Site icon Vistara News

DK Shivakumar : ಡಿಕೆಶಿ ಸಿಬಿಐ ಪ್ರಕರಣ ವಾಪಸ್;‌ ಬಿಜೆಪಿ ತಪ್ಪನ್ನು ಸರಿ ಮಾಡಿದ್ದೇವೆ ಎಂದ ಪ್ರಿಯಾಂಕ್‌ ಖರ್ಗೆ

Priyank Kharge and DK Shivakumar

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರು ಸಿಬಿಐಗೆ ವಹಿಸಿದ್ದ ಕೇಸ್‌ (CBI Case) ಅನ್ನು ರಾಜ್ಯ ಸರ್ಕಾರ ಗುರುವಾರ ವಾಪಸ್‌ ಪಡೆದಿರುವ ನಿರ್ಧಾರವನ್ನು ಸಚಿವ ಪ್ರಿಯಾಂಕ್‌ ಖರ್ಗೆ (Minister Priyank Kharge) ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಯಾವುದೇ ಒಬ್ಬ ಜನಪ್ರತಿನಿಧಿಯ ಕೇಸ್‌ ಅನ್ನು ಸಿಬಿಐಗೆ ವಹಿಸುವ ಮುಂಚೆ ಇರುವ ಕೆಲವು ನಿಯಮಗಳನ್ನು ಹೇಳಿದ್ದಾರೆ. ಅಂದಿನ ಬಿಜೆಪಿ ಸರ್ಕಾರ ಕಾನೂನನ್ನು ಉಲ್ಲಂಘಿಸಿ ಪ್ರಕರಣವನ್ನು ಸಿಬಿಐಗೆ ಕೊಟ್ಟಿದೆ ಎಂದು ದೂರಿದ್ದಾರೆ. ಸ್ಪೀಕರ್‌ ಅನುಮತಿಯನ್ನೂ ಪಡೆಯಲಾಗಿಲ್ಲ. ಜತೆಗೆ ಅಡ್ವೋಕೇಟ್‌ ಜನರಲ್‌ (Advocate General) ಮಾತನ್ನೂ ಪರಿಗಣಿಸಿಲ್ಲ ಎಂದು ಕಿಡಿಕಾರಿದ್ದಾರೆ. ಕಾನೂನು ಬಾಹಿರವಾಗಿ ಯಾಕೆ ಹೀಗೆ ಮಾಡಲಾಯಿತು ಎನ್ನುವುದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು. ನಾವು ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಯಾವ ರೀತಿಯಲ್ಲಿ ವಹಿಸಿದೆ ಎಂಬ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‌

ಇದನ್ನೂ ಓದಿ: DK Shivakumar : ನ್ಯಾಯಾಂಗದಿಂದ ತಪ್ಪಿಸಿಕೊಳ್ಳಲು ಕ್ಲಾಸಿಕ್ ಎಕ್ಸಾಂಪಲ್; ಕೋರ್ಟ್‌ ಕದ ತಟ್ಟಲು ಯತ್ನಾಳ್‌ ರೆಡಿ

ಈ ಬಗ್ಗೆ ಶುಕ್ರವಾರ (ನ. 24) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಈ ಹಿಂದೆ ಡಿಪಿಆರ್‌ನಿಂದ ಎರಡು ಪ್ರಶ್ನೆಯನ್ನು ಎತ್ತಲಾಗಿತ್ತು. ಸ್ಪೀಕರ್ ಅನುಮತಿ ಬೇಕು, ಅಡ್ವೋಕೇಟ್‌ ಜನರಲ್‌ ಅಭಿಪ್ರಾಯ ಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಸಿಬಿಐ ತನಿಖೆ ಮಾಡುವುದಾದರೆ ಡಿಪಿಆರ್‌ಗೆ ಬರುವುದೇ ಇಲ್ಲ. ಅದು ಗೃಹ ಇಲಾಖೆಗೆ ಬರುತ್ತದೆ. ಒಂದೇ ದಿನದಲ್ಲಿ 13-9-2019 ಗೃಹ ಇಲಾಖೆಗೆ ಪ್ರಕರಣ ಹೋಗುತ್ತದೆ. ಗೃಹ ಇಲಾಖೆ ಸಾಧಕ ಬಾಧಕ ನೋಡಿಕೊಂಡು ಮುಂದುವರಿಯುವಂತೆ ಹೇಳುತ್ತದೆ. ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುವುದು ಯಾರು ಎಂಬ ಬಗ್ಗೆಯೂ ಇಲ್ಲಿ ಅಧಿಕಾರಿಗಳು ಚರ್ಚೆ ಮಾಡುತ್ತಾರೆ. ಜನಪ್ರತಿನಿಧಿ ಇರುವುದರಿಂದ ಸಿಎಂ ಮುಂದೆ ಇಡುತ್ತೇವೆ ಎಂದು ಹೇಳುತ್ತಾರೆ. ಸಿಟ್ಟಿಂಗ್ ಎಂಎಲ್ಎ ಇರುವುದರಿಂದ ಎಜಿ ಅಭಿಪ್ರಾಯಕ್ಕೆ ರವಾನಿಸಲಾಗುತ್ತದೆ. ಎಜಿಯವರು ತಕ್ಷಣ ವರದಿ ಕೊಡುವುದಿಲ್ಲ, 5 ದಿನಗಳ ಕಾಲ ಕಾಯುತ್ತಾರೆ. 17-9-2019ಕ್ಕೆ ಎಜಿಗೆ ಫೈಲ್ ಹೋಗಿರುತ್ತದೆ. ಆರೇ ದಿನಗಳಲ್ಲಿ ತನಿಖೆಯ ಅನುಮತಿ ಯಾರಿಗೆ ಕೊಡಬೇಕು ಅಂತ ಹೊಸ ಫೈಲ್ ಓಪನ್ ಮಾಡುತ್ತಾರೆ ಎಂದು ತಿಳಿಸಿದರು.

ಕಾನೂನುಬಾಹಿರವಾಗಿ ಏಕೆ ಕೊಡಲಾಯಿತು?

24-9-2019ಕ್ಕೆ ಇದನ್ನು ಸಿಬಿಐಗೆ ನೀಡಬೇಕು ಎಂದು ನಿರ್ಧಾರ ಆಗುತ್ತದೆ. ಅಲ್ಲಿ ತನಕ ಕೂಡ ಎಜಿಯಿಂದ ವರದಿಯೇ ಬಂದಿರುವುದಿಲ್ಲ. ಎಜಿ ಅಭಿಪ್ರಾಯಕ್ಕೂ ಕಾಯದೇ ಕೇವಲ ಸಿಎಂ ಮೌಖಿಕ ಆದೇಶವನ್ನು ನೀಡಿ ಬಿಡುತ್ತಾರೆ. ಆ ಮೂಲಕ ಸಿಬಿಐ ತನಿಖೆಗೆ ಈ ಪ್ರಕರಣವನ್ನು ನೀಡಲಾಗುತ್ತದೆ. ಈಗ ಬಿಜೆಪಿಯವರು ಇದಕ್ಕೆ ಮೊದಲು ಉತ್ತರ ಕೊಡಬೇಕು. ಯಾಕೆ ಹೀಗೆ ಮಾಡಿದರು? ಕಾನೂನುಬಾಹಿರವಾಗಿ ಏಕೆ ಹೀಗೆ ಕೊಡಲಾಯಿತು ಎಂಬುದಕ್ಕೆ ಉತ್ತರವನ್ನು ನೀಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಎಜಿ ನೀಡಿದ ಅಭಿಪ್ರಾಯ ಇದು!

25-9-2021ಕ್ಕೆ ಸಿಬಿಐಗೆ ಅನುಮತಿ ನೀಡಿದ ದಿನವೇ ಎಜಿ ಕೂಡ ತಮ್ಮ ಅಭಿಪ್ರಾಯವನ್ನು ನೀಡುತ್ತಾರೆ. ರಾಜ್ಯ ತನಿಖಾ ಸಂಸ್ಥೆಯ ಮೂಲಕ ತನಿಖೆ ಮಾಡಿದ ಬಳಿಕ ನಾವು ಸಿಬಿಐಗೆ ನೀಡಬಹುದು ಎಂದು ಎಜಿ ಅಭಿಪ್ರಾಯ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಅಂದು ಎಜಿ ಹೇಳಿದ್ದೇನು?

ಪ್ರಕರಣವನ್ನು ಸಿಬಿಐಗೆ ನೀಡಬೇಕು‌ ಎಂದಾದರೆ ಕೆಲ ಮಾನದಂಡಗಳಿವೆ. ಬಿಜೆಪಿಯವರೇ ನಿಮ್ಮ ಸರ್ಕಾರ ಏನು ಬರೆದಿದೆ ಎಂದು ನೀವೇ ಓದಿಲ್ಲ. ಸೆಕ್ಷನ್ 17ರ ಪ್ರಶ್ನೆಯೇ ಏಳುವುದಿಲ್ಲ ಎಂದು ಎಜಿ ಅಭಿಪ್ರಾಯಪಟ್ಟಿದ್ದಾರೆ. ಸಿಬಿಐಗೆ ತನಿಖೆ ಹೊಣೆ ವಹಿಸಲು ಸ್ಥಳೀಯ ಪೊಲೀಸರ ಚಾರ್ಜ್‌ಶೀಟ್ ಇರಬೇಕು ಎಂದು ಎಜಿ ಅಭಿಪ್ರಾಯ ಕೊಟ್ಟಿದ್ದಾರೆ. ಅಂದು ಸಿಬಿಐಗೆ ತನಿಖೆಗೆ ವಹಿಸುವಾಗ ಚಾರ್ಜ್‌ಶೀಟ್ ನಿಮ್ಮ ಬಳಿ ಎಲ್ಲಿ ಇತ್ತು? ಸಿಬಿಐ ತನಿಖೆಗೆ ವಹಿಸುವಾಗ ಎಫ್ಐಆರ್ ಬೇಕು ಅಂದಿದ್ದಾರೆ. ಎಲ್ಲಿತ್ತು ತನಿಖಾ ವರದಿ, ಎಫ್ಐಆರ್ ಕಾಪಿ? ಕೋರ್ಟ್ ಕೇಸ್ ವಿವರ ಇರಲಿಲ್ಲ. ಎಫ್ಐಆರ್ ಇರಲಿಲ್ಲ. ಚಾರ್ಜ್‌ಶೀಟ್ ಇರಲಿಲ್ಲ. ಯಾವುದೂ ಇರಲಿಲ್ಲ. ಯಾವ ಸ್ವಿಸ್ ಬ್ಯಾಂಕ್ ಅಕೌಂಟ್ ಇತ್ತಾ ಇಲ್ಲಿ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಮಾಡಿದರು.

ರಾಜಕೀಯ ದುರುದ್ದೇಶ

ಸ್ಥಳೀಯ ಪೊಲೀಸರು ತನಿಖೆ ಮಾಡಲು ಸಾಧ್ಯ ಇಲ್ಲದಿದ್ದರೆ ಕಾರಣವನ್ನು ನೀಡಿ ಎಂದು ಸಿಬಿಐ ಹೇಳಿದೆ. ಇದಕ್ಕೆ ನೀವು ಏನು ಕಾರಣ ನೀಡಿದ್ದೀರಿ? ಆ ತರಹ ಮಾಹಿತಿ ಇದ್ದರೆ ತೋರಿಸಿ ನೋಡೋಣ? ಸಿಬಿಐ ಹೇಳಿದ ಯಾವ ಕ್ರೈಟಿರಿಯಾವನ್ನು ನೀವು ಫುಲ್‌ಫಿಲ್ ಮಾಡಿದ್ದೀರಿ ಹೇಳಿ? ಇದನ್ನು ಸಿಬಿಐಗೆ ಕೊಟ್ಟಿರುವುದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

ಬಿಜೆಪಿಯವರೇ ಉತ್ತರ ಕೊಡಿ

ಕಾಂಗ್ರೆಸ್ ನಾಯಕರಿಗೆ ಭಯ ಹುಟ್ಟಿಸಲು ಈ ರೀತಿ ಮಾಡಿದ್ದಾರೆ. ನಾನು ಹೇಳುತ್ತಿರುವ‌ ಎಲ್ಲ ದಾಖಲೆಗಳು ಹಿಂದಿನ ಸರ್ಕಾರದ ದಾಖಲೆಗಳಾಗಿವೆ. ನಾವು ಕಾನೂನು ಪ್ರಕಾರ ವಾಪಸ್ ಪಡೆದರೆ ಇವರಿಗೆ ಬೆಂಕಿ ಬಿದ್ದ ಹಾಗೆ ಆಡುತ್ತಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಇದನ್ನೂ ಓದಿ: DK Shivakumar : ಸಿಬಿಐ ಪ್ರಕರಣ ವಾಪಸ್‌; ನಾವ್‌ ಮಾಡಿದ್ದೇ ಸರಿ: ಬಿಜೆಪಿ ಕ್ರಮ ಇಲ್ಲೀಗಲ್‌ ಎಂದ ಸಿಎಂ!

ಕಾನೂನಾತ್ಮಕವಾಗಿ ಪ್ರಕರಣ ವಾಪಸ್‌ ಪಡೆದಿದ್ದೇವೆ

1-10-2019 ರಂದು ಕೇಂದ್ರ ಮತ್ತೊಂದು ಪತ್ರವನ್ನು ಕಳುಹಿಸುತ್ತದೆ. ತನಿಖೆಗೆ ವಹಿಸಿದ್ದಕ್ಕೆ ವಿವರವಾದ ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಮಾಹಿತಿ ಕೇಳುತ್ತದೆ. ಅದಕ್ಕೂ ಕೂಡ ಸರ್ಕಾರದ ಬಳಿ ಯಾವುದೇ ಎಫ್ಐಆರ್ ಇರಲಿಲ್ಲ. ಯಾವ ಕಾರ್ಯಸಾಧು ವರದಿ ಸರ್ಕಾರದ ಬಳಿ ಇತ್ತು? ಎಜಿ ರಿಪೋರ್ಟ್‌ಗೂ ಮೊದಲೇ ಸಿಬಿಐ ತನಿಖೆಗೆ ನೀಡಲು ಆದೇಶ ಮಾಡಿದ್ದು ಯಾಕೆ? ಸಿಬಿಐಗೆ ವಹಿಸಿದ 13 ತಿಂಗಳ ಬಳಿಕ ಎಫ್ಐಆರ್ ಮಾಡಲಾಗಿದೆ. ಅಕ್ಟೋಬರ್ 3 ರಂದು ಸಿಬಿಐ ಎಫ್ಐಆರ್ ದಾಖಲು ಮಾಡಿದೆ. ಕೇಂದ್ರ ಬಿಜೆಪಿ ಹಾಗೂ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ದುರುದ್ದೇಶದಿಂದ ಈ ರೀತಿ ಮಾಡಿದ್ದರು. ಕಾನೂನು ಉಲ್ಲಂಘನೆ ಮಾಡಿ ಪ್ರಕರಣ ಸಿಬಿಐಗೆ ವಹಿಸಿದ್ದರು. ಕಾನೂನು ವಿರುದ್ಧ ಇವರು ಮಾಡಿದ್ದನ್ನು ಕಾನೂನಾತ್ಮಕವಾಗಿ ನಾವು ವಾಪಸ್ ಪಡೆಯುತ್ತಿದ್ದೇವೆ. ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ನಾವು ಚರ್ಚೆಗೆ ಸಿದ್ಧವಾಗಿದ್ದೇವೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Exit mobile version