ಬೆಂಗಳೂರು: ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದ್ದು, ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶಿಸಿರುವುದನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರಕ್ಕೂ ಚಾಟಿ ಬೀಸಿದ್ದು, ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲು ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ಈಗ ನೀರು ಬಿಡುವ ಪರಿಸ್ಥಿತಿಯನ್ನು ತಂದುಕೊಂಡಿದ್ದು ರಾಜ್ಯ ಸರ್ಕಾರವೇ ಆಗಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಮುಂಚೆ ನೀರು ಬಿಟ್ಟು ತನ್ನ ಕೈಯನ್ನು ತಾನೇ ಕಟ್ಟಿಕೊಂಡಿದೆ. ಈಗ ಕಾನೂನು ಹೋರಾಟ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಬೊಮ್ಮಾಯಿ ಟ್ವೀಟ್‌ನಲ್ಲೇನಿದೆ?
“ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲುಆರ್‌ಸಿ) ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವುದು ಇದೊಂದು ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಿಡಬ್ಲುಆರ್ ಸಿ ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವುದು ಇದೊಂದು ಪಾಲನೆ ಮಾಡಲು ಸಾಧ್ಯವಿಲ್ಲದ ಒಂದು ಆಜ್ಞೆ.
— Basavaraj S Bommai (@BSBommai) September 18, 2023
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್ ಗೆ ಹೋಗಿ ನೀರನ್ನು ಬಿಡಲು ಸಾಧ್ಯವಿಲ್ಲದ ಕಾರಣವನ್ನು ಮನವರಿಕೆ…
ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಹೋಗಿ ನೀರನ್ನು ಬಿಡಲು ಸಾಧ್ಯವಿಲ್ಲದ ಕಾರಣವನ್ನು ಮನವರಿಕೆ ಮಾಡಿಕೊಡಬೇಕು. ಈ ಆಜ್ಞೆ ಬರುವ ಮುಂಚೆ ನೀರು ಬಿಡಲು ಪ್ರಾರಂಭ ಮಾಡಿರುವ ರಾಜ್ಯ ಸರ್ಕಾರ ತನ್ನ ಕೈಯನ್ನು ತಾನೇ ಕಟ್ಟಿಸಿಕೊಂಡಿದೆ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಕಾನೂನಾತ್ಮಕ ಹೋರಾಟ ಮಾಡಬೇಕು” ಎಂದು ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಆದೇಶದಲ್ಲೇನಿದೆ?
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯು ನೀಡಿದ್ದ ಆದೇಶವನ್ನು ಮುಂದುವರಿಸಿದೆ. ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಬಿಡುವಂತೆ ಆದೇಶದಲ್ಲಿ ಉಲ್ಲೇಖಿಸಿದೆ. ಆದರೆ, 15 ದಿನಗಳ ಕಾಲ ನೀರು ಬಿಡುವ ಲೆಕ್ಕವನ್ನು ಸೆ. 13ರಿಂದ ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: Cauvery water dispute : ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು CWMA ಆದೇಶ!
ರಾಜ್ಯ ಸರ್ಕಾರದ ನಿರ್ಣಯ ಏನು?
ನಮ್ಮ ಕಾವೇರಿ ನದಿಯಲ್ಲಿಯೇ ನೀರಿಲ್ಲ, ಹೀಗಾಗಿ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಎರಡು ದಿನಗಳ ಹಿಂದಷ್ಟೇ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದರು. ಆದರೆ, ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 5 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚನೆ ನೀಡಿರುವುದನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತದೆಯೇ? ಅಥವಾ ಸೆಡ್ಡು ಹೊಡೆದು ನಿಲ್ಲುತ್ತದೆಯೇ ಎಂಬ ಕುತೂಹಲ ಮೂಡಿದೆ. ಅಲ್ಲದೆ, ಮಂಡ್ಯ ಭಾಗದ ರೈತರು, ವಿರೋಧ ಪಕ್ಷಗಳ ನಾಯಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಈಗಾಗಲೇ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ನಡೆ ತೀವ್ರ ಕುತೂಹಲವನ್ನು ಹುಟ್ಟುಹಾಕಿದೆ.