ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಿಬಿಐಗೆ ವಹಿಸಿದ್ದ ಕೇಸ್ (CBI Case) ಅನ್ನು ರಾಜ್ಯ ಸರ್ಕಾರ ಗುರುವಾರ ವಾಪಸ್ ಪಡೆದಿರುವ ನಿರ್ಧಾರವನ್ನು ಪ್ರತಿಪಕ್ಷಗಳು ಕಟುವಾಗಿ ಟೀಕಿಸಿವೆ. ಈ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Former Minister Basanagouda Patil Yatnal) ಅವರು ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ಟ್ವೀಟ್ ಮಾಡಿದ್ದು, “ನ್ಯಾಯಾಂಗವನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದರ ಕುರಿತು ಇದು ಕ್ಲಾಸಿಕ್ ಎಕ್ಸಾಂಪಲ್” ಎಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಮೇಲಿರುವ ಸಿಬಿಐ ಪ್ರಕರಣವನ್ನು ವಾಪಸ್ ಪಡೆದಿರುವ ನಿರ್ಧಾರವನ್ನು ಖಂಡಿಸಿರುವ ಬಸನಗೌಡ ಪಾಟೀಲ್ ಯತ್ನಾಳ್, ಎಜಿ ಶಶಿಕಿರಣ್ ಶೆಟ್ಟಿ ವಿರುದ್ಧವೂ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ವಿವಿಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ವಕೀಲರಾಗಿದ್ದರು. ಈಗ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಸಿಬಿಐ ಒಪ್ಪಿಗೆಯನ್ನು ಹಿಂಪಡೆಯಲು ಎಜಿಯಾಗಿ ಕರ್ನಾಟಕ ಕ್ಯಾಬಿನೆಟ್‌ಗೆ ಶಿಫಾರಸು ಮಾಡಿದ್ದಾರೆ. ಇದು ಸ್ಪಷ್ಟವಾದ ವ್ಯತಿರಿಕ್ತ ಕ್ರಮವಾಗಿದೆ. ಇದರಲ್ಲಿ ವೈಯಕ್ತಿಕ ವಕೀಲರು ಎಜಿ ಆಗುತ್ತಾರೆ ಮತ್ತು ಕ್ಯಾಬಿನೆಟ್‌ಗೆ ಸಿಬಿಐ ಪ್ರಕರಣವನ್ನು ಹಿಂಪಡೆಯಲು ಶಿಫಾರಸು ಮಾಡುತ್ತಾರೆ. ಆಶ್ಚರ್ಯಕರವಾಗಿ ಕ್ಯಾಬಿನೆಟ್ ಅದನ್ನು ಒಪ್ಪಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ರಾಜಕಾರಣಿಗಳು ಪ್ರಭಾವವನ್ನು ಬಳಸಿಕೊಂಡು ನ್ಯಾಯಾಂಗವನ್ನು ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದರ ಕುರಿತು ಕ್ಲಾಸಿಕ್ ಪ್ರಕರಣ ಇದಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ.
ಯತ್ನಾಳ್ ಟ್ವೀಟ್‌ನಲ್ಲೇನಿದೆ?
ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಕೀಲರಾಗಿ ಅವರ ಹಲವು ಭ್ರಷ್ಟಾಚಾರದ ಪ್ರಕರಣವನ್ನು ಕೈಗೆತ್ತುಕೊಂಡು ವಾದ ಮಂಡಿಸಿದ್ದರು.
ದುರಂತದ ವಿಷಯವೇನೆಂದರೆ, ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿ.ಬಿ.ಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡುತ್ತಾರೆ.
ಈ ಶಿಫಾರಸಿನ ಕಾನೂನಿನ ಮಾನ್ಯತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗದೆ ಅಂಗೀಕೃತವಾಗುತ್ತದೆ. ಇದು ಒಂದು ನಿಷ್ಪಕ್ಷಪಾತವಾದ ತನಿಖೆಗೆ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೋರಿ ಮಾಡಿದ ಪ್ರಹಸನ. ನ್ಯಾಷನಲ್ ಲಾ ಸ್ಕೂಲ್ ನ ‘ಪ್ರತಿಭೆ’ ಶಶಿಕಿರಣ್ ಅವರು ಈ ರೀತಿ contradictory ಆಗಿ ಜವಾಬ್ದಾರಿಗಳನ್ನು (roles ) ಮಾಡಬಾರದು.
ಕಾನೂನು ವ್ಯವಸ್ಥೆಯ ಅಣಕ ಮಾಡುವುದು (Mockery of Justice) ಕೆಲ ಪ್ರಭಾವಿ ರಾಜಕಾರಣಿಗಳಿಗೆ ಅಭ್ಯಾಸ ಆಗಿರುವುದು ದುರಂತ. ಸಚಿವ ಸಂಪುಟದಲ್ಲಿರುವ ಯಾವುದೇ ಸಚಿವರು ಇದು ಚರ್ಚೆಯಾಗಬೇಕು ಎಂದು ಹೇಳದೆ, ಇದಕ್ಕೆ ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಇವರು ಯಾವುದೇ ತಪ್ಪು ಮಾಡಿಲ್ಲವೆಂದರೆ, ಸಿ.ಬಿ.ಐ ಮೇಲೆ ಭಯ ಏಕೆ ?
ರಾಜ್ಯದ ಅಧೀನದಲ್ಲಿರುವ ಪೊಲೀಸರಿಗೆ ಒಪ್ಪಿಸಿದರೆ ಒಬ್ಬ ಪ್ರಭಾವಿ ರಾಜಕಾರಣಿಯ ಕರ್ಮಕಾಂಡವನ್ನು ಸುಲಭವಾಗಿ ಮುಚ್ಚಿಹಾಕಬಹುದು ಎಂದು ಇವರ ಯೋಜನೆ ಎಂಬುದು ಗೊತ್ತಿರುವ ವಿಷಯ.
ಖಾಸಗಿ ವಕೀಲರನ್ನು ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಿಸಿದ್ದು ಮತ್ತು ಇದೆ ಪ್ರಕರಣವನ್ನು ಅವರು ಶಿಫಾರಸು ಮಾಡುತ್ತಾರೆ ಎಂದರೆ ಇದು Contradiction ಆಗುವುದಿಲ್ಲವೇ” ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: DK Shivakumar : ಸಿಬಿಐ ಕೇಸ್ ವಾಪಸ್; ಕ್ಯಾಬಿನೆಟ್ ನಿರ್ಣಯದ ಬಗ್ಗೆ ಡಿಕೆಶಿಗೇ ಗೊತ್ತಿರಲಿಲ್ಲ!
ಕೋರ್ಟ್‌ಗೆ ಹೋಗುತ್ತೇನೆಂದ ಯತ್ನಾಳ್
ಪ್ರಕರಣವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇನೆ. ಭ್ರಷ್ಟಾಚಾರ ಪ್ರಕರಣ ಹಿಂಪಡೆಯಲು ಸರ್ಕಾರ ಮರು ಪರಿಶೀಲಿಸಬೇಕು” ಎಂದು ಯತ್ನಾಳ್ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ಆಗ್ರಹಿಸಿದ್ದಾರೆ.