ಬೆಂಗಳೂರು/ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ಎಲ್ಲವೂ ಸರಿ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಪಕ್ಷ, ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದರೂ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ (MLC and senior Congress leader BK Hariprasad) ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಈಡಿಗ ಸಮಾವೇಶದ (Idiga Conference) ಬಗ್ಗೆ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಅಗತ್ಯ ಬಿದ್ದರೆ ಪ್ರಶ್ನೆ ಮಾಡುವುದಾಗಿಯೂ ಹೇಳಿದ್ದಾರೆ. ಇನ್ನು ಈ ಸಮಾವೇಶದ ನೇತೃತ್ವವನ್ನು ಸಚಿವ ಮಧು ಬಂಗಾರಪ್ಪ (Minister Madhu Bangarappa) ವಹಿಸಿಕೊಂಡಿದ್ದರೂ ಅದರ ಹಿಂದೆ ಸಿಎಂ ಸಿದ್ದರಾಮಯ್ಯ ಇದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇದೇ ಈಗ ಹರಿಪ್ರಸಾದ್ ಮುನಿಸಿಗೆ ಕಾರಣವಾಗಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈಡಿಗ ಸಮಾವೇಶಕ್ಕೆ ಬಿ.ಕೆ. ಹರಿಪ್ರಸಾದ್‌ಗೆ ಆಹ್ವಾನ ಇಲ್ಲವೇ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಈ ಕಾರಣಕ್ಕಾಗಿಯೇ ಅವರು ಸಮಾವೇಶದಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಈಡಿಗ ಸಮಾವೇಶದ ಹೆಸರಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಾಗಿದೆ. ಏಕೆಂದರೆ, ನಾಲ್ಕು ತಿಂಗಳ ಹಿಂದೆ ಸಮಾವೇಶ ನಡೆಸಿ ಬಿ.ಕೆ. ಹರಿಪ್ರಸಾದ್ ಶಕ್ತಿ ಪ್ರದರ್ಶನ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಧು ಬಂಗಾರಪ್ಪ ವಿರುದ್ಧ ವಾಚಮಗೋಚರ ವಾಗ್ದಾಳಿ ನಡೆಸಿದ್ದರು. ಈ ನಡುವೆ ಈಡಿಗ ಸೇರಿದಂತೆ ಹಿಂದುಳಿದ ವರ್ಗಗಳ ಸಮಾವೇಶವನ್ನು ಈಗ ಹಮ್ಮಿಕೊಳ್ಳಲಾಗಿದೆ. ಇದರ ಉಸ್ತುವಾರಿಯನ್ನು ಸಚಿವ ಮಧು ಬಂಗಾರಪ್ಪ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: HD Kumaraswamy: ಕೊಬ್ಬರಿಗೆ ಬೆಂಬಲ ಬೆಲೆ; ಶೀಘ್ರ ಅರಸೀಕೆರೆಯಿಂದ ತುಮಕೂರಿಗೆ ಪಾದಯಾತ್ರೆ: ಎಚ್‌ಡಿಕೆ
ಮಧು ಬಂಗಾರಪ್ಪ ಹಿಂದೆ ಇದ್ದಾರಾ ಸಿಎಂ ಸಿದ್ದರಾಮಯ್ಯ?
ಬೆಂಗಳೂರಿನಲ್ಲಿ ನಡೆಯುತ್ತಿರುವ ಈಡಿಗರ ಬೃಹತ್ ಸಮಾವೇಶದಲ್ಲಿ ಮುಂದೆ ಮಧು ಬಂಗಾರಪ್ಪ ಕಾಣಿಸಿಕೊಂಡರೂ ಅವರ ಹಿಂದಿನ ಶಕ್ತಿ ಸಿಎಂ ಸಿದ್ದರಾಮಯ್ಯ ಎಂಬ ಮಾತುಗಳು ರಾಜಕೀಯ ಪಡೆಸಾಲೆಗಳಲ್ಲಿ ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಈ ಸಮಾವೇಶದ ಮುಖ್ಯ ಅತಿಥಿಯಾಗಿದ್ದಾರೆ. ಒಂದು ಜಾತಿಗೆ ಸೀಮಿತ ಮಾಡದೇ ಅಹಿಂದ ಸಮಾವೇಶ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ. ಹೀಗಾಗಿ ಬಿ.ಕೆ. ಹರಿಪ್ರಸಾದ್ ವರ್ಸಸ್ ಸಿದ್ದರಾಮಯ್ಯ, ಮಧು ಬಂಗಾರಪ್ಪ ಎಂಬಂತೆ ಇದು ಬಿಂಬಿತವಾಗಿದೆ.
ಇದು ರಾಜಕೀಯ ಕುತಂತ್ರದ ಸಮಾವೇಶ: ಬಿ.ಕೆ. ಹರಿಪ್ರಸಾದ್
ಬೆಂಗಳೂರಿನಲ್ಲಿ ಈಡಿಗ ಸಮಾವೇಶವನ್ನು ಮಾಡುತ್ತಿದ್ದಾರೆ. ನಾನು ಹುಬ್ಬಳ್ಳಿಯಲ್ಲಿ ಇದ್ದೇನೆ. ಅವರಿಗೆ ಒಳ್ಳೆಯದಾಗಲಿ. ಈಡಿಗ ಸಂಘದಲ್ಲಿ ಬಹಳ ದೊಡ್ಡ ದೊಡ್ಡ ನಾಯಕರು ಸಂಘ ಕಟ್ಟಿದ್ದಾರೆ. ಸರ್ಕಾರದ ಗಮನ ಸೆಳೆಯಲು, ಸಮಾಜದ ಹಿತ ಕಾಪಾಡಲು ಸಂಘ ಇತ್ತು. ಆದರೆ, ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ? 50 ಲಕ್ಷ ಜನ ಸಂಖ್ಯೆ ಇದ್ದಾರೆ ಅಂತ ಹೇಳುತ್ತಿದಾರೆ. ಇವರು ಸಂಘದ ಹಿತಾಸಕ್ತಿ ಕಾಪಾಡಬಹುದಾ? ಇದು ರಾಜಕೀಯ ಕುತಂತ್ರದಿಂದ ಮಾಡಿದ ಸಮಾವೇಶ. ಇದರಿಂದ ಒಳ್ಳೆಯದಾಗುವುದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹುಬ್ಬಳ್ಳಿಯಲ್ಲಿ ಹೇಳಿದರು.
ಇದು ಕುತಂತ್ರದ ಸಮಾವೇಶ
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಬಿಲ್ಲವ ಸಮುದಾಯಕ್ಕೆ ಜಾಗ ಕೊಡಲಾಗಿತ್ತು. ಅದನ್ನು ಬಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ಕೊಟ್ಟಿದ್ದಾರೆ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಹಣ ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನ ಮಾಡಿದ್ದಾರೆ ಅನ್ನೋದನ್ನು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾನು ಭಾಗಿಯಾಗಲ್ಲ. ಈ ಸಮಾವೇಶ ರಾಜಕೀಯ ಕುತಂತ್ರದಿಂದ ಮಾಡುತ್ತಿರುವುದು ಎಂದಷ್ಟೇ ಹೇಳುತ್ತಿದ್ದೇನೆ. ಇದನ್ನು ನೀವು ಹೇಗಾದರೂ ಅರ್ಥೈಸಿಕೊಳ್ಳಿ ಎಂದು ಮಾಧ್ಯಮದವರಿಗೆ ಹೇಳಿದರು.
ಇದನ್ನೂ ಓದಿ: HD Kumaraswamy: ಬಿಜೆಪಿಗೆ 50 ಶಾಸಕರ ಕರ್ಕೊಂಡು ಬರ್ತೇವೆ ಎಂದಿರುವ ಕಾಂಗ್ರೆಸ್ ನಾಯಕ!
ಸಿದ್ದರಾಮಯ್ಯ ಜತೆ ಅಷ್ಟೇನು ಚೆನ್ನಾಗಿ ಇಲ್ಲ
ನಾನು ರಾಜಕೀಯ ಕುತಂತ್ರಕ್ಕೆ ಬಗ್ಗಲ್ಲ. ನಾವು ಸಿಎಂ ಸಿದ್ದರಾಮಯ್ಯ ಅವರ ಜತೆ ಬಹಳ ಚೆನ್ನಾಗೇನೂ ಇಲ್ಲ. 2006ರಲ್ಲಿ ಅವರು ಪಕ್ಷಕ್ಕೆ ಬಂದಿರೋದು. ನನಗೆ ಅವರ ಜತೆಗೆ ಅಷ್ಟೇನೂ ಪರಿಚಯ ಇಲ್ಲ. ಯಾವ ಕಾರಣಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆಯೋ ಅದನ್ನು ಮೊದಲು ಈಡೇರಿಸಬೇಕು. ಅದು ಆಗಿಲ್ಲವೆಂದಾದರೆ ನಾನು ಪ್ರಶ್ನೆ ಮಾಡುತ್ತೇನೆ. ಹನಿಮೂನ್ ಪೀರಿಯಡ್ ಮುಗಿಯಲಿ ನೋಡೋಣ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದರು.