Site icon Vistara News

Champai Soren: ಜಾರ್ಖಂಡ್‌ ರಾಜಕೀಯಲ್ಲಿ ಸಂಚಲನ; ಮಾಜಿ ಸಿಎಂ ಚಂಪೈ ಸೊರೆನ್ ಬಿಜೆಪಿ ಸೇರ್ಪಡೆ?

Champai Soren

ನವದೆಹಲಿ: ಜಾರ್ಖಂಡ್‌ ರಾಜಕೀಯದಲ್ಲಿ (Jharkhand Politics) ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha-JMM)ದ ಹಿರಿಯ ನಾಯಕ ಚಂಪೈ ಸೊರೆನ್ (Champai Soren) ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅವರು ಇದೀಗ ದೆಹಲಿಗೆ ತೆರಳಿದ್ದು, ಈ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ. ಈ ವರ್ಷ ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಈ ಬೆಳವಣಿಗೆ ಸಾಕಷ್ಟು ಕುತೂಹಲ ಕೆರಳಿಸಿದೆ.

ಶನಿವಾರ ಚಂಪೈ ಸೊರೆನ್‌ ಕೋಲ್ಕತ್ತಾದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರನ್ನು ಭೇಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸದ್ಯ ಚಂಪೈ ಸೊರೆನ್ ಅವರು ಜೆಎಂಎಂನ ನಾಲ್ವರು ನಾಯಕರೊಂದಿಗೆ ದೆಹಲಿಗೆ ಹಾರಿದ್ದಾರೆ. ಇತ್ತ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ್ದ ಚಂಪೈ ಸೊರೆನ್ ತಾವು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದರು. ʼʼಈ ರೀತಿಯ ಬೆಳವಣಿಗೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲʼʼ ಎಂದು ಹೇಳಿದ್ದರು.

5 ತಿಂಗಳು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ನಾಯಕ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ‌ ಜಾರಿ ನಿರ್ದೇಶನಾಲಯ (Enforcement Directorate) ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ (Hemant Soren) ಅವರನ್ನು ವಶಕ್ಕೆ ಪಡೆದಾಗ ಈ ವರ್ಷದ ಫೆಬ್ರವರಿಯಲ್ಲಿ ಚಂಪೈ ಸೊರೆನ್‌ ಜಾರ್ಖಂಡನ್‌ 12ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಅವರ ಅಧಿಕಾರಾವಧಿ 5 ತಿಂಗಳಿಗೆ ಕೊನೆಗೊಂಡಿತ್ತು. ಜುಲೈಯಲ್ಲಿ ಹೇಮಂತ್‌ ಸೊರೆನ್‌ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.

ಬಿಜೆಪಿ ನಾಯಕರ ಭೇಟಿ?

ಸದ್ಯ ಚಂಪೈ ಸೊರೆನ್‌ ಅವರ ದೆಹಲಿ ಪ್ರವಾಸ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವಾಗಿ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಜೆಎಂಎಂ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಅವರನ್ನು ಸಂಪೈ ಸೊರೆನ್‌ ಇತ್ತೀಚೆಗೆ ಭೇಟಿಯಾಗಿದ್ದರು. ಅದಾದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಹೆಂಬ್ರೋಮ್ ಅವರನ್ನು ಇತ್ತೀಚೆಗೆ ಜೆಎಂಎಂ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆದರೆ ಚಂಪೈ ಸೊರೆನ್‌ ವೈಯಕ್ತಿಕ ಅಗತ್ಯಗಳಿಗಾಗಿ ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ಕೆಲವು ದಿನಗಳ ಹಿಂದೆ ಜಾರ್ಖಂಡ್‌ನ ಬಿಜೆಪಿ ಜಿಲ್ಲಾ ಮುಖ್ಯಸ್ಥರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ್ದರು. ಆದಾಗ್ಯೂ ಚಂಪೈ ಸೊರೆನ್ ಬಿಜೆಪಿಗೆ ಸೇರುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಹಿಮಂತ ಬಿಸ್ವಾ ಶರ್ಮಾ ಯಾವುದೇ ಖಚಿತ ಹೇಳಿಕೆ ನೀಡಿರಲಿಲ್ಲ. “ಇನ್ನೂ ಯಾರು ನಮ್ಮೊಂದಿಗೆ ಸಂಪರ್ಕದಲ್ಲಿಲ್ಲ. ಚಂಪೈ ಸೊರೆನ್ ಬಹಳ ಹಿರಿಯ ನಾಯಕರು. ಅವರ ಬಗ್ಗೆ ಈಗಲೇ ನಾನು ಯಾವುದೇ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ” ಎಂದು ಹೇಳಿದ್ದರು.

ಇದನ್ನೂ ಓದಿ: Hemant Soren: ಜಾಮೀನು ಮಂಜೂರು; ಹೇಮಂತ್‌ ಸೊರೆನ್‌ಗೆ ಬಿಗ್‌ ರಿಲೀಫ್‌

Exit mobile version