ಬೆಂಗಳೂರು: ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ಅಧಿಕಾರಿಗಳು ವಿಡಿಯೊ ಕಾನ್ಫರೆನ್ಸ್ ಮಾಡುವುದರಿಂದ ರಾಜ್ಯಕ್ಕೆ ಅನುಕೂಲ. ಇಲ್ಲಿಂದಲೇ ಸಮರ್ಥ ವಾದ ಮಂಡನೆ ಸಾಧ್ಯ. ನವ ದೆಹಲಿಗೆ ಹೋಗಿ ಚರ್ಚೆ ಮಾಡುವುದಕ್ಕಿಂತ ಇಲ್ಲಿ ಕುಳಿತು ವಾದ ಮಂಡಿಸುವಾಗ ವಿಸ್ತೃತವಾಗಿ ಹೇಳಬಹುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸುವ ವಾದವನ್ನು ಸಮರ್ಥನೆ ಮಾಡಿಕೊಂಡರು.
ಇದನ್ನೂ ಓದಿ: Power Point with HPK : ಬರ ಘೋಷಣೆಯಲ್ಲಿ ನಾವೇ ಮುಂದು; ಬಿಜೆಪಿಗೆ ಇನ್ನೊಂದು ತಿಂಗಳಾದರೂ ಆಗದು!
ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ನಮ್ಮ ಸರ್ಕಾರ ವಿಫಲ ಆಗಿಲ್ಲ. ಪ್ರಬಲವಾಗಿ ವಾದ ಮಂಡಿಸಿದ್ದರಿಂದಲೇ ಈಗ ಇಷ್ಟು ಕಡಿಮೆ ಪ್ರಮಾಣದಲ್ಲಿ ನೀಡು ಬಿಡಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚಿಸಿದೆ. ತಮಿಳುನಾಡಿನವರು ಪ್ರತಿ ದಿನ 24 ಸಾವಿರ ಕ್ಯೂಸೆಕ್ ಅನ್ನು ಬಿಡಬೇಕು ಎಂದು ಕೇಳಿಕೊಂಡಿದ್ದರು. ಆದರೆ, ನಾವು ಮೊದಲು 10 ಸಾವಿರ ಕ್ಯೂಸೆಕ್ ಕೊಟ್ಟೆವು. ಬಳಿಕ 5 ಸಾವಿರ ಕ್ಯೂಸೆಕ್ ಅನ್ನು ನೀಡುತ್ತಿದ್ದೇವೆ. ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ನಾವು ಸಮರ್ಥವಾಗಿ ವಾದ ಮಂಡಿಸಿದ್ದೇವೆ ಎಂದು ಸರ್ಕಾರದ ನಡೆಯನ್ನು ಚಲುವರಾಯಸ್ವಾಮಿ ಅವರು ಸಮರ್ಥಿಸಿಕೊಂಡರು.
ಇನ್ನು ನಮ್ಮ ಕೆಆರ್‌ಎಸ್‌ನಲ್ಲಿ ನೀರೇ ಇಲ್ಲದಿದ್ದರೆ ನಾವು ಬಿಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಿತ್ತು. ಆದರೆ, ಅವರು ಆ ಕೆಲಸವನ್ನು ಮಾಡುತ್ತಿಲ್ಲ. ಎರಡೂ ರಾಜ್ಯಗಳ ನೀರಾವರಿ ಸಚಿವರನ್ನು ಕರೆಸಿ ಮಾತುಕತೆ ಮೂಲಕ ಅವರು ಮಧ್ಯಸ್ಥಿಕೆಯನ್ನು ವಹಿಸಬಹುದಿಲ್ಲ. ಅವರು ಆಸಕ್ತಿ ತೋರುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬರುತ್ತೇವೆ ಎಂದು ಪತ್ರ ಬರೆದರೆ ಕೇಂದ್ರ ಸರ್ಕಾರದವರು ತಕ್ಷಣವೇ 24 ಗಂಟೆಯೊಳಗೆ ಅನುಮತಿ ಕೊಡಬೇಕು. ಆದರೆ, ಅವರು ಉದಾಸೀನ ಮಾಡುತ್ತಾರೆಂದರೆ ಏನರ್ಥ? ಎಂದು ಚಲುವರಾಯಸ್ವಾಮಿ ಪ್ರಶ್ನೆ ಮಾಡಿದರು.
ವಿದೇಶಕ್ಕೆ ಹೋಗುವ ಮೋದಿ ಚರ್ಚೆ ಮಾಡಲು ಸಮಯ ಕೊಡಲಿಲ್ಲ!
ಪ್ರಧಾನಿ ನರೇಂದ್ರ ಮೋದಿ ಅವರು ಈಗಲೂ ಚೀನಾ, ಆಸ್ಟ್ರೀಲಿಯಾಕ್ಕೆ ಬೇಕಿದ್ದರೆ ಹೋಗಿ ಬರುತ್ತಾರೆ. ಆದರೆ, ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಚರ್ಚೆ ಮಾಡಲು 10 ನಿಮಿಷ ಸಮಯಾವಕಾಶವನ್ನು ನೀಡಲು ಆಗುವುದಿಲ್ಲ ಎಂದು ಏನು ಹೇಳಬೇಕು? ಸಂಸತ್‌ನಲ್ಲಿ ರಾಜ್ಯದಿಂದ ಬಿಜೆಪಿಯಲ್ಲಿ 25 ಸಂಸದರಿದ್ದಾರೆ. ಇವರೆಲ್ಲರೂ ಏನು ಮಾಡುತ್ತಿದ್ದಾರೆ? ಇವರೆಲ್ಲರ ಜವಾಬ್ದಾರಿ ಏನು ಎಂಬುದನ್ನು ನೋಡಬೇಕು? ಜನರ ಸಮಸ್ಯೆ ದೊಡ್ಡದಲ್ಲವೇ? ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.
ಬಿಜೆಪಿಯವರಿಗೆ ಜನರ ಸಮಸ್ಯೆ ದೊಡ್ಡದಲ್ಲ. ರಾಜಕೀಯವೇ ದೊಡ್ಡದಾಗಿದೆ. ಅವರು ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿನ ತೀರ್ಪಿನ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: Power Point with HPK : ಸಿದ್ದರಾಮಯ್ಯ ಬಿಟ್ಟು ಯಾರೇ ಸಿಎಂ ಆಗಿದ್ರೂ ಐದಲ್ಲ, ಒಂದು ಗ್ಯಾರಂಟಿಯೂ ಜಾರಿ ಆಗ್ತಿರಲಿಲ್ಲ!
ಬಿಜೆಪಿಯವರೇಕೆ ಮಹದಾಯಿ ಸಮಸ್ಯೆ ಬಗೆಹರಿಸಿಲ್ಲ?
ತಮಿಳುನಾಡಿನಲ್ಲಿ ಡಿಎಂಕೆ ಜತೆಗೆ ಸಖ್ಯ ಇರುವುದರಿಂದ ರಾಜ್ಯದಿಂದ ಕಾವೇರಿ ನೀರನ್ನು ಬಿಟ್ಟು ರಾಜ್ಯದ ಹಿತವನ್ನು ಕಾಂಗ್ರೆಸ್ ಬಲಿ ಕೊಟ್ಟಿತು ಎಂಬ ಪ್ರತಿಪಕ್ಷಗಳ ವಾದದಲ್ಲಿ ಹುರುಳು ಇಲ್ಲ. ಹಾಗಾದರೆ, ಈ ಹಿಂದೆ ರಾಜ್ಯ, ಪಕ್ಷದ ಗೋವಾ ಹಾಗೂ ಕೇಂದ್ರ ಸರ್ಕಾರವು ಬಿಜೆಪಿಯದ್ದೇ ಆಗಿತ್ತು. ಹಾಗಾದರೆ ಅವರು ಮಹದಾಯಿ ಯೋಜನೆ ಸಮಸ್ಯೆಯನ್ನು ಏಕೆ ಬಗೆಹರಿಸಲಿಲ್ಲ ಎಂದು ಎನ್. ಚಲುವರಾಯಸ್ವಾಮಿ ಪ್ರಶ್ನೆ ಮಾಡಿದರು.