ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ (JDS State president) ಕಿತ್ತು ಹಾಕಲ್ಪಟ್ಟಿರುವ ಸಿಎಂ ಇಬ್ರಾಹಿಂ (CM Ibrahim) ಅವರು ಕೆಂಡಾಮಂಡಲರಾಗಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿಯನ್ನು (BJP-JDS Alliance) ವಿರೋಧಿಸಿ ತಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಹೇಳಿಕೊಂಡಿದ್ದ ಇಬ್ರಾಹಿಂ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆಯಿಂದ ತೆರವುಗೊಳಿಸಿ, ಆ ಸ್ಥಾನಕ್ಕೆ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ನೇಮಿಸಿ ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು (HD Devegowda) ಆದೇಶ ಹೊರಡಿಸಿದ ಬೆನ್ನಿಗೇ ಬೆಂಕಿಯಾಗಿದ್ದಾರೆ ಸಿಎಂ ಇಬ್ರಾಹಿಂ.
ದೇವೇಗೌಡರಿಗೆ ಪುತ್ರ ವ್ಯಾಮೋಹ ಇರೋದು ಸಾಬೀತಾಗಿದೆ. ದೇವೇಗೌಡರೇ ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಏನಿರುತ್ತೆ ಅಂತ ಕಾದು ನೋಡಿ ಎಂದು ಸಿ.ಎಂ. ಇಬ್ರಾಹಿಂ ಸವಾಲು ಹಾಕಿದ್ದಾರೆ.
ನನ್ನನ್ನು ತೆಗೆಯೋ ಅಧಿಕಾರ ಇಲ್ಲ, ಆಯೋಗದಲ್ಲಿ ಪ್ರಶ್ನೆ ಮಾಡ್ತೇನೆ
ನಾನು ಜೆಡಿಎಸ್ ರಾಜ್ಯಾಧ್ಯಕ್ಷ. ನನ್ನನ್ನು ಹುದ್ದೆಯಿಂದ ತೆಗೆಯೋ ಅಧಿಕಾರ ನಿಮಗಿಲ್ಲ. ನನಗೆ ಮೊದಲು ನೋಟಿಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ 2/3 ನೇ ಸದಸ್ಯರ ಅನುಮತಿ ಪಡೆದು ನೋಟೀಸ್ ಕೊಡಬೇಕು. ನಾನು ಚುನಾವಣಾ ಆಯೋಗದಲ್ಲಿ ನಿಮ್ಮ ನಿರ್ಧಾರ ಪ್ರಶ್ನೆ ಮಾಡ್ತೇನೆ ಎಂದು ಇಬ್ರಾಹಿಂ ಹೇಳಿದ್ದಾರೆ.
ಜನತಾ ದಳವನ್ನು ವಿಸರ್ಜನೆ ಮಾಡಕ್ಕೇ ಆಗಲ್ಲ. ಇದನ್ನು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡ್ತೇನೆ. ನಿಜವಾದ ಜನತಾ ದಳ ನಮ್ಮದೇ. ಬಹುತೇಕ ಶಾಸಕರು ನಮ್ಮ ಜತೆ ಇದ್ದಾರೆ ಎಂದಿರುವ ಇಬ್ರಾಹಿಂ, ನಾನು ಇಲ್ಲಿಗೇ ಇದನ್ನು ಬಿಡಲ್ಲ. ಜಿಲ್ಲೆ ಜಿಲ್ಲೆಗಳಲ್ಲಿ ಸಭೆ ಮಾಡ್ತೀನಿ. ಹಾಸನದಲ್ಲಿ, ಮಂಡ್ಯದಲ್ಲಿ ಸಭೆ ಮಾಡ್ತೀನಿ. ಸಮಯ ಸಂದರ್ಭ ಬಂದಾಗ ಶಾಸಕರ ಸಭೆ ಕರೀತೀನಿ ಎಂದರು.
ʻʻನನ್ನ ಹೋರಾಟ ಶುರುವಾಗಿದೆ. ಅವರ ನೊಟೀಸ್ ನನ್ನ ಕೈಗೆ ಬರಲಿ ಮೊದಲು. ಒರಿಜಿನಲ್ ಜೆಡಿಎಸ್ ನಮ್ಮದೇ ಅಂತ ಪ್ರೂವ್ ಮಾಡ್ತೀನಿ. ಲಾಲೂ ಪ್ರಸಾದ್ ಯಾದವ್, ಅರವಿಂದ ಕೇಜಿವ್ರಾಲ್, ನಿತೀಶ್ ಕುಮಾರ್ ನನ್ನ ಸಂಪರ್ಕದಲ್ಲಿ ಇದ್ದಾರೆʼʼ ಎಂದು ಹೇಳಿಕೊಂಡರು ಇಬ್ರಾಹಿಂ.
ವಿನಾಶ ಕಾಲೇ ವಿಪರೀತ ಬುದ್ಧಿ ಎಂದ ಇಬ್ರಾಹಿಂ
ʻʻಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅಂದುಕೊಂಡಿದ್ದೆ. ಅದೇ ನಂಬಿಕೆಯಿಂದ ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆʼʼ ಎಂದು ಹೇಳಿರುವ ಅವರು, ಕಾಲಾಯೇ ತಸ್ಮೈ ನಮ: ವಿನಾಶ ಕಾಲೇ ವಿಪರೀತ ಬುದ್ಧಿ ಎಂದಿದ್ದಾರೆ. ಮಹಾಭಾರತದಲ್ಲಿ ಆದ ಹಾಗೆ ಜೆಡಿಎಸ್ ಗೂ ಆಗುತ್ತದೆ ಎಂದು ಶಾಪ ಹಾಕಿದ್ದಾರೆ.
ʻʻಕಂಡೋರ ಮಕ್ಕಳು ಸಿಕ್ಕಿದೀವಿ ಅಂತ ಹೀಗೆಲ್ಲ ಮಾಡೋದು ಸರಿಯಲ್ಲ ಗೌಡ್ರೇ… ಇದು ನಿಮಗೆ ಸರಿಯಲ್ಲʼʼ ಎಂದು ಎಚ್ಚರಿಸಿರುವ ಅವರು, ನನಗೆ ಅಧಿಕಾರದ ಆಸೆ ಇಲ್ಲ ಗೌಡ್ರೇ. ಆದರೆ, ನೀವು ಜೆಡಿಎಸ್ ಕುಟುಂಬದ ಸ್ವತ್ತು ಅಂತ ತೋರಿಸಿಬಿಟ್ರಿ. ಇದನ್ನ ಇಲ್ಲಿಗೇ ನಿಲ್ಲಿಸಿ. ವಿಸರ್ಜನೆ ಆದೇಶ ಹಿಂದಕ್ಕೆ ಪಡೆಯಿರಿ ಎಂದು ಇಬ್ರಾಹಿಂ ಆಗ್ರಹಿಸಿದರು.
ʻʻದೇವೇಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನಾನು ಒಬ್ಬ ಹಿರಿಯ, ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದೀನಿ. ನನ್ನ ಜತೆ ಮಾತಾಡಬೇಕು ಅಂತ ಅನಿಸಲಿಲ್ವಾ?ʼʼ ಎಂದು ಕೇಳಿದ ಇಬ್ರಾಹಿಂ, ಚನ್ನಪಟ್ಟಣದಲ್ಲಿ ನಾನು ಹೋಗದಿರುತ್ತಿದ್ದರೆ ಕುಮಾರಸ್ವಾಮಿ ಗೆಲ್ತಿರಲಿಲ್ಲ ಎಂದರು.
ಯಾವ ಒಕ್ಕಲಿಗರ ಮಕ್ಕಳನ್ನು ದೇವೇಗೌಡರು ಬೆಳೆಸಿದ್ದಾರೆ?
ದೇವೇಗೌಡರು ತಮ್ಮ ಕುಟುಂಬ ಬಿಟ್ಟು ಬೇರೆ ಯಾರನ್ನೂ ಬೆಳೆಸಿಲ್ಲ ಎಂದು ಆರೋಪಿಸಿದ ಇಬ್ರಾಹಿಂ, ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದರು. ನಿಮ್ಮ ಮಗನಿಗಾಗಿ ನನ್ನ ಬಲಿ ತಗೊಂಡ್ರಿ ಎಂದು ವಾಗ್ದಾಳಿ ಮಾಡಿದರು.
ಪಕ್ಷದಲ್ಲಿ ಸೀನಿಯರ್ ಆಗಿರುವ ಜಿ.ಟಿ ದೇವೇಗೌಡರನ್ನು ಬಿಟ್ಟು ಇವರ ಮಗನಿಗೆ ಪಟ್ಟ ಕಟ್ಟಿದ್ದಾರೆ. ಇದು ಪಕ್ಕಾ ಕುಟುಂಬ ಪಕ್ಷ ಎಂದು ವಾಗ್ದಾಳಿ ನಡೆಸದರು. ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಿಲ್ಲ ಎಂದರು.
ಇದನ್ನೂ ಓದಿ: CM Ibrahim : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಔಟ್, ಎಚ್.ಡಿ ಕುಮಾರಸ್ವಾಮಿ ಇನ್
ಸಿದ್ದರಾಮಯ್ಯರಿಗೆ ಬೈದಿಲ್ಲ ಅಂತ ನನ್ನ ಮೇಲೆ ಸಿಟ್ಟು!
ʻʻನಾನು ಸಿದ್ದರಾಮಯ್ಯ ಅವರನ್ನು ಬೈತಿಲ್ಲ ಅಂತ ದೇವೇಗೌಡರಿಗೆ ಬೇಸರ ಇದೆ. ಸುಮ್ಮಸುಮ್ಮನೆ ನಾನ್ಯಾಕೆ ಸಿದ್ದರಾಮಯ್ಯ ರನ್ನು ಬೈಯಲಿ? ಸಿದ್ದರಾಮಯ್ಯ ಜತೆ ಯಾವುದೇ ವೈಷಮ್ಯ ಇಲ್ಲ. ಅವರು ಅವರ ಪಾಡಿಗೆ ಅಧಿಕಾರ ಮಾಡ್ತಿದ್ದಾರೆ. ಹಾಗಂತ ನನಗೆ ಕಾಂಗ್ರೆಸ್ ಬಿಟ್ಟಿದ್ದು ತಪ್ಪು ಅನಿಸಿಲ್ಲʼʼ ಎಂದರು ಇಬ್ರಾಹಿಂ.
ಕಾಂಗ್ರೆಸ್‌ಗೆ ಘರ್ ವಾಪ್ಸಿ ಆಗೋ ವಿಚಾರ ಪ್ರಸ್ತಾಪಿಸಿದಾಗ, ಇನ್ನೂ ಡೈವರ್ಸ್ ಆಗಿಲ್ಲ ಅಂತ ಹೇಳಿದರು ಇಬ್ರಾಹಿಂ.