Site icon Vistara News

Minister D Sudhakar : ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ

HD Kumaraswamy and Minister D Sudhakar on casteist slurs

ಬೆಂಗಳೂರು: ಸಚಿವ ಡಿ. ಸುಧಾಕರ್‌ (Minister D Sudhakar)​ ವಿರುದ್ಧದ ದಲಿತ ನಿಂದನೆ ಪ್ರಕರಣ ಸಂಬಂಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರ (Karnataka State Government) ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ದಲಿತರ ಮೇಲೆ ಸಚಿವರು ದರ್ಪ, ದೌರ್ಜನ್ಯ ತೋರಿದ್ದಾರೆ. ಮಚ್ಚು, ಕೊಡಲಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ಸುಧಾಕರ್‌ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಹಾಗೂ ಅವರನ್ನು ಬಂಧಿಸಬೇಕು. ದಲಿತರ ರಕ್ಷಣೆ ಮಾಡುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಈ ಸರ್ಕಾರದಲ್ಲಿ ಏನಾಗುತ್ತಿದೆ? ಸಚಿವರೇ ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂಥ ವ್ಯಕ್ತಿಯನ್ನು ಸಂಪುಟದಲ್ಲಿ ಇರಿಸಿಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದ ಎದುರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: Karnataka Politics : ಸರ್ಕಾರದ ವಿರುದ್ಧ ಮುಗಿಬೀಳಲು ಬಿಜೆಪಿ ಸಜ್ಜು; ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ

ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ

ಸಿದ್ದರಾಮಯ್ಯನವರೇ ನೀವು ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತ ಕೇಳುತ್ತಾ ಇರುತ್ತೀರಲ್ಲವೇ? ನಿಮಗೆ ಏನಿದೆ ಅಂತ ನಾನು ಕೇಳಲು ಬಯಸುತ್ತೇನೆ. ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿಗಳ ಮೇಲೆಯೇ ಒತ್ತಡ ಹೇರುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.

ಅಧಿಕಾರಿಗಳನ್ನು ಬಹಳ ಕೀಳಾಗಿ ನಡೆಸಿಕೊಳ್ಳುತ್ತಿದ್ದೀರಿ. ಎಫ್‌ಐಆರ್ ದಾಖಲಿಸಿದ ಅಧಿಕಾರಿಯನ್ನು ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಬಾ ಅಂತ ಬೆದರಿಕೆ ಹಾಕುತ್ತೀರಿ. ಇದಾ ದಲಿತರ ರಕ್ಷಣೆ? ಎಂದು ಎಚ್.‌ಡಿ. ಕುಮಾರಸ್ವಾಮಿ ಕಿಡಿಕಾರಿದರು.

ದಲಿತರ ಮೇಲೆ ದಬ್ಬಾಳಿಕೆ ಮಾಡಲಾ ಜನ ಮತ ಹಾಕಿದ್ದು?

ಈ ಭೂಮಿ ಪ್ರಕರಣ ಮುಗಿದೇ ಹೋಗಿತ್ತು. ಈಗ ಕಾನೂನುಬದ್ಧವಾಗಿ ಜೀವ ಕೊಟ್ಟಿದ್ದಾರೆ. ಎಲ್ಲದಕ್ಕೂ ತನಿಖೆ ತನಿಖೆ ಅಂತ ಹೇಳುತ್ತೀರಲ್ಲವೇ? ಇದಕ್ಕೆ ಯಾವ ತನಿಖೆ ಮಾಡುತ್ತೀರಾ? ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ ಕಾಗದದ ಚೂರು ಎಸೆದರು ಎಂದು ನೀವೆಲ್ಲ ಉದ್ದುದ್ದ ಭಾಷಣ ಮಾಡಿದ್ದರಲ್ಲ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರೇ? ಇವತ್ತು ಆ ದಲಿತ ಸಮುದಾಯದ ಹೆಣ್ಣು ಮಗಳ ಮೇಲೆ ಮಚ್ವು ಕೊಡಲಿ ಹಿಡಿದು ಬೆದರಿಸಲು ಹೊರಟಿದ್ದೀರಲ್ಲಾ? ಜನ ಇದಕ್ಕೇನಾ ನಿಮಗೆ ಮತ ಹಾಕಿದ್ದು? ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸುಧಾಕರ್‌ ಬಂಧನವಾಗಲಿ

ಮಚ್ಚು , ಕೊಡಲಿ, ಕತ್ತಿ ಹಿಡಿಯುವವರನ್ನು ಮಂತ್ರಿ ಮಾಡಿಕೊಂಡಿದ್ದೀರಲ್ಲಾ, ದಲಿತರ ಪರ ಕಾಳಜಿ ಇರುವ ವಿಧೇಯಕವನ್ನು ಬೇರೆ ಬೇರೆ ಸದನದಲ್ಲಿ ಪಾಸ್ ಮಾಡಿಕೊಂಡಿದ್ದೀರಲ್ಲ, ಕಸದ ಬುಟ್ಟಿಗೆ ಹಾಕಲಿಕ್ಕೆ ಆ ಬಿಲ್ ಅನ್ನು ಪಾಸ್ ಮಾಡಿಕೊಂಡಿದ್ದೀರಾ? ತಕ್ಷಣ ನಿಮ್ಮ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಿ, ಬಂಧಿಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದರು.

ನಾವು ಟೀಕೆ ಮಾಡಿದರೆ ಅಸೂಯೆ ಅಂತಾರೆ. ಇಂತಹ ಕೆಲಸ ಮಾಡಿದರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ? ಹೀಗೆನಾ ನೀವು ದಲಿತರನ್ನು ಉದ್ದಾರ ಮಾಡುವುದು? ಇದು ದಲಿತ ವಿರೋಧಿ, ಜನವಿರೋಧಿ ಸರ್ಕಾರ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ದಲಿತ ಸಂಘಟನೆಗಳಿಗೆ ಹೋರಾಟಕ್ಕೆ ಕರೆ

ದಲಿತ ಸಂಘಟನೆಗಳಿಗೂ ನಾನು ಮನವಿ ಮಾಡುತ್ತೇನೆ. ಅವರೂ ಇದನ್ನು ಗಮನಿಸಲಿ. ಅವರು ಈ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಇರಬಾರದು. ಈ ಮಂತ್ರಿಯ ವಿರುದ್ಧ ಹೋರಾಟ ನಡೆಸಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ಇದನ್ನೂ ಓದಿ : Minister D Sudhakar : ಡಿ. ಸುಧಾಕರ್‌ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಾಗಿದೆಯಾ ಎಂದು ಕೇಳಿದ ಸಿಎಂ!

ಏನಿದು ಪ್ರಕರಣ?

ದಲಿತ ಸಮುದಾಯದ ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ್ದ ದೂರಿನನ್ವಯ ಸಚಿವ ಡಿ. ಸುಧಾಕರ್‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ಸಚಿವ ಡಿ. ಸುಧಾಕರ್‌ ನಿರಾಕರಣೆ ಮಾಡಿದ್ದಾರೆ.

Exit mobile version