ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರವು ಟೆಂಡರ್ ಆಹ್ವಾನಿಸುವಲ್ಲಿ ಭ್ರಷ್ಟಾಚಾರವೆಸಗುತ್ತಿದೆ(Tender Scam) ಎಂದು ಕಾಂಗ್ರೆಸ್ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಮೊದಲಿಗೆ ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಲಾದ ಟೆಂಡರ್‌ಗಳ ಕುರಿತು ಉತ್ತರ ನೀಡಲಿ ಎಂದರು.
ಕಳೆದ ಚುನಾವಣೆ ವೇಳೆ ಕಾಂಗ್ರೆಸ್‌ನವರು ಏನೆಲ್ಲ ಕರ್ಮಕಾಂಡ ಮಾಡಿದ್ರೋ ಅದನ್ನು ನೆನಪು ಮಾಡ್ಕೊಂಡು ಮಾತಾಡ್ತಿದಾರೆ. ಅವರು ಮುಂದೆ ಅಧಿಕಾರಕ್ಕೆ ಬಂದ್ರೆ ಸುಲಿಗೆ ಮಾಡೋಕ್ಕೇ ಬರ್ತಿದಾರೆ ಅನ್ನೋದು ಇದರಿಂದ ಸ್ಪಷ್ಟ ಆಗುತ್ತೆ. ಅವರ ಅಜೆಂಡಾ ಅವರೇ ಹೇಳಿಕೊಂಡಿದಾರೆ. 40% ಆರೋಪ ಇನ್ನೂ ಸಾಬೀತು ಮಾಡಿಲ್ಲ ಅವ್ರು. ಕೋರ್ಟಲ್ಲಿ ಕೇಸ್ ಕೊಡ್ತೀವಿ ಅಂದ್ರು, ಇನ್ನೂ ಕೊಟ್ಟಿಲ್ಲ ಎಂದರು.
ಕಾಂಗ್ರೆಸ್‌ನವರು ತಮ್ಮ ಕಾಲದ ಟೆಂಡರ್ ಹಗರಣಗಳ ಬಗ್ಗೆ ಉತ್ತರ ಕೊಡಲಿ. ಅವರ ಕಾಲದ ಅಕ್ರಮಗಳು ಲೋಕಾಯುಕ್ತದಲ್ಲಿ ತನಿಖೆ ಆಗ್ತಿವೆ, ಇದಕ್ಕೆ ಉತ್ತರ ಕೊಡಲಿ ಮೊದಲು. ನಾವು ಟೆಂಡರ್ ಸ್ಕ್ರೂಟಿನಿ ಕಮಿಟಿ ಮಾಡಿದ್ದೇವೆ. ಟೆಂಡರ್ ಗಳನ್ನು ಅತ್ಯಂತ ಪಾರದರ್ಶಕತೆಯಿಂದ ನಾವು ಮಾಡ್ತಿದೀವಿ. ಡಿಕೆಶಿ ಸಚಿವರಾಗಿದ್ದಾಗ ಟೆಂಡರ್ ಸ್ಕ್ರೂಟಿನಿ ಕಮಿಟಿ ತೆಗೆದು ಹಾಕಿದ್ರು ಎಂದು ಆರೋಪಿಸಿದರು.
ಬಿಜೆಪಿಯವರನ್ನು ಜೈಲಿಗೆ ಹಾಕ್ತೀವಿ ಎಂಬ ಕಾಂಗ್ರೆಸ್‌ನವರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೊದಲು ಅವರು ಜೈಲಿಗೆ ಹೋಗೋದನ್ನು ತಡೆಯಲಿ. ಅವರ ಬೇಲ್ ಗಳನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಲಿ ಎಂದರು.
ಕಾಂಗ್ರೆಸ್‌ನವರು ಇದ್ದಾಗ ಮುಟ್ಟಿದ್ದೆಲ್ಲ ಭ್ರಷ್ಟಾಚಾರ ಮಾಡಿದ್ರು. ಹಾಸಿಗೆ ದಿಂಬು, ಸೋಲಾರ್, ರೀಡೂ ಹೀಗೆ ಎಲ್ಲ ಕಡೆ ಭ್ರಷ್ಟಾಚಾರ ಮಾಡಿದ್ರು. ಲೋಕಾಯುಕ್ತ ಮುಚ್ಚಿದ್ರು, ನಾವು ಲೋಕಾಯುಕ್ತಕ್ಕೆ ಮರು ಜೀವ ಕೊಟ್ಟೆವು. ಈಗ ಲೋಕಾಯುಕ್ತದಲ್ಲಿ ಕಾಂಗ್ರೆಸ್‌ನವರ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಅವರು ಚಕಾರ ಎತ್ತಲ್ಲ. ಲೋಕಾಯುಕ್ತದಿಂದ ತಮ್ಮ ಬಣ್ಣ ಬಯಲಾಗುತ್ತೆ ಅಂತ ಮುಚ್ಚಿಹಾಕಿದ್ರು. ನಮ್ಮ ಮೇಲೆ ಕಾಂಗ್ರೆಸ್‌ನವರು ಆರೋಪ ಮಾಡ್ತಿದಾರೆ. ದಾಖಲೆ ಕೊಡಿ ಅಂದ್ರೆ ಇಲ್ಲ. ದಾಖಲೆ ಕೊಟ್ರೆ ತನಿಖೆ ಮಾಡಿಸ್ತೀವಿ ಎಂದರು.