Site icon Vistara News

CM Ibrahim : ಜೆಡಿಎಸ್‌ನಿಂದ ಎಚ್‌ಡಿ ಕುಮಾರಸ್ವಾಮಿ, ನಿಖಿಲ್‌ ಉಚ್ಚಾಟನೆ; ಸಿಎಂ ಇಬ್ರಾಹಿಂ ಆರ್ಡರ್!

CM Ibrahim Expels HD Kumaraswamy and Nikhil Kumaraswamy from JDS

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಭವಿಸಿದ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರನ್ನು ಜೆಡಿಎಸ್‌ನಿಂದ (JDS Karnataka) ಉಚ್ಚಾಟನೆ (Expelled from Party) ಮಾಡಲಾಗಿದೆ. ಪಕ್ಷದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷ ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಅವರು ಸಹಿ ಹಾಕಿರುವ ಪತ್ರದಲ್ಲಿ ತಿಳಿಸಲಾಗಿದೆ!

ʻʻಜೆಡಿಎಸ್‌ ಪಕ್ಷವು ದಶಕಗಳಿಂದ ಜಾತ್ಯತೀತ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದ್ದು, ನಮ್ಮ ಪಕ್ಷದಲ್ಲಿ ಎಲ್ಲ ಜಾತಿ ಧರ್ಮಗಳ ನಾಯಕರು, ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ಇತ್ತೀಚೆಗೆ ಜೆಡಿಎಸ್‌ ಪಕ್ಷದ ಶಾಸಕಾಂಗ ನಾಯಕ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಕಂಡುಬಂದಿದ್ದು, ಈ ತತ್‌ ಕ್ಷಣದಿಂದ ಎಚ್‌.ಡಿ ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರನ್ನು ಈ ಕೂಡಲೇ ಪಕ್ಷದಿಂದ ಉಚ್ಚಾಟಿಸಲು ತೀರ್ಮಾನಿಸಲಾಗಿದೆʼʼ ಎಂದು ಸಿಎಂ ಇಬ್ರಾಹಿಂ ಅವರು ಸಹಿ ಹಾಕಿರುವ ಲೆಟರ್‌ ಹೆಡ್‌ನಲ್ಲಿ ತಿಳಿಸಲಾಗಿದೆ.

ಸಿಎಂ ಇಬ್ರಾಹಿಂ ಮತ್ತು ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ವಿರೋಧ ಮಾಡುತ್ತಿರುವ ಸಮಾನ ಮನಸ್ಕ ನಾಯಕರು ಹಾಗೂ ಕಾರ್ಯಕರ್ತರು ಸೋಮವಾರ ಬೆಂಗಳೂರಿನ ಟ್ಯಾನರಿ ರಸ್ತೆಯ ಸಭಾಂಗಣದಲ್ಲಿ ಚಿಂತನ ಮಂಥನ ನಡೆಸಿದ್ದರು. ಇದರಲ್ಲಿ ಕೂಡಾ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಕೂಗು ಕೂಡಾ ಕೇಳಿಬಂದಿತ್ತು!

ಅಂತಿಮವಾಗಿ ಮಾತನಾಡಿದ ಸಿಎಂ ಇಬ್ರಾಹಿಂ ಅವರು ತಮ್ಮದೇ ನಿಜವಾದ ಜಾತ್ಯತೀತ ಜನತಾದಳ. ಅದು ಯಾವ ಕಾರಣಕ್ಕೂ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರಿಗೆ ತಿಳಿಸಿಹೇಳಲಾಗುವುದು ಅವರ ಜತೆ ಮಾತುಕತೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ಇದು ಕಳೆದು ಒಂದೇ ದಿನದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್‌ ಕುಮಾರಸ್ವಾಮಿ ಅವರನ್ನು ಉಚ್ಚಾಟಿಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ!

ಇದನ್ನೂ ಓದಿ: CM Ibrahim Vs HDK : ನಮ್ಮದೇ ಒರಿಜಿನಲ್‌ ಜೆಡಿಎಸ್‌, ಬಿಜೆಪಿ ಮೈತ್ರಿ ಒಪ್ಪಲ್ಲ ಎಂದ ಸಿಎಂ ಇಬ್ರಾಹಿಂ

ಇದು ಒರಿಜಿನಲ್‌ ಅಲ್ಲ, ನಕಲಿಪತ್ರ!

ಆದರೆ, ಇದು ಇದು ಒರಜಿನಲ್‌ ಪತ್ರವಲ್ಲ. ಯಾರೋ ನಕಲಿಯಾಗಿ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪತ್ರ ಎಂದು ತಿಳಿದುಬಂದಿದೆ. ಇದರ ಬಗ್ಗೆ ಸ್ವತಃ ಸಿ.ಎಂ. ಇಬ್ರಾಹಿಂ ಅವರೇ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲಾಗುವುದು ಎಂದಿದ್ದಾರೆ.

ಆದರೆ, ಮೊದಲ ಬಾರಿಗೆ ಈ ಪತ್ರವನ್ನು ನೋಡಿದವರು ಸಿಎಂ ಇಬ್ರಾಹಿಂ ಅವರು ಇಂಥ ಕಿತಾಪತಿ ಮಾಡಿರಲೂಬಹುದು ಎಂದು ಮಾತನಾಡಿಕೊಂಡಿದ್ದು ಸುಳ್ಳಲ್ಲ. ಕೊನೆಗೆ ಇದು ಸುಳ್ಳೆಂದು ಸಾಬೀತಾಗಿದೆ.

Exit mobile version