಜೆಪಿ ಜಂಟಿ ಹೋರಾಟ ನಡೆಸಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಉಭಯ ಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್.‌ ಯಡಿಯೂರಪ್ಪ (Former Chief Minister BS Yediyurappa), ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former Chief Minister and JDS Legislature Party leader HD Kumaraswamy) ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆದಿದೆ. ಆದರೆ, ಬಿಜೆಪಿ ಸಾಮ್ರಾಟ್‌ ಎಂದೇ ಖ್ಯಾತಿ ಹೊಂದಿರುವ ಮಾಜಿ ಡಿಸಿಎಂ ಆರ್.‌ ಅಶೋಕ್‌ (Former Deputy CM R Ashok) ಸಹಿತ ಕೆಲವು ಬಿಜೆಪಿ ನಾಯಕರ ಗೈರು ಎದ್ದು ಕಾಣುತ್ತಿತ್ತು.

ಕುಡಿಯಲಿಕ್ಕೆ ಕಾವೇರಿ ನೀರು ಬೇಕು. ಆದರೆ, ಪ್ರತಿಭಟನೆಗೆ ಬೇಡ ಎಂಬ ನಿಲುವು ಇವರದ್ದೇ ಎಂಬ ಪ್ರಶ್ನೆ ಈಗ ಎದುರಾಗಿದೆ. ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance) ಪಕ್ಷಗಳ ಪ್ರತಿಭಟನೆಗೆ ಮಾಜಿ ಸಚಿವರು ಗೈರಾಗಿದ್ದಾರೆ. ಬೆಂಗಳೂರಿನಲ್ಲಿ ಇದ್ದರೂ ಪ್ರತಿಭಟನೆಗೆ ಆಗಮಿಸದೇ ಇರುವುದು ಹಲವು ಚರ್ಚೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.

ಇದನ್ನೂ ಓದಿ: BJP JDS alliance : ಸೆಕ್ಯುಲರಿಸಂ ಅನ್ನು ನಾಶ ಮಾಡಿದ್ದೇ ಕಾಂಗ್ರೆಸ್‌: ಎಚ್.ಡಿ. ಕುಮಾರಸ್ವಾಮಿ ಕಿಡಿ

ಆರ್. ಅಶೋಕ್, ಎಸ್‌.ಟಿ. ಸೋಮಶೇಖರ್, ಬೈರತಿ ಬಸವರಾಜ, ಗೋಪಾಲಯ್ಯ ಗೈರಾಗಿದ್ದರು. ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ ಮಾಡುವ ಬಗ್ಗೆ ಮೊದಲೇ ತಿಳಿಸಿದ್ದರೂ ಸಹ ಇವರು ಯಾರೂ ಸಹ ವಿಧಾನಸೌಧದತ್ತ ಸುಳಿಯಲೇ ಇಲ್ಲ. ಲೋಕಸಭಾ ಚುನಾವಣೆಯ (Lok Sabha Election 2024) ಹಿತದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡ ಬಳಿಕ ನಡೆದ ಮೊದಲ ಪ್ರತಿಭಟನೆ ಇದಾಗಿದ್ದು, ಇದಕ್ಕೆ ಇವರೆಲ್ಲರೂ ಗೈರಾಗಿದ್ದಾರೆ.

ಬರುತ್ತಲೇ ಇಲ್ಲ ಎಸ್‌.ಟಿ. ಸೋಮಶೇಖರ್‌

ಮಾಜಿ ಸಚಿವ ಎಸ್.ಟಿ. ಸೋಮಶೇಖರ್‌ (Former minister ST Somashekar) ಅವರು ಈಚೆಗೆ ಬಿಜೆಪಿ ಪ್ರತಿಭಟನೆ ಹಾಗೂ ಸಭೆಗಳಿಂದ ದೂರವೇ ಉಳಿದಿದ್ದರು. ಅಲ್ಲದೆ, ಅವರು ಆಪರೇಷನ್‌ ಹಸ್ತಕ್ಕೆ (Operation Hasta) ಗುರಿಯಾಗಿದ್ದಾರೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ನಡೆದುಕೊಳ್ಳುತ್ತಿದ್ದರು. ಕಾರಣ, ಸರ್ಕಾರದ ಪರವಾಗಿ ಹಲವು ಕಾರ್ಯಕ್ರಮಗಳನ್ನು ತಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ ಎಂದು ಕಾರ್ಯಕ್ರಮ ಮಾಡಿ ತಿಳಿ ಹೇಳಿದ್ದರು. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಇದರ ಜತೆಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುದ್ದಿಯಾಗಿದ್ದರು. ಇವರ ಜತೆಗೆ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡು ಆಪ್ತವಾಗಿ ಮಾತನಾಡಿದ್ದನ್ನು ಸಹ ಸ್ಮರಿಸಬಹುದಾಗಿದೆ.

ಅಲ್ಲದೆ, ತಮ್ಮ ವಿರುದ್ಧ ಪಕ್ಷ ವಿರೋಧಿ ಕೆಲಸ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಸ್.ಟಿ. ಸೋಮಶೇಖರ್‌ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಕೊನೆಗೆ ಆ ಆರೋಪ ಹೊತ್ತವರನ್ನು ಬಿಜೆಪಿ ಉಚ್ಚಾಟನೆಯನ್ನೂ ಮಾಡಿತ್ತು. ಇಷ್ಟಾದರೂ ಸೋಮಶೇಖರ್‌ ಅವರು ಬಿಜೆಪಿಯಲ್ಲಿ ಅಂತರ ಕಾಯ್ದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಇವರ ಜತೆಗೆ ಬೈರತಿ ಬಸವರಾಜ್‌ ಹಾಗೂ ಕೆ. ಗೋಪಾಲಯ್ಯ ಸಹ ಗೈರಾಗುವ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸೈಲೆಂಟ್‌ ಆದರೇ ಸಾಮ್ರಾಟ್?‌

ಇನ್ನು ಡಿಸಿಎಂ ಆರ್‌. ಅಶೋಕ್ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದಾರೆ. ಅವರು ಈ ಪ್ರತಿಭಟನೆ ವೇಳೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈಚೆಗೆ ನಡೆಯುತ್ತಿರುವ ಬೆಳವಣಿಗೆಯಲ್ಲಿ ಅಷ್ಟಾಗಿ ಕಾಣುತ್ತಿಲ್ಲ. ಈಚೆಗೆ ಅವರು ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಅಶೋಕ್‌ ಆತ್ಯಾಪ್ತರಾದ ಹತ್ತಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್‌ಗಳನ್ನು ಕಾಂಗ್ರೆಸ್‌ ಸೆಳೆದುಕೊಂಡಿತ್ತು. ಇದು ಅಶೋಕ್‌ಗೆ ದೊಡ್ಡ ಆಘಾತವನ್ನೇ ನೀಡಿದೆ.

ಇದನ್ನೂ ಓದಿ: Cauvery water dispute : ಡಿಎಂಕೆ ಏಜೆಂಟ್‌ ಆಗಿರುವ ಕಾಂಗ್ರೆಸ್‌; ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ಗುಡುಗು

ಇದರ ಜತೆಗೆ ಇತ್ತೀಚೆಗೆ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್. ಅಶೋಕ್‌ ಅವರು ರೋಡ್‌ ಶೋ ನಡೆಸಲು ಬಹಳ ಉತ್ಸಾಹವನ್ನು ತೋರಿದ್ದರು. ಆದರೆ, ರೋಡ್‌ ಶೋ ನಡೆದರೂ ರಾಜ್ಯ ಬಿಜೆಪಿ ನಾಯಕರಿಗೆ ಸೂಕ್ತ ಸ್ಥಳವನ್ನೂ ನಿಯೋಜನೆ ಮಾಡದಿರುವುದು ಅನೇಕರಲ್ಲಿ ಬೇಸರವನ್ನು ಹುಟ್ಟುಹಾಕಿತ್ತು. ಇದು ಅಶೋಕ್‌ ಬೇಸರಕ್ಕೂ ಕಾರಣವಾಗಿತ್ತು ಎಂದು ಹೇಳಲಾಗಿದೆ. ಈಗ ಅಶೋಕ್‌ ಯಾಕೆ ಅಂತರ ಕಾಯ್ದುಕೊಂಡಿದ್ದಾರೆ ಎಂಬುದು ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

Exit mobile version