Site icon Vistara News

Citizenship Amendment Act: ಕೋಮುಭಾವನೆ ಕದಡಲು ಮುಂದಾಯ್ತೇ ಕಾಂಗ್ರೆಸ್?‌ ಅಶೋಕ್‌ ಹಾಗೆ ಹೇಳಿದ್ಯಾಕೆ?

Citizenship Amendment Act Congress trying to disturb communal passions says R Ashok

ಬೆಂಗಳೂರು: ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (Citizenship Amendment Act) ಜಾರಿಗೆ ತಂದಿದೆ. ಆದರೆ, ಮಾನವೀಯತೆ ಇಲ್ಲದ ಕಾಂಗ್ರೆಸ್ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ. ಪೌರತ್ವ ಕೊಡಬೇಕೆ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್‌ (R Ashok) ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಆರ್.‌ ಅಶೋಕ್‌, ಕಾಂಗ್ರೆಸ್ ನಾಯಕರು ಕೋಮುಭಾವನೆ ಕೆರಳಿಸಲು ಸಿಎಎ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿರುವ ಅಲ್ಪಸಂಖ್ಯಾತರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಬೇರೆ ದೇಶಗಳಿಂದ ಬಂದ ಅಲ್ಪಸಂಖ್ಯಾತರು ಪಾದಚಾರಿ ಮಾರ್ಗದಲ್ಲಿ ಬದುಕುತ್ತಿದ್ದು, ಆಶ್ರಯ ಕಳೆದುಕೊಂಡಿದ್ದಾರೆ. ಮಾನವೀಯತೆ ಇಲ್ಲದ ಕಾಂಗ್ರೆಸ್ಸಿಗರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದಾರೆ. ಪೌರತ್ವ ಕೊಡಬೇಕೇ ಬೇಡವೇ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಈ ಸಾಮಾನ್ಯ ಜ್ಞಾನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಲ್ಲ ಎಂದರು.

ಬೆಂಗಳೂರು, ಮಂಡ್ಯದಲ್ಲಿ ನೀರಿನ ಕೊರತೆಗೆ ಕಾಂಗ್ರೆಸ್ಸೇ ನೇರ ಕಾರಣ

ರಾಜ್ಯದಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಈ ಸಣ್ಣ ಸಮಸ್ಯೆಯನ್ನು ಪರಿಹರಿಸಲು ಕೂಡ ಸರ್ಕಾರಕ್ಕೆ ಯೋಗ್ಯತೆಯಿಲ್ಲ. ಕಾವೇರಿ ಟ್ರಿಬ್ಯುನಲ್‍ನಲ್ಲಿ ಸರಿಯಾಗಿ ವಾದಿಸಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ತಮಿಳುನಾಡಿನ ಆತ್ಮೀಯ ಸ್ನೇಹಿತರಾದ ಮುಖ್ಯಮಂತ್ರಿ ಸ್ಟಾಲಿನ್ ಅವರ ಮನವೊಲಿಕೆಗಾಗಿ ಕಾವೇರಿಯನ್ನು ನೀಡಿದ್ದಾರೆ. ಬೆಂಗಳೂರು, ಮಂಡ್ಯದಲ್ಲಿ ನೀರಿನ ಕೊರತೆಗೆ ಕಾಂಗ್ರೆಸ್ಸೇ ನೇರ ಕಾರಣ. ಜನರು ವಲಸೆ ಹೋಗಲು, ಬೀದಿಗೆ ಬರಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಅಪಕೀರ್ತಿ ತರಲು ಕಾಂಗ್ರೆಸ್ ಸರ್ಕಾರವೇ ಕಾರಣ. ಲೋಕಸಭಾ ಚುನಾವಣೆಯಲ್ಲಿ ಜನರು ಈ ದುರಾಡಳಿತಕ್ಕೆ ತಿಲಾಂಜಲಿ ನೀಡಬೇಕು ಎಂದು ಆರ್‌. ಅಶೋಕ್‌ ಮನವಿ ಮಾಡಿದರು.

ಮೋದಿ ಭಾವಚಿತ್ರವನ್ನೂ ಹಾಕಿ

ಕೇಂದ್ರ ಸರ್ಕಾರದ ಯೋಜನೆಗಳನ್ನು ತಮ್ಮದು ಎಂಬಂತೆ ಬಿಂಬಿಸಿಕೊಳ್ಳುವಷ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಗೆಟ್ಟಿದ್ದಾರೆ. ಕೇಂದ್ರದಿಂದ ಅನುದಾನ ಸಿಗುವ ಯೋಜನೆಗಳ ಜಾಹೀರಾತಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನೂ ಹಾಕಬೇಕು ಎಂದು ಆರ್‌. ಅಶೋಕ್‌ ಆಗ್ರಹಿಸಿದರು.

ಹೊಸ ಮುಖಗಳಿಗೂ ಅವಕಾಶ

ಎರಡು ಬಾರಿ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು, ಟಿಕೆಟ್ ನಿರ್ಧಾರ ಅಂತಿಮಗೊಳ್ಳುತ್ತಿದೆ. ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ. ಹಳೇ ಬೇರು ಹೊಸ ಚಿಗುರು ಎನ್ನುವುದು ಬಿಜೆಪಿಯ ಧರ್ಮ. ಟಿಕೆಟ್ ಸಿಗುವುದಿಲ್ಲವೆಂದು ಯಾರೂ ಊಹೆ ಮಾಡಿಕೊಂಡು ಮಾತನಾಡುವುದು ಬೇಡ. 28ಕ್ಕೆ 28 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಟಿಕೆಟ್ ನೀಡಲಾಗುತ್ತಿದೆ. ಹೃದಯ ರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪಕ್ಷದ ಮಟ್ಟದಲ್ಲೂ ಚರ್ಚೆಯಾಗಿದೆ ಎಂದು ಆರ್‌. ಅಶೋಕ್‌ ತಿಳಿಸಿದರು.

ಇದನ್ನೂ ಓದಿ: Lok Sabha Election 2024: ಮಂಡ್ಯ ಜೆಡಿಎಸ್‌ಗೆ ಎಂದ ಎಚ್‌ಡಿಕೆ; ಸುಮಲತಾ ಮುಂದಿನ ನಡೆ ಏನು?

ಮ್ಯಾಚ್ ಆಡಿದರೆ ಗೆಲ್ಲಲು ಸಾಧ್ಯವೇ

ಬಿಜೆಪಿಯಲ್ಲಿ ಹೆಚ್ಚು ಪ್ರಜಾಪ್ರಭುತ್ವವಿದ್ದು, ಇಲ್ಲಿ ಯಾರೂ ಬಂಡಾಯವೇಳುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಮುಂದೆ ಯಾವುದೂ ನಡೆಯುವುದಿಲ್ಲ. ಮ್ಯಾಚ್ ಆಡುವ ಮುನ್ನ ಕ್ಯಾಪ್ಟನ್ ಇರಬೇಕು. ಯುದ್ಧ ಮಾಡಲು ಕೂಡ ಸೇನಾಧಿಪತಿ ಬೇಕು. ಅದು ಯಾರೆಂದು ನಿರ್ಧರಿಸುವ ಯೋಗ್ಯತೆ ಕಾಂಗ್ರೆಸ್‍ಗಿಲ್ಲ. ಇಂಡಿ ಒಕ್ಕೂಟದಲ್ಲಿ ಈಗ ದೊಡ್ಡ ನಾಯಕರಾರೂ ಇಲ್ಲ. ಎಕ್ಸ್ಟ್ರಾ ಪ್ಲೇಯರ್‌ಗಳು ಮಾತ್ರವಿದ್ದು, ಅವರನ್ನಿಟ್ಟುಕೊಂಡು ಮ್ಯಾಚ್ ಆಡಿದರೆ ಗೆಲ್ಲಲು ಸಾಧ್ಯವೇ ಎಂಬುದನ್ನು ಯೋಚಿಸಲಿ ಎಂದು ಆರ್‌. ಅಶೋಕ್‌ ಹೇಳಿದರು.

Exit mobile version