ಬೆಂಗಳೂರು: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಕಲ್ಪಿಸಿರುವ ಮೀಸಲಾತಿಯ ಲಾಭವನ್ನು ಮತ್ತೆ ಮತ್ತೆ ಅದೇ ಕುಟುಂಬದವರು ಪಡೆದುಕೊಳ್ಳುತ್ತಿದ್ದು, ಸ್ವಾತಂತ್ರ್ಯ ಲಭಿಸಿ 75 ವರ್ಷವಾದರೂ ಹಳ್ಳಿಗಾಡಿನಲ್ಲಿರುವ ಅನೇಕರಿಗೆ ಇಂಥದ್ದೊಂದು ಯೋಜನೆ, ಮೀಸಲಾತಿ ಇದೆ ಎನ್ನುವುದೇ ತಿಳಿಯುತ್ತಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಬೊಮ್ಮಾಯಿ ಮಾತನಾಡಿದರು.
ಯಾವ್ಯಾವ ಜನಾಂಗಗಳಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿವೆ, ಯಾವ್ಯಾವ ಜನಾಂಗಗಳಿಗೆ ಸಿಕ್ಕಿಲ್ಲ ಎನ್ನುವ ಸೋಷಿಯಲ್ ಆಡಿಟ್ ಆಗಬೇಕು. ಯಾರ‍್ಯಾರಿಗೆ ಲಾಭ ಸಿಕ್ಕಿದೆ, ಯಾರಿಗೆ ಸಿಕ್ಕಿಲ್ಲ ಎಂಬ ಕುರಿತು ರಾಜ್ಯದ ಮಟ್ಟದಲ್ಲಿ, ದೇಶದೆಲ್ಲೆಡೆಯೂ ಅಧ್ಯಯನ ನಡೆಯಬೇಕು. ಆದರೆ ನಮಗೆ ಇಲ್ಲಿವರೆಗೆ ಇರುವ ಮಾಹಿತಿಯ ಪ್ರಕಾರ ಮೀಸಲಾತಿಯ ಲಾಭ ಕೆಲವೇ ಕೆಲವರಿಗೆ ಸಿಕ್ಕಿದೆ. ಯಾರಿಗೆ ಸಿಕ್ಕಿದೆಯೋ, ಮತ್ತೆ ಮತ್ತೆ ಅವರಿಗೇ ಸಿಗುತ್ತಿದೆ. ಸಂವಿಧಾನದ ಹಕ್ಕನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವುದನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ ದೂರದಲ್ಲಿ ಹಳ್ಳಿಯಲ್ಲಿರುವ ಕುಟುಂಬಗಳಿಗೆ ಇಂಥದ್ದೊಂದು ಮೀಸಲಾತಿ ಇದೆ, ಸೌಲಭ್ಯ ಇದೆ ಎನ್ನುವುದನ್ನು ತಿಳಿಸಲು 75 ವರ್ಷವಾದರೂ ಸಾಧ್ಯವಿಲ್ಲ.
ನಮಗೆ ಇರುವ ಕಾರ್ಯಕ್ರಮಗಳು ಏನು ಎನ್ನುವುದನ್ನು ಮೊದಲು ಅರಿಯಬೇಕು. ಹೆಸರಿಗೆ ಅನೇಕ ಯೋಜನೆಗಳಿರುತ್ತವೆ, ಆದರೆ ಅದರ ದೋಷಗಳಿಂದಾಗಿ ಕೊನೆಯ ವ್ಯಕ್ತಿಗೆ ಅದರ ಫಲ ಸಿಗದಂತೆ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯದ ಪರ ಮಾತನಾಡುವವರು ಇದರ ಬಗ್ಗೆ ಪ್ರಾಮಾಣಿಕವಾಗಿ ಆಲೋಚನೆ ಮಾಡಬೇಕು ಎಂದರು.
ಸಂವಿಧಾನಾತ್ಮಕ ನ್ಯಾಯ ಸಿಕ್ಕಿಲ್ಲ ಎನ್ನುವುದು ಸತ್ಯ. ಇದಕ್ಕೆ ಯಾರ‍್ಯಾರು ಹೊಣೆ, ಜವಾಬ್ದಾರಿ ಎನ್ನುವುದು ಅವರವರ ಆತ್ಮಾವಲೋಕನಕ್ಕೆ ಬಿಡಬೇಕು. ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ವಿಭಿನ್ನವಾಗಿ ಮಾಡುವ ಪ್ರಯತ್ನ ನಡೆಸಿದ್ದೇವೆ. ಗಂಗಾ ಕಲ್ಯಾಣ ಯೋಜನೆ ಒಟ್ಟು 17 ಸಾವಿರ ಜನರಿಗೆ ಮಂಜೂರಾತಿ ಆಗಿದೆ. 595 ಕೋಟಿ ರೂ. ಇದಕ್ಕೆ ಮಂಜೂರಾತಿ ಮಾಡಲಾಗಿದೆ. ಮೊದಲ ಹಂತದಲ್ಲಿ 8 ಸಾವಿರ ಫಲಾನುಣವಿಗಳಿಗೆ 75 ಸಾವಿರ ರೂ. ನೇರವಾಗಿ ಫಲಾನುಭವಿಗಳ ಖಾತೆಗೆ ಕಳಿಸಲಾಗುತ್ತಿದೆ. ಈ ಹಿಂದೆ ಬೋರ್ ವೆಲ್ ತೋಡುವುದು, ವಿದ್ಯುತ್ ನೀಡುವುದು, ಪಂಪ್ ಸಪ್ಲೈ ಮಾಡುವುದು ಸೇರಿ ಅನೇಕ ಕಾಂಟ್ರ್ಯಾಕ್ಟರ್‌ಗಳಿದ್ದರು. ಇದೆಲ್ಲದರಿಂದಾಗಿ ಸಾಕಷ್ಟು ಗೊಂದಲಗಳಾಗಿದ್ದವು.
ಯೋಜನೆ ಜಾರಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ನೀವು ತಿಳಿದುಕೊಂಡಂತೆ ಅವರ ಹೊಲದಲ್ಲೇ ಬೋರ್‌ವೆಲ್ ಆಗುತ್ತದೆ ಎಂದಿಲ್ಲ. ಪಕ್ಕದಲ್ಲಿ ಎಸ್‌ಸಿಎಸ್‌ಟಿ ಅಲ್ಲದವರ ಹೊದಲ್ಲಿ ಬೋರ್‌ವೆಲ್ ಹಾಕಿಸಿ ಮಾರಿಕೊಂಡುಬಿಡುತ್ತಾರೆ. ಇದರ ಕುರಿತು ಎಚ್ಚರಿಕೆ ವಹಿಸಬೇಕು.
ಸ್ವಯಂ ಉದ್ಯೋಗದ ಕುರಿತೂ ಅನೇಕ ಯೋಜನೆಗಳಿವೆ. ಆದರೆ ನಿಜವಾಗಿ ಎಷ್ಟು ಲಾಭವಾಗಿದೆ ಎನ್ನುವುದು ತಿಳಿದುಬಂದಿಲ್ಲ. ಅದಕ್ಕಾಗಿಯೇ ನೇರವಾಗಿ ಉದ್ಯಮ ನಡೆಸಲು ವಾಹನಗಳನ್ನು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ ಸಾಮಾಜಿಕ ನ್ಯಾಯ ಕೊಡುವವರು ಇದರ ಬಗ್ಗೆ ಚಿಂತನೆಯನ್ನೇ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.
ಇದನ್ನೂ ಓದಿ: Pourakarmika Appointment | 42,000 ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ: ಸಿಎಂ ಬೊಮ್ಮಾಯಿ ಸಿಹಿ ಸುದ್ದಿ
ಏರ್ ಕಂಡೀಷನ್ ಆಫೀಸ್‌ನಲ್ಲಿ ಕುಡಿಯುವ ನೀರಿನ ಬಗ್ಗೆ ಚರ್ಚೆ ಮಾಡಿದರೆ ಆಗುವುದಿಲ್ಲ. ನಿಜವಾದ ಸಮಸ್ಯೆ ಜತೆಗೆ ಜನರು ಬದುಕುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳ ವಿತರಣೆ ಮಾಡಲಾಯಿತು. 300 ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಸಾಂಕೇತಿಕವಾಗಿ ಇಬ್ಬರಿಗೆ ಪಾಸ್‌ಪೋರ್ಟ್ ವಿತರಣೆ ಮಾಡಲಾಯಿತು.