ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಕಾಮಗಾರಿಗಳಿಗಾಗಿ 40% ಕಮಿಷನ್ ಪಡೆಯಲಾಗುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಇಷ್ಟು ದಿನ ಸಿದ್ದರಾಂಯ್ಯ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದರ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಬೊಮ್ಮಾಯಿ, ಈ ಹಿಂದೆಯೂ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಾಗಾದರೆ ಇಷ್ಟು ದಿನ ಅವರು ಏಕೆ ಸುಮ್ಮನಿದ್ದು? ಸುಮ್ಮನೆ ರಾಜಕೀಯಕ್ಕಾಗಿ ಹೇಳಿಕೆ ನೀಡಬಾರದು ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಕೆಂಪಣ್ಣ ನಿರ್ದಿಷ್ಟ ಆರೋಪ ಮಾಡಿಲ್ಲ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚೆ ಮಾಡಿದ್ದೇವೆ. ದಾಖಲೆ ಕೊಡುವುದು ಅವರ ಕೆಲಸ.
24 ಶಾಸಕರ ಮೇಲೂ ಆರೋಪ ಮಾಡಿದ್ದಾರೆ. ಮೊದಲಿಗೆ ಲೋಕಾಯುಕ್ತ ಮತ್ತು ಎಸಿಬಿ ಎರಡು ಕಡೆ ಕೊಡಲಿ. ನೇರವಾಗಿ ದಾಖಲೆ ತಂದು ಕೊಡಲಿ ನಾವು ನ್ಯಾಯಾಂಗ ತನಿಖೆಗೆ ಕೊಡುತ್ತೇವೆ. ಸುಮ್ಮನೆ ಮೌಖಿಕ ಹೇಳಿಕೆಗೆ ನಾವು ತನಿಖೆ ಮಾಡಿಸಲು ಸಾಧ್ಯವಿಲ್ಲ. ದಾಖಲೆ ಇಲ್ಲದೇ ಯಾರನ್ನೂ ಭ್ರಷ್ಟ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲಸಗಳು ಶರವೇಗದಲ್ಲಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಮಾಧುಸ್ವಾಮಿ, ನಮಗೆ ಅಲ್ಲದಿದ್ದರೆ ಮಾಧ್ಯಮಕ್ಕಾದರೂ ಕೆಂಪಣ್ಣ ದಾಖಲೆಗಳನ್ನು ಕೊಡಲಿ. ಸುಮ್ಮನೆ 40%, 60% ಎಂದೆಲ್ಲ ಹೇಳಬಾರದು. 224 ಶಾಸಕರೂ ಕರಪ್ಟ್ ಎನ್ನುವುದು ಸರಿಯಲ್ಲ. ಸ್ಪಷ್ಟವಾಗಿ ಮಾಹಿತಿ ಕೊಡಬೇಕು. ಕೆಂಪಣ್ಣ ಏನು ಆಡಿಟರ? ಹೀಗೆ ಏನು ಬೇಕಾದರೂ ಮಾತನಾಡುವುದಕ್ಕೆ ಕೆಂಪಣ್ಣ ಯಾರು? ಎಂದು ಪ್ರಶ್ನಿಸಿದರು.
ಇದನ್ನೂ ಓದಿ | ಬೆಂಗಳೂರಿನಲ್ಲೇ 40%, ಮೊಟ್ಟೆ, ಸಾವರ್ಕರ್ ಫೈಟ್: ಸೆಪ್ಟೆಂಬರ್ 12ರಿಂದ ವಿಧಾನಮಂಡಲ ಅಧಿವೇಶನ