Site icon Vistara News

Parashurama Theme Park: ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಸಿಐಡಿ ತನಿಖೆಗೆ; ಸಿಎಂ ಆದೇಶ

Parashuram theme park

ಉಡುಪಿ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ (Parashurama Theme Park) ನಿರ್ಮಾಣ ಕಾಮಗಾರಿಯಲ್ಲಿ ಆಗಿರುವ ಕಳಪೆ ಹಾಗೂ ಅವ್ಯವಹಾರದ ಬಗ್ಗೆ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಿಐಡಿಗೆ ಒಪ್ಪಿಸಿದ್ದಾರೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರ ಶಿಫಾರಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಥೀಮ್‌ ಪಾರ್ಕ್‌ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಫೆಬ್ರವರಿ 2ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್.‌ ಹೆಬ್ಬಾಳ್ಕರ್ ಅವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಈಗ ಮುಖ್ಯಮಂತ್ರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.

CID to probe Parashuram theme park work CM Siddaramaiah order

ಪರಶುರಾಮ‌ ಥೀಮ್‌ ಪಾರ್ಕ್‌ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಹಾಗೂ ಅವ್ಯವಹಾರದ ಬಗ್ಗೆ, ಜತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಖುದ್ದು ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿತ್ತು.

ಆದೇಶದಲ್ಲೇನಿದೆ?

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಫೆ. 2ರಂದು ಬರೆದ ಪತ್ರದಲ್ಲಿ ಪರಶುರಾಮ ಥೀಂ ಪಾರ್ಕ್‌ ಕಾಮಗಾರಿಯಲ್ಲಿ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದ ಹಾಗೂ ಜನರ ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ವರದಿ ಮಾಡಿರುವುದು ತಿಳಿದುಬಂದಿದೆ. ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಸಿಒಡಿ ಅಥವಾ ಉನ್ನತ ಮಟ್ಟದ ತನಿಖೆ ನಡೆದಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಒಡಿ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.

ಬಿಜೆಪಿ ಅವಧಿಯಲ್ಲಿ ನಿರ್ಮಾಣವಾಗಿದ್ದ ಥೀಮ್‌ ಪಾರ್ಕ್

ಸಮುದ್ರ ಮಟ್ಟದಿಂದ 500 ಮೀಟರ್ ಎತ್ತರದಲ್ಲಿ ಇರುವ ಈ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿ ಈ ಥೀಮ್‌ ಪಾರ್ಕ್‌ ನಿರ್ಮಾಣವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗ ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆಗಿದ್ದ ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಮುಂದಾಳತ್ವ ವಹಿಸಿ ನಿರ್ಮಾಣ ಮಾಡಿಸಿದ್ದರು.

ಏನುಂಟು ಪರಶುರಾಮ ಥೀಮ್ ಪಾರ್ಕ್‌ನಲ್ಲಿ?

ಆ ಗುಡ್ಡದ ಮೇಲೆ 33 ಅಡಿ ಎತ್ತರದ ಪರಶುರಾಮರ ಕಂಚಿನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾಗಿ ಹೇಳಲಾಗಿತ್ತು. ಆದರೆ, ಆ ಪ್ರತಿಮೆಯ ಕೆಲವು ಭಾಗವನ್ನು ಫೈಬರ್‌ನಲ್ಲಿ ಮಾಡಿರುವುದು ಬಳಿಕ ಬೆಳಕಿಗೆ ಬಂದಿತ್ತು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಲ್ಲದೆ, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಗಳೂ ಕೇಳಿ ಬಂದಿದ್ದವು.

ಇದನ್ನೂ ಓದಿ: CM Janaspandana: ವಿಶೇಷ ಚೇತನರಿದ್ದ ಜಾಗಕ್ಕೇ ತಿಂಡಿ ತಂದು ಕೊಟ್ಟ ಅಧಿಕಾರಿಗಳು!

ಇನ್ನು ಈ ಥೀಮ್‌ ಪಾರ್ಕ್‌ನಲ್ಲಿ ಮುನ್ನೆಲೆಗೆ ಒಂದು ಸಾವಿರ ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಒಂದು ಬಯಲು ರಂಗಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಭಜನಾ ಮಂದಿರವಿದ್ದು, ಅದರ ಪಕ್ಕದಲ್ಲಿ ಪರಶುರಾಮರ ಜೀವನದ ದೃಶ್ಯಗಳು ಇರುವ ಮ್ಯೂಸಿಯಂ ಇದೆ. ಕಲಾಪ್ರದರ್ಶನದ ಗ್ಯಾಲರಿ ಕೂಡ ಗಮನ ಸೆಳೆಯುತ್ತದೆ. ಈ ಥೀಮ್ ಪಾರ್ಕ್‌ಗೆ ಸರ್ಕಾರದ ವಿವಿಧ ಅನುದಾನಗಳಿಂದ 15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

Exit mobile version