Site icon Vistara News

Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಎಚ್‌.ಡಿ. ಕುಮಾರಸ್ವಾಮಿ ಖಡಕ್‌ ಎಚ್ಚರಿಕೆ

Former Chief Minister HD Kumaraswamy talk aboubt Cauvery water dispute

ಬೆಂಗಳೂರು: ನಿತ್ಯವೂ ತಮಿಳುನಾಡಿಗೆ 5,000 ಕ್ಯೂಸೆಕ್‌ ಕಾವೇರಿ ನೀರು (Cauvery water to Tamil Nadu) ಹರಿಸಬೇಕೆಂದು ಕರ್ನಾಟಕಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ (Cauvery Water Regulation Committee – CWRC) ಕೊಟ್ಟಿರುವ ನಿರ್ದೇಶನ ಆಘಾತಕಾರಿ. ಯಾವ ಕಾರಣಕ್ಕೂ ರಾಜ್ಯ ಸರ್ಕಾರ ನೀರು ಹರಿಸಬಾರದು.‌ ಕೂಡಲೇ ನೀರು ನಿಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಆಗ್ರಹಿಸಿದ್ದಾರೆ. ಈ ಮೂಲಕ ಕಾವೇರಿ ಜಲ ವಿವಾದ (Cauvery water dispute) ಬಗೆಹರಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಸಂಕಷ್ಟಸೂತ್ರವೇ ಪಾಲನೆ ಆಗುತ್ತಿಲ್ಲ. ಕರ್ನಾಟಕಕ್ಕಷ್ಟೇ ಸಂಕಷ್ಟವೇ? ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ. ಆದೇಶ ಪಾಲನೆಗಷ್ಟೇ ಕರ್ನಾಟಕ, ಅನುಭವಿಸಲಿಕ್ಕೆ ತಮಿಳುನಾಡು!! ಹೀಗಿದೆ ನಮ್ಮ ಸ್ಥಿತಿ. ಆ ರಾಜ್ಯವು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದೆ ಎಂಬ ಅಂಕಿ-ಅಂಶದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿಲ್ಲ ಎನ್ನುವುದಕ್ಕೆ ಆ ಸಮಿತಿಯ ಆದೇಶವೇ ಸಾಕ್ಷಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: Chaithra Kundapura : ಮುಸ್ಲಿಮರ ಮೇಲೆ ಬೆಂಕಿ ಉಗುಳುವ ಚೈತ್ರಾ ಕುಂದಾಪುರ ಅಡಗಿ ಕುಳಿತದ್ದು ಮುಸ್ಲಿಮ್‌ ಫ್ರೆಂಡ್‌ ಮನೆಯಲ್ಲಿ!

ರಾಜ್ಯದವರಿಗೆ ಬದ್ಧತೆ ಇಲ್ಲದಿರುವುದು ದುರಂತ

ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆ ಸಭೆಗಳಿಗೆ ಅಧಿಕಾರಿಗಳು ಆನ್‌ʼಲೈನ್‌ನಲ್ಲಿ ಹಾಜರಾದರೆ, ನೆರೆರಾಜ್ಯದವರು ಖುದ್ದು ಹಾಜರಿದ್ದು ಅಂಕಿ-ಅಂಶ ಸಮೇತ ವಾದ ಮಂಡಿಸುತ್ತಾರೆ. ಹೀಗಾದರೆ, ರಾಜ್ಯದ ಹಿತರಕ್ಷಣೆ ಹೇಗೆ ಸಾಧ್ಯ? ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ. ಇದು ದುರಂತ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು. ಟ್ರಿಬ್ಯುನಲ್‌ ಆದೇಶ ಉಲ್ಲಂಘಿಸಿರುವ ತಮಿಳುನಾಡು ವಿರುದ್ಧ ಸಮರ್ಥ ವಾದ ಮಂಡಿಸಲು ಏಕೆ ಸಾಧ್ಯವಾಗಿಲ್ಲ? ನೀರಾವರಿ ಪ್ರದೇಶವನ್ನು ನೆರೆರಾಜ್ಯ ಅಕ್ರಮವಾಗಿ ವಿಸ್ತರಣೆ ಮಾಡಿಕೊಂಡಿರುವುದನ್ನು ಹೇಳಲೇಬೇಕಿತ್ತು. ಮೊದಲು ಸಂಕಷ್ಟಸೂತ್ರ ರೂಪಿಸಿ ಎಂದು ಪಟ್ಟು ಹಿಡಿಯಬೇಕಿತ್ತು ಎಚ್‌.ಡಿ. ಕುಮಾರಸ್ವಾಮಿ ಎಂದು ಹೇಳಿದ್ದಾರೆ.

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ

ಜಲ ನಿರ್ವಹಣೆ ಪ್ರಾಧಿಕಾರ, ಜಲ ನಿಯಂತ್ರಣ ಸಮಿತಿ ಏನು ಮಾಡುತ್ತಿವೆ? ಟ್ರಿಬ್ಯುನಲ್ ಆದೇಶ ಉಲ್ಲಂಘಿಸಿ, ನೀರಾವರಿ ಪ್ರದೇಶವನ್ನು ಹೆಚ್ಚಿಸಿಕೊಂಡಿರುವ ತಮಿಳುನಾಡು ಬಗ್ಗೆ ಇವುಗಳಿಗೆ ಮಾಹಿತಿ ಇಲ್ಲವೇ? ರಾಜ್ಯಗಳ ನೈಜಸ್ಥಿತಿ ಅರಿಯುವ ಕರ್ತವ್ಯ ಅವುಗಳಿಗೆ ಇಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿ ಯಾಕೆ? ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಮ್ಮ ರೈತರಿಗೆ ನೀರಿಲ್ಲದಿದ್ದರೂ, ಅವರು ಬೆಳೆಯನ್ನೇ ಬೆಳೆಯದಿದ್ದರೂ ನೀರು ಬಿಡಲು ಸರ್ಕಾರ ಒಪ್ಪಿದೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಪೂರ್ಣ ವಿಫಲವಾಗಿದೆ. ರೈತರ ತಾಳ್ಮೆಯನ್ನು ದುರುಪಯೋಗ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತದೆಯೋ ಅಲ್ಲಿಯವರೆಗೆ ಕಾಯಬೇಕಿತ್ತು. ಪ್ರಾಧಿಕಾರ, ಸಮಿತಿ ಹೇಳಿದವೆಂದು ನೀರು ಬಿಟ್ಟಿದ್ದು ತಪ್ಪು ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಾವೇರಿ ಬಗ್ಗೆ ಧ್ವನಿ ಎತ್ತಿ

ರೈತರ ಬಗ್ಗೆ ಕಾಳಜಿ, ಬೆಂಗಳೂರಿನ ಜನರ ಕುಡಿಯುವ ನೀರಿನ ಬಗ್ಗೆ ಆತಂಕ ಇದ್ದಿದ್ದರೆ ಸರ್ಕಾರ ನೀರು ಹರಿಸುತ್ತಿರಲಿಲ್ಲ. ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ. ನೆರೆ ರಾಜ್ಯಗಳಿಂದ ವಲಸೆ ಬಂದು ನಮ್ಮ ನೆಲ, ಜಲ, ಆರ್ಥಿಕತೆಯ ಆಸರೆಯಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರು ಯಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Weather report : ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಂದೂ ಸೇರಿ ಇನ್ನು 6 ದಿನ ಮಳೆಯಾರ್ಭಟ!

ಮೊಸಳೆ ಕಣ್ಣೀರು

ಸರ್ಕಾರ ಹೆಜ್ಜೆಹೆಜ್ಜೆಗೂ ಎಡವಿದೆ. ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದಾಕ್ಷಣ ರಾಜ್ಯ ಸರ್ಕಾರವೂ ತಕ್ಷಣವೇ ಆಕ್ಷೇಪ ಸಲ್ಲಿಸಬೇಕಿತ್ತು. ವಾಸ್ತವ ಸ್ಥಿತಿಯ ಬಗ್ಗೆ ದಾಖಲೆಗಳನ್ನು ಒದಗಿಸಿ, ಸಮರ್ಥವಾಗಿ ಎದುರಿಸಬೇಕಿತ್ತು. ಕಾಲಹರಣ ಮಾಡಿದ್ದಲ್ಲದೆ, ಈಗ ಕಾವೇರಿ ಬಗ್ಗೆ ಮೊಸಳೆ ಕಣ್ಣೀರು ಹಾಕಿದರೆ ಕನ್ನಡಿಗರು ನಂಬಬೇಕಾ? ಎಂದು ಎಚ್‌.ಡಿ. ಕುಮಾರಸ್ವಾಮಿ‌ ಪ್ರಶ್ನಿಸಿದ್ದಾರೆ.

Exit mobile version