ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಎರಡನೇ ಸಿಎಂ ಜನಸ್ಪಂದನ (CM Janaspandana) ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಜನಸಾಗರವೇ ಹರಿದುಬಂದಿದೆ. ಬೆಳಗ್ಗೆ 10 ಗಂಟೆಯಿಂದಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಾಗರಿಕರ ಅಹವಾಲುಗಳನ್ನು ಆಲಿಸಲು ಪ್ರಾರಂಭ ಮಾಡಿದ್ದು, ಸಂಜೆ 6 ಗಂಟೆವರೆಗೆ ಸಮಸ್ಯೆಗೆ ಪರಿಹಾರವನ್ನು ಕೊಡುವ ಕೆಲಸ ಮಾಡಲಿದ್ದಾರೆ. ಈ ಬಾರಿ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನೂರಾರು ಮಂದಿ ಆರ್ಥಿಕ ನೆರವು ಕೋರಿ ಸಿಎಂ ಸಿದ್ದರಾಮಯ್ಯ ಅವರ ಬಳಿಗೆ ಬಂದಿದ್ದು, ಒಬ್ಬೊಬ್ಬರದ್ದೇ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗುತ್ತಿದೆ.
ಅರ್ಹರಿಗೆಲ್ಲರಿಗೂ ಸಿಎಂ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಹವಾಲು ಹಿಡಿದು ಬಂದವರಿಗೆ ತಕ್ಷಣವೇ ಸ್ಪಂದನೆ ಸಿಗುತ್ತಿದ್ದು, ಸಿಎಂ ಪರಿಹಾರ ನಿಧಿಯಲ್ಲಿ ಹಣ ಮಂಜೂರು ಮಾಡುವ ಕುರಿತು ಅರ್ಜಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ.
ಇದನ್ನೂ ಓದಿ: Janatha Darshan : 3 ತಿಂಗಳಲ್ಲಿ ಜನಸ್ಪಂದನ ಅರ್ಜಿಗೆ ಪರಿಹಾರ ಕೊಡಿ; ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ
ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿಕೆ
ನೆಲಮಂಗಲದ ಕ್ಯಾನ್ಸರ್ ರೋಗಿ ಚೌಡೇಶ್ವರಿಗೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಈ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಆರ್ಥಿಕ ನೆರವು ಕೋರಿದ ಅಂಧ ಶರಣ ಬಸವ ಕುಮಾರ್
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಶರಣ ಬಸವ ಕುಮಾರ್ ಅವರಿಗೆ ಎರಡೂ ಕಣ್ಣುಗಳು ಕಾಣದಾಗಿದ್ದು, ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಕೋರಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಅಭಯವನ್ನಿತ್ತರು. ಈ ವೇಳೆ ಸಂಡೂರು ಶಾಸಕ ಈ. ತುಕಾರಾಮ್ ಅವರು ಮುಖ್ಯಮಂತ್ರಿಗಳ ಜತೆ ಉಪಸ್ಥಿತರಿದ್ದರು.
ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆಗಾಗಿ ಮೊರೆ
ತುಮಕೂರಿನ ಮಾಡಗಶಿರಾ ಗ್ರಾಮದ ಶಾಂತಿಬಾಯಿ ಅವರು ತಮ್ಮ ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆ ಮಾಡಿಸಲು ನೆರವು ಕೋರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಜಿ ಸಲ್ಲಿಸಿದರು. ಮಗುವಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ಸಿಎಂ ಸಿದ್ದರಾಮಯ್ಯ ಅವರು ನೆರವು ನೀಡುವ ಅಭಯ ನೀಡಿದರು.
ಥಲೆಸ್ಸೆಮಿಯಾ ಕಾಯಿಲೆಗೆ ಚಿಕಿತ್ಸೆ ನೀಡಲು ಮನವಿ
ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆಗೆ ತುತ್ತಾಗಿದ್ದಾನೆ. ಈತನನ್ನು ಜನಸ್ಪಂದನ ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಅವರು ಆರ್ಥಿಕ ಸಹಾಯವನ್ನು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಲಾಗುವುದು ಎಂದು ಅರ್ಜಿಯನ್ನು ಸ್ವೀಕರಿಸಿ ಭರವಸೆ ನೀಡಿದರು.
ಇದನ್ನೂ ಓದಿ: CM Janaspandana: ವಿಶೇಷ ಚೇತನರಿದ್ದ ಜಾಗಕ್ಕೇ ತಿಂಡಿ ತಂದು ಕೊಟ್ಟ ಅಧಿಕಾರಿಗಳು!
ಮೂತ್ರಪಿಂಡ ವೈಫಲ್ಯಕ್ಕೆ ಆರ್ಥಿಕ ನೆರವು ಕೋರಿದ ಬೆಂಗಳೂರು ನಿವಾಸಿ
ಬೆಂಗಳೂರಿನ ಜೆ.ಜೆ ನಗರ ನಿವಾಸಿ ಎಂ.ಶ್ರೀಧರ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಪರಿಹಾರ ನೀಡುವ ಭರವಸೆ ನೀಡಿದರು.