ಬೆಂಗಳೂರು: ನಾನಾಗಲೀ ನನ್ನ ಕುಟುಂಬದವರಾಗಲೀ ಅಧಿಕಾರದಲ್ಲಿದ್ದಾಗ ಪೊಲೀಸ್ ವರ್ಗಾವಣೆ ಸೇರಿದಂತೆ ಇನ್ನು ಯಾವುದೇ ವರ್ಗಾವಣೆಗೆ ದುಡ್ಡು (Transfer racket) ತೆಗೆದುಕೊಂಡಿಲ್ಲ. ಈ ಬಗ್ಗೆ ಮಾಗಡಿ ಬಾಲಕೃಷ್ಣ (Magadi Balakrishna) ಹಾಕಿರುವ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನೂ ಧರ್ಮಸ್ಥಳಕ್ಕೆ ಬರುತ್ತೇನೆ. ಅವರೂ ಧರ್ಮಸ್ಥಳಕ್ಕೆ ಬರಲಿ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಸೇರಿದಂತೆ 30 ಸಚಿವರೂ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸವಾಲು ಹಾಕಿದರು.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಸಿಎಂ, ಡಿಸಿಎಂ ಹಾಗೂ 30 ಸಚಿವರು ವರ್ಗಾವಣೆಯಲ್ಲಿ ದುಡ್ಡು ಮುಟ್ಟೇ ಇಲ್ಲ ಎಂದು ಪ್ರಮಾಣವನ್ನು ಮಾಡಲಿ. ಈ ಹಿಂದಿನ ಕಥೆಯಲ್ಲ ಬೇಡ. ಈಗ ಸರ್ಕಾರ ಬಂದು ಆರು ತಿಂಗಳ ಅವಧಿಯಲ್ಲಿ ನಡೆದ ವರ್ಗಾವಣೆಗೆ ಸಂಬಂಧಪಟ್ಟಂತೆ ಮಾತ್ರವೇ ಪ್ರಮಾಣ ಮಾಡಿದರೂ ಸಾಕು ಎಂದು ಸವಾಲು ಹಾಕಿದರು.
ಇದನ್ನೂ ಓದಿ: Mallikarjun Kharge: ಮಲ್ಲಿಕಾರ್ಜುನ ಖರ್ಗೆ ಐಐಸಿಸಿ ಅಧ್ಯಕ್ಷರಾಗಿ 1 ವರ್ಷ; ಏಳು-ಬೀಳುಗಳೇನು?
ನನಗೆ ಈ ರೀತಿ ವರ್ಗಾವಣೆಯ ದುಡ್ಡಿನಿಂದ ಹಣ ಪಡೆಯಬೇಕು ಎಂಬುದು ಇಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಫಂಡ್ ತೆಗೆದುಕೊಂಡು ಪ್ರಚಾರ ಕಾರ್ಯಗಳನ್ನು ನಡೆಸಿದ್ದೇನೆ. ನಾನು ಈ ಬಗ್ಗೆ ವಿಧಾನಸೌಧದಲ್ಲೇ ಹೇಳಿದ್ದೇನೆ. ನನ್ನ ಮನೆಯ ದುಡ್ಡು ತಂದು ಚುನಾವಣೆ ನಡೆಸಲಿಲ್ಲ. ಚುನಾವಣೆಗಾಗಿ ಪಕ್ಷಕ್ಕೆ ಫಂಡ್ ಪಡೆದಿದ್ದೇನೆ. ಭಿಕ್ಷೆ ಎತ್ತಿದ್ದೇನೆ. ನಿಮ್ಮ ರೀತಿ ಅಧಿಕಾರಿಗಳ ವರ್ಗಾವಣೆ ಮಾಡಿ ದುಡ್ಡು ಪಡೆದಿಲ್ಲ. ಆ ದುಡ್ಡಿನಲ್ಲಿ ಚುನಾವಣೆಯನ್ನು ಮಾಡುವುದೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಪ್ರಮಾಣಕ್ಕೆ ಧರ್ಮಸ್ಥಳವೋ, ಚಾಂಮುಂಡಿ ಸನ್ನಿಧಿಯೋ?
ಪ್ರಮಾಣ ಮಾಡಲು ನಾನು ಸಿದ್ಧನಿದ್ದೇನೆ. ಧರ್ಮಸ್ಥಳಕ್ಕೋ, ಚಾಮುಂಡಿ ಬೆಟ್ಟಕ್ಕೋ ಹೋಗೋಣ. ದೇವಸ್ಥಾನಕ್ಕೆ ಬರಲು ಸಿದ್ಧನಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ನಿಮ್ಮಿಂದ ನಾನು ಕಲಿಯಬೇಕಾ?
ನಮ್ಮ ಪಕ್ಷದ ಕಾರ್ಯಕರ್ತರನ್ನು ಸೆಳೆಯುತ್ತಿದ್ದೀರಿ. ತುಮಕೂರು, ಶಿವಮೊಗ್ಗ ಜಿಲ್ಲೆಯ ನಾಯಕರನ್ನು ಘರ್ ವಾಪ್ಸಿ ಮಾಡಿಕೊಂಡಿದ್ದಾರೆ. ಒಳ್ಳೆಯದಾಗಲಿ. ಬಿಜೆಪಿ ಜತೆ ಮೈತ್ರಿಗೆ ನಿಮ್ಮ ವಿರೋಧ ಇದೆ. ಆದರೆ, ನೀವು ಯಾರ ಯಾರ ಜತೆ ಹೊಂದಾಣಿಕೆ ಮಾಡಿದ್ದೀರಿ? ನೀವು ನಮ್ಮ ಮೈತ್ರಿ ಬಗ್ಗೆ ಮಾತನಾಡುವುದಾ? ನಿಮ್ಮಿಂದ ನಾನು ಕಲಿಯಬೇಕಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ರಾಮನಗರ ಜಿಲ್ಲೆಗೆ ಬ್ರಾಂಡ್ ಬೆಂಗಳೂರು ಬರಲು ಜಿಲ್ಲೆಯ ಬದಲಾವಣೆಗೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಗೆ ನನ್ನ ಕೊಡುಗೆ ಏನು? ನಿಮ್ಮ ಕೊಡುಗೆ ಏನು? ದೇವಸ್ಥಾನದ ಸನ್ನಿಧಿಯಲ್ಲಿ ಹೇಳ್ತೀನಿ ಅಂದಿರಿ. ಹಾಲಿನ ಪೌಡರ್ ಕಾರ್ಖಾನೆಗೆ (ಡೈರಿಗೆ) ಜಮೀನು ಸ್ವಾಧೀನಪಡಿಸಿಕೊಂಡಿರಿ. ರೈತರಿಗೆ ಎಷ್ಟು ಪರಿಹಾರ ಕೊಟ್ಟಿರಿ? ನೀವು ನಿಮ್ಮ ಪಟಾಲಂ – ಜಿಪಿಎ ಮಾಡಿಕೊಂಡು ಎಷ್ಟು ಹೊಡೆದಿರಿ? ರೈತರಿಗೆ ಸಾವಿರ ಕೊಟ್ಟು – ನೀವು ನಿಮ್ಮ ಪಟಾಲಂ ಲಕ್ಷ ಹೊಡೆದಿಲ್ಲವೇ? ಮಿಸ್ಟರ್ ಡಿ.ಕೆ. ಶಿವಕುಮಾರ್ ಅಧಿಕಾರ ಶಾಶ್ವತ ಅಲ್ಲ. ಆರಡಿ – ಮೂರಡಿ ಭೂಮಿಯಲ್ಲಿ ಹಿಡಿ ಮಣ್ಣಾಗಲು ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಲೋಕಸಭಾ ಚುನಾವಣೆ ಬಳಿಕ ಗೃಹಲಕ್ಷ್ಮಿ ಇಲ್ಲ
ನಿಮ್ಮ ನಾಲ್ಕು ಸ್ಕೀಮ್‌ಗಳ ಬಗ್ಗೆ ಜನ ಛೀ ಥೂ ಅಂತಾರೆ. ರಾಜಸ್ಥಾನದಲ್ಲಿ ಯಾಕೆ ಗೃಹಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ 10 ಸಾವಿರ ಸೀಮಿತ ಎಂದು ಘೋಷಣೆ ಮಾಡಿದಿರಿ? ಮತ್ತೆ ಇಲ್ಲಿ ಯಾಕೆ 24 ಸಾವಿರ ರೂಪಾಯಿ? ಅದನ್ನೂ ಕೊಡಲು ನಿಮ್ಮಿಂದ ಆಗುತ್ತಿಲ್ಲ. ಲೋಕಸಭಾ ಚುನಾವಣೆ ಬಳಿಕ ಕೊಡುವುದು ಸಹ ಅನುಮಾನ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ನಾನು ಅಮೆರಿಕಕ್ಕೆ ಹೋದ ತಕ್ಷಣ ಮೊದಲ ವಿಕೆಟ್ ಪತನ ಮಾಡಿದಿರಿ. ಐಎಂಎ ಆರೋಪಿ ರಕ್ಷಣೆಗೆ ಮುಂದಾಗಿದ್ದು ಯಾರು? ರಾಮಲಿಂಗಾರೆಡ್ಡಿ, ಬಿ.ಸಿ. ಪಾಟೀಲ್ ಅವರನ್ನು ಮಂತ್ರಿ ಮಾಡೋಣ ಅಂದೆ. ಪಕ್ಷೇತರ ಶಾಸಕರನ್ನು ಸಚಿವ ಸ್ಥಾನದಿಂದ ಇಳಿಸಿ ಎಂದು ಹೇಳಿದೆ. ಅವರಿಗೆ ಕೋಡೋಣ ಎಂದು ಹೇಳಿದೆ. ಯಾವುದೇ ಬದಲಾವಣೆ ಇಲ್ಲ (Nothing change) ಎಂದು ಹೇಳಿದವರು ಯಾರು? ಟವಲ್ ಕೊಡವಿಕೊಂಡು ಎದ್ದಿದ್ದು ಯಾರು? ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಮ್ಮಿಶ್ರ ಸರ್ಕಾರ ಬೀಳಿಸಲು ಕಾರಣ ಯಾರು? ಬಿಜೆಪಿ ಕೆಲಸ ಸುಲಭ ಮಾಡಿದ್ದು ನೀವು ಅಲ್ಲವೇ? ರಮೇಶ್ ಜಾರಕಿಹೊಳಿ ಮತ್ತು ತಂಡಕ್ಕೆ ಬೆಂಬಲ ಮಾಡಿದವರು ಯಾರು? ಇದೇ ಸಿದ್ದರಾಮಯ್ಯ, ಡಿಕೆಶಿ ಅಲ್ಲವೇ? ಸರ್ಕಾರ ರಚನೆ ಮಾಡಿ ತಕ್ಷಣ ಗರಗಸ ತಗೊಂಡು ಕೂಯ್ದಿದ್ದು ಯಾರು? ಈ ವಿಷಯವನ್ನು ಇಲ್ಲಿಗೆ ಬಿಟ್ಟರೆ ಸರಿ, ಇಲ್ಲವಾದರೆ ನಾನು ಇನ್ನೂ ಮಾತನಾಡಬೇಕಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟರು.
ನಾನು ಸಂಪಾದನೆ ಮಾಡಿದ್ದೇನೆ. ತಪ್ಪು ದಾರಿಗೆ ಇಳಿದಿದ್ದರೆ ತನಿಖೆ ಮಾಡಿ. 44 ಎಕರೆ ಜಮೀನು ಕೊಂಡುಕೊಂಡಿದ್ದು ಸಿನಿಮಾದಿಂದ ಬಂದ ದುಡ್ಡಿನಿಂದಾಗಿದೆ. ಎಕರೆಗೆ 4 ಸಾವಿರದಿಂದ 14 ಸಾವಿರದರವರೆಗೂ ಖರೀದಿ ಮಾಡಿದೆ. ಚುನಾವಣೆಗೂ ಮೊದಲು ಖರೀದಿ ಮಾಡಿದೆ. ಗಂಗಪ್ಪ, ಕೆಂಪರಾಜು ಯಾರು ಸ್ನೇಹಿತರು? ಬಾಲಕೃಷ್ಣ ನಿನ್ನ ಸ್ನೇಹಿತರೋ? ಧರ್ಮಸ್ಥಳ ಆದ್ರೂ ಓಕೆ ಚಾಮುಂಡೇಶ್ವರಿ ಆದ್ರೂ ಓಕೆ ನಾನು ಪ್ರಮಾಣ ಮಾಡಲು ರೆಡಿ. ಸಿಎಂ, ಡಿಸಿಎಂ ಎಲ್ಲರೂ ಬನ್ನಿ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.
ರಾಮನಗರದ ಮೇಲೇಕೆ ಕಣ್ಣು?
ದೊಡ್ಡ ಜಿಲ್ಲೆಗಳು ವಿಭಾಗವಾಗಿಲ್ಲವೇ? ಕಲಬುರಗಿ, ಯಾದಗಿರಿ ವಿಭಜನೆಯಾಯಿತು. ಮೈಸೂರು – ಚಾಮರಾಜನಗರ ವಿಭಜನೆಯಾಯಿತು. ಅಲ್ಲಿ ಇಲ್ಲದೇ ರಾಮನಗರ ಯಾಕೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಇದನ್ನೂ ಓದಿ: BS Yediyurappa : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರಿಗೆ ಝಡ್ ಕೆಟಗರಿ ಭದ್ರತೆ
2008-13 ಅವಧಿಯಲ್ಲಿ ಮಾಗಡಿ ಕ್ಷೇತ್ರದಲ್ಲಿ ತುಂಡು ಗುತ್ತಿಗೆಯಲ್ಲಿ 600 ಕೋಟಿ ರೂ. ಹಗರಣ ಅಂತ ಸಿದ್ದರಾಮಯ್ಯ ಅವರೇ ಆರೋಪ ಮಾಡಿದ್ದಾರೆ. ಚುನಾವಣೆ ಗೆದ್ದು ಸರ್ಕಾರ ರಚನೆ ಆದ ಬಳಿಕ ಸೈಲೆಂಟ್ ಆಗಿದ್ದು ಯಾಕೆ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.