ಬೆಂಗಳೂರು: ಎಚ್. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ (Backward Classes Commission) ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿ (ಜಾತಿ ಗಣತಿ – Caste Census) ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಸರ್ಕಾರ (Congress Government) ನಾಟಕವಾಡುತ್ತಿದೆ. ವರದಿ ನಾಪತ್ತೆ ಸೇರಿದಂತೆ ಈ ಹಿಂದಿನ ತಪ್ಪುಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar) ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿ. ಸುನಿಲ್ ಕುಮಾರ್, ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಬದ್ಧತೆ ಇದ್ದರೆ ವರದಿ ಅಧ್ಯಯನದ ಬಗ್ಗೆ ಸಂಪುಟ ಉಪಸಮಿತಿ ರಚಿಸುವ ಇನ್ನೊಂದು ನಾಟಕ ಕೈ ಬಿಡಬೇಕು. ಈ ಹಿಂದಿನ ತಪ್ಪುಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: BJP Karnataka : ಅತೃಪ್ತಿ ಶಮನಕ್ಕೆ ಮುಂದಾದ ಬಿ.ವೈ. ವಿಜಯೇಂದ್ರ; ಜಾರಕಿಹೊಳಿ ಜತೆ ಮಾತುಕತೆ
ಜಾತಿ ಗಣತಿ ವರದಿಯಲ್ಲಿನ ಗೋಜಲುಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ. 162 ಕೋಟಿ ರೂ.ವೆಚ್ಚದಲ್ಲಿ ತಯಾರಿಸಿದ ವರದಿಯ ಉದ್ದೇಶವೇ ಈಡೇರುತ್ತಿಲ್ಲ ಎಂದರೆ ಅರ್ಥವೇನು ? ಎಂದು ವಿ. ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ವರದಿ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್ ನಾಪತ್ತೆಯಾಗಿದ್ದಾರೆ. ವರದಿಗೆ ಏಕೆ ಸಹಿ ಹಾಕಿಲ್ಲ ಎಂಬ ಬಗ್ಗೆ ಸದಸ್ಯ ಕಾರ್ಯದರ್ಶಿ ಮಗುಮ್ಮಾಗಿದ್ದಾರೆ. ಆಯೋಗದ ವರದಿಗೆ ಅವರು ಅಂದು ಸಹಿ ಹಾಕಿಲ್ಲ ಎಂದರೆ ತಾವು ಈ ವರದಿಯ ಭಾಗವಾಗಲು ತಯಾರಿಲ್ಲ ಎಂದರ್ಥವಲ್ಲವೇ? ಅಂದರೆ ವರದಿ ತಯಾರಿ ಹಂತದಲ್ಲೇ ಭಾರಿ ಲೋಪ ಹಾಗೂ ಅವ್ಯವಹಾರ ನಡೆದಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಉಪ ಸಮಿತಿ ರಚನೆ ನಾಟಕ ಕೈಬಿಡಿ
ಸಾಮಾಜಿಕ ನ್ಯಾಯದ ಬಗ್ಗೆ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಬದ್ಧತೆ ಇದ್ದರೆ ವರದಿ ಅಧ್ಯಯನದ ಬಗ್ಗೆ ಸಂಪುಟ ಉಪಸಮಿತಿ ರಚಿಸುವ ಇನ್ನೊಂದು ನಾಟಕ ಕೈ ಬಿಟ್ಟು ಹಿಂದಿನ ತಪ್ಪುಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಿ ಎಂದು ವಿ. ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಮದುವೆ ಗಂಡಿಗೆ ಬಾಸಿಂಗವೇ ಇಲ್ಲದಂತೆ ಆಗಿದೆ
ಮೂಲ ಪ್ರತಿಯೇ ಇಲ್ಲದ, ಕಾರ್ಯದರ್ಶಿಯ ಸಹಿಯೇ ಇಲ್ಲದ ಜಾತಿ ಗಣತಿ ವರದಿ ಎಂದರೆ “ಮದುವೆ ಗಂಡಿಗೆ ಬಾಸಿಂಗವೇ ಇಲ್ಲ”ದಂತೆ. ಸಿದ್ದರಾಮಯ್ಯನವರೇ ಹಿಂದುಳಿದ ವರ್ಗ ಹಾಗೂ ದಲಿತ ಸಮುದಾಯಕ್ಕೆ ಎಂಥ ದ್ರೋಹ ಮಾಡಿ ಬಿಟ್ಟಿರಿ! ನೀವೆಸಗಿದ ಈ ತಪ್ಪನ್ನು ಇತಿಹಾಸ ಕ್ಷಮಿಸದು ಎಂದು ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Karnataka Weather: ಗುರುವಾರ, ಶುಕ್ರವಾರ ಭಾರಿ ಮಳೆ; ಬೆಂಗಳೂರಲ್ಲಿ ಸ್ವಲ್ಪ ಮಳೆ, ಅಲ್ಪ ಚಳಿ!
ಬರೋಬ್ಬರಿ 162 ಕೋಟಿ ರೂ. ವೆಚ್ಚ ಮಾಡಿ ತಯಾರಿಸಿದ ಜಾತಿ ಗಣತಿಯ ವರದಿಯೇ ಲಭ್ಯವಿಲ್ಲ ಎಂದರೆ ಇದಕ್ಕೆ ಹೊಣೆ ಯಾರು? ಪೋರ್ಜರಿ ವರದಿ ತಯಾರಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಹೊರಟಿದ್ದೀರಾ ? ಎಂದು ವಿ. ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.