ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮೈತ್ರಿ ಮಾಡಿಕೊಳ್ಳುವುದು ಬಿಜೆಪಿ – ಜೆಡಿಎಸ್ (BJP JDS alliance) ಪಕ್ಷಗಳಿಗೆ ಅನಿವಾರ್ಯವಾಗಿದೆ. ಅದರಲ್ಲೂ ಜೆಡಿಎಸ್ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲು ಹೋಗಿದೆ. ಜೆಡಿಎಸ್‌ನವರ ಕೈಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಾಧ್ಯ ಇಲ್ಲದ ಕಾರಣಕ್ಕೆ ಬಿಜೆಪಿ ಆಶ್ರಯವನ್ನು ಪಡೆದಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಈ ಮೊದಲು ರಾಜ್ಯದ ಜನರ ಹಿತದೃಷ್ಟಿಯಿಂದ ಕೋಮುವಾದಿ ಪಕ್ಷವನ್ನು ದೂರ ಇಡುತ್ತೇವೆ. ಬಿಜೆಪಿಯೇತರ ಸರ್ಕಾರ ನಮ್ಮ ಗುರಿ ಎಂದು ಹೇಳಿಕೆ ನೀಡುತ್ತಿದ್ದ ಜೆಡಿಎಸ್ ನಾಯಕರಿಗೆ ಈಗ ಪಕ್ಷದ ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಅಸಮರ್ಥತೆಯಿಂದಲೇ ಮೈತ್ರಿ
ಇನ್ನು ಬಿಜೆಪಿಯವರ ಕಥೆ ಏನೂ ಭಿನ್ನವಾಗಿಲ್ಲ. 80, 90,120, 150 ಸೀಟನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯವರ ಸ್ಥಿತಿ ಏನಾಗಿದೆ? ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಇತರ 10 ನಾಯಕರನ್ನು ಲೈನ್‌ಅಪ್ ಮಾಡಲೂ ಅವಕಾಶ ನೀಡಲಿಲ್ಲ ಎಂದರೆ ಇವರನ್ನು ಯಾವ ರೀತಿಯಲ್ಲಿ ಕೇಂದ್ರ ಬಿಜೆಪಿಯವರು ನೋಡುತ್ತಿರಬೇಕು ಎಂಬುದನ್ನು ಜನರೇ ಊಹಿಸಲಿ. ರಾಜ್ಯ ಬಿಜೆಪಿಯವರಿಗೆ ಯಾವುದೇ ರೀತಿಯಲ್ಲೂ ಗೆಲ್ಲಲು ಆಗದು ಎಂಬ ಕಾರಣಕ್ಕಾಗಿ ಆ ಪಕ್ಷದ ವರಿಷ್ಠರು ಮೈತ್ರಿಗೆ ತೀರ್ಮಾನ ಮಾಡಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: Power Point with HPK : ಕಾವೇರಿ ಸಭೆಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅಧಿಕಾರಿಗಳು ಭಾಗಿಯಾಗೋದೇ ಸರಿ!
ಕುಮಾರಸ್ವಾಮಿ ಅಲ್ಲ, ಯಾರೇ ಆದರೂ ಸ್ಪರ್ಧೆ ಮಾಡಲಿ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಎದುರಿಸಲು ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಥವಾ ಬಿಜೆಪಿಯಿಂದ ಯಾರು ಬೇಕಾದರೂ ಸ್ಪರ್ಧೆ ಮಾಡಲಿ, ಅದರ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ನಮ್ಮ ಪಕ್ಷ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎದುರಿಸುತ್ತದೆ. ನಮ್ಮ ಕ್ಯಾಂಡಿಡೇಟ್ ಅನ್ನು ಗೆಲ್ಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.