ಬೆಂಗಳೂರು: ಚಂದ್ರಯಾನ 3 (Chandrayaan 3) ಯಶಸ್ವಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CMSiddaramaiah) ಅವರು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ (ISRO President Somanath) ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದರು. ಭಾರತದ ಐತಿಹಾಸಿಕ ಸಾಧನೆಗಾಗಿ ಅವರು ಗೌರವ ಸಲ್ಲಿಸಿದರು. ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಕೂಡಾ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸದೊಂದು ಮೈಲುಗಲ್ಲನ್ನು ನೆಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ವಿಜ್ಞಾನಕ್ಕೆ ನೆಹರೂ ಬೆಂಬಲ ನೆನಪು ಮಾಡಿಕೊಂಡ ಸಿಎಂ
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ 3 ಯೋಜನೆ ಭಾರತದ ಹಲವು ವರ್ಷಗಳ ಕನಸಾಗಿದೆ. ಇಸ್ರೋ ವಿಜ್ಞಾನಿಗಳು ಭಾರತೀಯರೆಲ್ಲರ ಕನಸನ್ನು ನನಸು ಮಾಡಿದ್ದಾರೆ. ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾರಂಭದ ದಿನಗಳಲ್ಲಿಯೇ ಬೆಂಬಲ ಮತ್ತು ನೆರವನ್ನು ನೀಡಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಪೂರ್ವವಾದ ಸಾಧನೆ ಮಾಡಿದೆ. ಭಾರತೀಯರೆಲ್ಲರಿಗೂ ಇದು ಹೆಮ್ಮೆಯ ಕ್ಷಣ. ಈ ಅಸಾಧಾರಣ ಸಾಧನೆ ಮಾಡಿದ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿ ಮತ್ತೊಮ್ಮೆ ನಿಚ್ಚಳವಾಗಿ ಪ್ರಕಾಶಿಸಿದೆ. ಇಸ್ರೋ ಸಂಸ್ಥೆಯ ಮುಂದಿನ ದಿನಗಳ ಎಲ್ಲಾ ಪ್ರಯತ್ನಗಳಿಗೂ ಶುಭ ಹಾರೈಸುತ್ತೇನೆ ಎಂದಿದ್ದಾರೆ ಸಿದ್ದರಾಮಯ್ಯ.
ಸಮಸ್ತ ಭಾರತಕ್ಕೆ ಸಂತಸ, ಹೆಮ್ಮೆಯ ಕ್ಷಣ ಎಂದ ಬೊಮ್ಮಾಯಿ
ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇರಿಸಿದ ವಿಶ್ವದ ಮೊಟ್ಟ ಮೊದಲ ರಾಷ್ಟ್ರ ನಮ್ಮ ಭಾರತ. ಇದು ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಸಂತಸ ಹಾಗೂ ಹೆಮ್ಮೆಯ ಕ್ಷಣ. ಸಮಸ್ತ ಭಾರತೀಯರಿಗೆ ಹಾಗೂ ಇಸ್ರೋಗೆ ಹಾರ್ದಿಕ ಅಭಿನಂದನೆಗಳು ಎಂದು ಹೇಳಿದ್ದಾರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬೆಂಗಳೂರಿನಲ್ಲಿರುವ ಇಸ್ರೊ ಇಂಥ ಸಾಧನೆಯ ಮೂಲವಾಗಿರುವುದು ಕನ್ನಡ ನಾಡಿಗೆ ಹೆಮ್ಮೆ ಎಂದು ಅವರು ಖುಷಿಯಿಂದ ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇರಿಸಿದ ವಿಶ್ವದ ಮೊಟ್ಟ ಮೊದಲ ರಾಷ್ಟ್ರ ನಮ್ಮ ಭಾರತ. ಇದು ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಸಂತಸ ಹಾಗೂ ಹೆಮ್ಮೆಯ ಕ್ಷಣ. ಸಮಸ್ತ ಭಾರತೀಯರಿಗೆ ಹಾಗೂ @isro ಗೆ ಹಾರ್ದಿಕ ಅಭಿನಂದನೆಗಳು. #Chandrayaan_3 pic.twitter.com/FHPZ1PGFYv
— Basavaraj S Bommai (@BSBommai) August 23, 2023
ಚಂದ್ರಯಾನ 2 ವಿಫಲವಾದಾಗ ಇಸ್ರೊ ಮತ್ತು ಅಲ್ಲಿನ ವಿಜ್ಞಾನಿಗಳ ಬೆನ್ನು ತಟ್ಟಿ ಹೊಸ ಭರವಸೆ, ಧೈರ್ಯ ತುಂಬಿದ ಪ್ರಧಾನ ಮಂತ್ರಿಗಳು ಪ್ರೇರಣೆಯ ಫಲವಾಗಿ ಚಂದ್ರಯಾನ 3 ರೂಪುಗೊಂಡಿದೆ ಎಂದು ಬೊಮ್ಮಾಯಿ ಹೇಳಿದರು. ಅವರ ಪ್ರೋತ್ಸಾಹಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತದ ತ್ರಿವಿಕ್ರಮ ಸಾಧನೆ ಕೊಂಡಾಡಿದ ಎಚ್.ಡಿ. ಕುಮಾರಸ್ವಾಮಿ
ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ, ನೂರಾ ಇಪ್ಪತ್ತೈದು ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ. @ISRO ನಮ್ಮ ಹೆಮ್ಮೆ. ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆ ಮೂಲಕ ಖಗೋಳ ಸಂಶೋಧನೆಗೆ ನಿರ್ಣಾಯಕ ತಿರುವು ಕೊಟ್ಟಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಕೇವಲ ಪದಗಳಿಂದ ಬಣ್ಣಿಸಿದರೆ ಸಾಲದು. ಹಗಲಿರುಳು ಶ್ರಮಿಸಿದ ಅವರ ಯಶಸ್ಸನ್ನು, ಅರ್ಪಣಾ ಮನೋಭಾವವನ್ನು ಹೃದಯಪೂರ್ವಕವಾಗಿ ಕೊಂಡಾಡಿ ಗೌರವಿಸೋಣ ಎಂದು ಹೇಳಿದ್ದಾರೆ.
ಅಮೆರಿಕ, ರಷ್ಯಾ, ಚೀನಾ ನಂತರ ಚಂದ್ರನ ಮೇಲೆ ರೋವರ್ ಇಳಿಸಿದ ಈ ಸಾಧನೆ ಐತಿಹಾಸಿಕ. ಇಸ್ರೋದ ಈ ಪಯಣ ನನಗೆ ರೋಮಾಂಚನ ಉಂಟು ಮಾಡಿದೆ. ಸಂಸ್ಥೆಯ ಅಧ್ಯಕ್ಷರಾದ ಡಾ.ಸೋಮನಾಥ್ ಸೇರಿದಂತೆ ಅವರ ತಂಡದ ಎಲ್ಲಾ ವಿಜ್ಞಾನಿಗಳು, ತಾಂತ್ರಿಕ ನಿಪುಣರು, ಮತ್ತಿತರರಿಗೆ ನನ್ನ ಅಭಿನಂದನೆಗಳು ಎನ್ನುವುದು ಕುಮಾರಸ್ವಾಮಿ ಮಾತು.
ಭಾರತ ವಿಕ್ರಮ ಸಾಧಿಸಿದೆ. ನಮೆಲ್ಲರ ಕನಸು ನನಸಾಗಿದೆ, ನೂರಾ ಇಪ್ಪತ್ತೈದು ಕೋಟಿ ಭಾರತೀಯರ ನಿರೀಕ್ಷೆ ನಿಜವಾಗಿದೆ.@ISRO ನಮ್ಮ ಹೆಮ್ಮೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 23, 2023
ಜಗತ್ತಿನಲ್ಲಿಯೇ ಪ್ರಥಮವಾಗಿ ರೋವರ್ (ವಿಕ್ರಮ ಲ್ಯಾಂಡರ್)ಅನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸುವ ಮೂಲಕ ಚಂದ್ರಯಾನ-3 ಮಹಾನ್ ಸಾಹಸವನ್ನು ಇಸ್ರೋ ಪೂರೈಸಿದೆ.1/3#Chandrayan3 #ISRO pic.twitter.com/ziJTa6Zako
ಇದನ್ನೂ ಓದಿ: Chandrayaan 3 : ಚಂದ್ರಯಾನ ಯಶಸ್ಸಿನ ಬಗ್ಗೆ ಇಸ್ರೊ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?