ಬೆಂಗಳೂರು: ಭಾರತ್ ಜೋಡೋ ಯಾತ್ರೆಯ ಮೂಲಕ ಕಾಂಗ್ರೆಸ್‌ನವರು ರಾಹುಲ್ ಗಾಂಧಿ ಎನ್ನುವ ಮಿಸೈಲ್ ಬಿಟ್ಟಿದ್ದರು, ಅದು ಫೇಲ್ ಆಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಾಖ್ಯಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಕಾಂಗ್ರೆಸ್‌ನ ಭಾರತ್ ಜೋಡೋ ಅರ್ಥ ಏನು? ಯಾಕೆ ಈಗ ಭಾರತ್ ಜೋಡೋ ಮಾಡ್ತಿದ್ದಾರೆ? ಈಗ ಭಾರತ ಒಗ್ಗಟ್ಟಾಗಿ ನಡೆಯುತ್ತಿದೆ. ಮತ್ತೆ ಯಾಕೆ ಜೋಡಿಸುತ್ತಿದ್ದೀರ? ಎಂದು ಪ್ರಶ್ನಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಮುಂದಿದೆ. ಇಡೀ ವಿಶ್ವದಲ್ಲಿ ನಮ್ಮ ಆರ್ಥಿಕತೆ ಮುಂದಿದೆ. ಹೀಗಿರುವಾಗ ಈ ಕಾಂಗ್ರೆಸ್ ಜೋಡೋಗೆ ಅರ್ಥವಿಲ್ಲ. ಕಾಂಗ್ರೆಸ್‌ನವರು ರಾಹುಲ್ ಎನ್ನುವ ಮಿಸೈಲ್ ಬಿಟ್ಟಿದ್ದರು. ಅದು ಫೇಲ್ ಆಯಿತು. ಈಗ ಮತ್ತೆ ಲಾಂಚ್ ಮಾಡೋಕೆ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.
೪ ಕಿಮೀ ನಡೆದು ತೋರಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿರುವ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಖಂಡಿತಾ ನಡೆದು ತೋರಿಸೋಣ. ಅವರು ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಆ ಮಟ್ಟಕ್ಕೆ ಹೋಗುವುದಿಲ್ಲ. ಅವರ ಆರೋಗ್ಯ ಚೆನ್ನಾಗಿರಲಿ, ಜಿಮ್ ಎಲ್ಲಾ ಮಾಡಿ ಚೆನ್ನಾಗಿರಲಿ. ನೂರು ವರ್ಷ ಬಾಳಲಿ ಎಂದು ಹಾರೈಸುತ್ತೇನೆ ಎಂದರು.
ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ವಿಚಾರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ಈ ಕುರಿತು ಭೇಟಿ ಮಾಡಿದ್ದಾರೆ. ಆಡಳಿತ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಮಠದ ಸಂಪೂರ್ಣ ವಿಚಾರ ನನಗೆ ಹೇಳಿದ್ದಾರೆ. ಮಠದಲ್ಲಿ ಕಾನೂನು ಪ್ರಕಾರ ಒಂದು ಟ್ರಸ್ಟ್ ಇದೆ. ಕಾನೂನು ಪ್ರಕಾರ ಏನೆಲ್ಲ ಅವಕಾಶ ಇದೆ ಎನ್ನುವುದನ್ನು ಚರ್ಚೆ ಮಾಡುತ್ತೇವೆ. ಏನೇ ಕ್ರಮ ತೆಗೆದುಕೊಂಡರೂ ಕಾನೂನು ಚೌಕಟ್ಟಿನ ಪ್ರಕಾರವೇ ಇರಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ | Bharat Jodo | ರಾಹುಲ್ ಗಾಂಧಿಗೆ ಭಾರತ್ ಜೋಡೊದಲ್ಲಿ ಹೆಜ್ಜೆ ಹಾಕಿದ ದಣಿವಿಗಿಂತ ಪಕ್ಷ ಬಿಕ್ಕಟ್ಟಿನ ದಣಿವೇ ಹೆಚ್ಚು!