Site icon Vistara News

CM Ibrahim : ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಔಟ್‌, ಎಚ್‌.ಡಿ ಕುಮಾರಸ್ವಾಮಿ ಇನ್‌

CM Ibrahim out of JDS state president

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು (BJP-JDS Alliance) ಖಂಡತುಂಡವಾಗಿ ವಿರೋಧಿಸಿದ್ದ ಮತ್ತು ತಮ್ಮದೇ ನಿಜವಾದ ಜಾತ್ಯತೀತ ಜನತಾದಳ ಎಂದು ಘೋಷಿಸಿಕೊಂಡಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ ದೇವೇಗೌಡ (HD Devegowda) ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ಪ್ರಕಟಿಸಿದರು.

ಗುರುವಾರ ಜೆಡಿಎಸ್‌ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡುವ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಗಿದೆ. ಆದರೆ, ನೇರವಾಗಿ ಉಚ್ಚಾಟನೆ ಮಾಡುವ ಬದಲು ಹಳೆ ತಂಡವನ್ನು ವಿಸರ್ಜನೆ ಮಾಡುವ ಮೂಲಕ ಇಬ್ರಾಹಿಂ ಅವರಿಗೆ ಗೌರವಪೂರ್ವಕ ನಿರ್ಗಮನವನ್ನು ತೋರಿಸಲಾಗಿದೆ. ಹಂಗಾಮಿ ಅಧ್ಯಕ್ಷರನ್ನಾಗಿ ಎಚ್.ಡಿ ಕುಮಾರಸ್ವಾಮಿ ಅವರನ್ನು ನೇಮಿಸಿರುವುದಾಗಿ ಎಚ್‌.ಡಿ. ದೇವೇಗೌಡ ಪ್ರಕಟಿಸಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ವಿಸರ್ಜನೆ ಮತ್ತು ಹಂಗಾಮಿ ಅಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕದ ಪ್ರಕಟಣೆ

ಮಾಧ್ಯಮ ಗೋಷ್ಠಿಯಲ್ಲಿ ದೇವೇಗೌಡರು ಹೇಳಿದ್ದೇನು?

ಇಂದು ಪಕ್ಷದ ವಿವಿಧ ಘಟಕ ಜೊತೆಗೆ ಸಮಾಲೋಚನೆ ನಡೆದಿದೆ. ಎಚ್.ಡಿ ಕುಮಾರಸ್ವಾಮಿ, ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಎಂ.ಪಿ. ನಾಡಗೌಡ, ಶಾಸಕರು ಮತ್ತು ಮಾಜಿ ಶಾಸಕರು ಸೇರಿದಂತೆ ಪಕ್ಷದ ಮುಖಂಡರು ಸಭೆ ಭಾಗವಹಿಸಿದ್ದರು. ಇವರ ಜತೆ ಚರ್ಚೆ ಮಾಡಿದ್ದೇವೆ. ಹಿಂದಿನ ಅಧ್ಯಕ್ಷರು ಹಲವಾರು ಭಾವನೆ ವ್ಯಕ್ತಪಡಿಸಿದ್ದಾರೆ. ಚುನಾವಣೆ ಮುಗಿದು ನಾಲ್ಕು ತಿಂಗಳಾಗಿದೆ. ಹಿಂದಿನ ಅಧ್ಯಕ್ಷರ ಹೇಳಿಕೆ ಬಗ್ಗೆ ಈಗ ಮಾತನಾಡುವುದಿಲ್ಲ. ಅದರ ಅವಶ್ಯಕತೆ ಕೂಡಾ ನಮಗಿಲ್ಲ ಎಂದು ದೇವೇಗೌಡರು ಹೇಳಿದರು.

ಜತೆಗಿದ್ದಾಗ ತ್ರಿವಳಿ ನಾಯಕರು

ಎಲ್ಲರ ಜತೆ ಚರ್ಚಿಸಿಯೇ ಬಿಜೆಪಿ ಜತೆ ಮೈತ್ರಿ

ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮುನ್ನ ಎಲ್ಲರ ಜತೆ ಸಮಾಲೋಚನೆ ಮಾಡಲಾಗಿದೆ. ಚುನಾವಣೆ ಬಳಿಕ 19 ಜನ ಶಾಸಕರು, ಅಧ್ಯಕ್ಷರನ್ನ ಒಳಗೊಂಡಂತೆ ಎರಡು ಮೀಟಿಂಗ್ ಮಾಡಲಾಗಿತ್ತು. ಅದರ ಬಗ್ಗೆ ವಿವರ ಕೊಡುವ ಅವಶ್ಯಕತೆ ಇಲ್ಲ. ಕೇರಳ, ಮಹಾರಾಷ್ಟ್ರ, ತಮಿಳುನಾಡು ಸೇರಿ ಅನೇಕ ಕಡೆ ನಮ್ಮ ಯುನಿಟ್ ಇದೆ. ಕೇರಳದಲ್ಲಿ ಸರ್ಕಾರದಲ್ಲಿ ನಮ್ಮ ಪಕ್ಷದ ಶಾಸಕರು ಇದ್ದಾರೆ. ಬಿಜೆಪಿ ಜೊತೆ ಹೋಗುವ ಸನ್ನಿವೇಶದ ಬಗ್ಗೆ ಕೇರಳ ಯುನಿಟ್ ಗೆ ತಿಳಿಸಲಾಗಿತ್ತು. ಅವರಿಂದಲೂ ಒಪ್ಪಿಗೆ ಪಡೆಯಲಾಗಿದೆ ಎಂದು ದೇವೇಗೌಡರು ವಿವರಿಸಿದರು.

ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಮುಸ್ಲಿಮರಿಗೆ ತೊಂದರೆ ಆಗುತ್ತದೆ ಎಂದು ಕೆಲವರು ಅಂದುಕೊಳ್ಳಬಹುದು. ಆದರೆ, ನಮ್ಮ ಪಕ್ಷದ ಪ್ರಣಾಳಿಕೆ ರೆಡಿ ಮಾಡಿದ ಬಿ.ಎಂ ಫಾರೂಕ್ ಅವರೇ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ. ನಾನು ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಟ್ಟು ಹೋಗಲ್ಲ ಅಂತ ಹೇಳಿದ್ದಾರೆ. ಇತರ ಎಲ್ಲ ಮುಸ್ಲಿಂ ನಾಯಕರೂ ಒಪ್ಪಿದ್ದಾರೆ ಎಂದು ದೇವೇಗೌಡರು ವಿವರಿಸಿದರು.

ಉಚ್ಚಾಟನೆಯಲ್ಲ, ವಿಸರ್ಜನೆ!

ನಾವು ಯಾರನ್ನೂ ಯಾವ ಹುದ್ದೆಯಿಂದಲೂ ಉಚ್ಚಾಟನೆ ಮಾಡಿಲ್ಲ. ನಮ್ಮ ರಾಜ್ಯ ಘಟಕವನ್ನು ವಿಸರ್ಜಿಸಿದ್ದೇವೆ. ಪಕ್ಷದ ಚಟುವಟಿಕೆಗಳನ್ನು ಮುಂದುವರಿಸಲು ಹಂಗಾಮಿ ಅಧ್ಯಕ್ಷರಾಗಿ ಎಚ್.ಡಿ ಕುಮಾರಸ್ವಾಮಿ ಅವರನ್ನು ದೇವೇಗೌಡರು ನಿಯೋಜಿಸಿದ್ದಾರೆ. ತಿಪ್ಪೇಸ್ವಾಮಿಯವರು ಪಕ್ಷದ ಕಾರ್ಯದರ್ಶಿಯಾಗಿ ಮುಂದುವರಿಯುತ್ತಾರೆ. ಪದಾಧಿಕಾರಿಗಳನ್ನು ಇನ್ನು ಮೂರು ದಿನದಲ್ಲಿ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದರು.

ವರಿಷ್ಠರಿಗೆ ಸಡ್ಡು ಹೊಡೆದಿದ್ದ ಇಬ್ರಾಹಿಂ

ಬಿಜೆಪಿ ಜತೆಗಿನ ಮೈತ್ರಿಯನ್ನು ಖಂಡಿಸಿದ್ದ ಇಬ್ರಾಹಿಂ ಅವರು ಕಳೆದ ಅಕ್ಟೋಬರ್‌ 16ರಂದು ಸಮಾನ ಮನಸ್ಕರ ಸಭೆಯನ್ನು ನಡೆಸಿ ತಮ್ಮದೇ ನಿಜವಾದ ಜೆಡಿಎಸ್‌ ಎಂದು ಹೇಳಿಕೊಂಡಿದ್ದರು. ಹಲವಾರು ಮುಸ್ಲಿಂ ನಾಯಕರು, ಕೆಲವು ಇತರ ನಾಯಕರು ಕೂಡಾ ಅವರಿಗೆ ಕೈಜೋಡಿಸಿದ್ದರು. ಈ ನಡುವೆ ಎಚ್.ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಅದರ ಮಧ್ಯೆಯೇ ಕುಮಾರಸ್ವಾಮಿ ಉಚ್ಚಾಟನೆಯ ನಕಲಿ ಪ್ರಕಟಣೆ, ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದ ನಕಲಿ ಪ್ರಕಟಣೆ ಹೊರಬಿದ್ದಿತ್ತು.

ಸಿ.ಎಂ. ಇಬ್ರಾಹಿಂ ಅವರು ಎಚ್.ಡಿ. ದೇವೇಗೌಡರ ಜತೆ ಮಾತನಾಡಿ ಮುಂದಿನ ಹೆಜ್ಜೆಯ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಈಗ ದೇವೇಗೌಡರೇ ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದಾರೆ. ಅಲ್ಲಿಗೆ ಸಿಎಂ ಇಬ್ರಾಹಿಂ ಅವರ ಜೆಡಿಎಸ್‌ ಪ್ರಯಾಣ ಬಹುತೇಕ ಅಂತಿಮಗೊಂಡಿದೆ. ಅವರ ಮುಂದಿನ ಹೆಜ್ಜೆಯ ಬಗ್ಗೆ ಸ್ಪಷ್ಟತೆ ಇಲ್ಲವಾದರೂ ಅವರು ಕಾಂಗ್ರೆಸ್‌ ಬಾಗಿಲು ತಟ್ಟುತ್ತಿರುವುದು ನಿಜ.

Exit mobile version