ಬೆಂಗಳೂರು: ಇಂದಿನ ಜನ ಸ್ಪಂದನೆಯಲ್ಲಿ (CM Janaspandana) 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಒಟ್ಟು 20 ಸಾವಿರ ಮಂದಿ ಭಾಗಿಯಾಗಿದ್ದಾರೆ. ಆಯಾ ಜಿಲ್ಲೆಗೆ ಸಂಬಂಧಪಟ್ಟ ಅರ್ಜಿಗಳನ್ನು ಆಯಾ ಜಿಲ್ಲಾಧಿಕಾರಿಗಳು ಸಮಯ ಮಿತಿಯೊಳಗೆ ಬಗೆಹರಿಸುತ್ತಾರೆ. ಒಂದು ತಿಂಗಳೊಳಗೆ ಜನ ಸ್ಪಂದನೆ ಅರ್ಜಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಎರಡನೇ ಜನಸ್ಪಂದನದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವರ ವ್ಯಾಪ್ತಿಯ ಅರ್ಜಿಗಳನ್ನು ಆದಷ್ಟು ಬೇಗ ಪರಿಹರಿಸಲು ಸೂಚನೆ ನೀಡಿದ್ದೇನೆ. ಮೊದಲ ಜನ ಸ್ಪಂದನೆಯಲ್ಲಿ ಬಂದ ಅರ್ಜಿಗಳಲ್ಲಿ ಶೇ. 98ರಷ್ಟಕ್ಕೆ ಪರಿಹಾರ ದೊರಕಿವೆ. ಈ ಬಾರಿಯೂ ಅಷ್ಟೇ ತ್ವರಿತವಾಗಿ ಪರಿಹಾರ ಒದಗಿಸಲು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಅಧಿಕಾರಿಗಳು ಕೆಳ ಹಂತದಲ್ಲೇ ಸಮಸ್ಯೆ ಬಗೆಹರಿಸಿದರೆ ಬೆಂಗಳೂರಿಗೆ ಜನ ಬಂದು ಅರ್ಜಿ ಕೊಡುವ ಸಂದರ್ಭ ಉದ್ಭವಿಸುವುದಿಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲೆ ಈ ಜವಾಬ್ದಾರಿ ಹೆಚ್ಚು ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೇನೆ
ಆಡಳಿತ ಜಡತ್ವದಿಂದ ಕೂಡಿರಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡ್ತೇನೆ. ನಿಮ್ಮ ಹಂತದಲ್ಲೇ ಸಮಸ್ಯೆ ಬಗೆಹರಿಸಿ ಎನ್ನುವ ಎಚ್ಚರಿಕೆ ಕೊಡುತ್ತೇನೆ. ಜನರನ್ನು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳೊಳಗೆ ಹೆಚ್ಚು ಅರ್ಜಿ, ಅಹವಾಲು ಪರಿಗಣಿಸಿ ಎಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇದೇ ವೇಳೆ ಸೂಚನೆ ನೀಡಿದರು.
ಇದನ್ನೂ ಓದಿ: CM Siddaramaiah: ಹೌದು Mr Modi, ಇದು ನಿಮ್ದೇ ಓದಿ! ಕೇಂದ್ರದ ವಿರುದ್ಧ ಸರಣಿ ಪೋಸ್ಟ್ ಹಾಕಿದ ಸಿಎಂ ಸಿದ್ದರಾಮಯ್ಯ
ಅಗೌರವ ತೋರಿದರೆ ಅಧಿಕಾರಿಗಳ ಮೇಲೆ ಕ್ರಮ
ಜನರಿಗೆ ಸ್ಪಂದಿಸದೆ ಅವರಿಗೆ ಅಗೌರವ ತಂದರೆ ಅಂತಹ ಅಧಿಕಾರಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾರು ಕೂಡ ಸಂಶಯ, ಚಿಂತೆ, ಆತಂಕ ಪಡಬೇಕಿಲ್ಲ. ನೀವು ಕೊಟ್ಟ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಸಾರ್ವಜನಿಕರಿಗೆ ಎಲ್ಲ ಭರವಸೆಗಳನ್ನು ಈಡೇರಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಜನಸ್ಪಂದನದಲ್ಲಿ ಕೈಕೊಟ್ಟ ಸರ್ವರ್; ಸಿಎಂಗೆ ಧಿಕ್ಕಾರ ಕೂಗಿದಾತನಿಂದಲೇ ಮತ್ತೆ ಜೈಕಾರ!
ಸಿಎಂ ಜನಸ್ಪಂದನದಲ್ಲಿ ಅರ್ಜಿ ಸ್ವೀಕಾರದ ವೇಳೆ ಸರ್ವರ್ ಕೈ ಕೊಟ್ಟಿದೆ. ಇದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾನೆ. ಸಮಸ್ಯೆ ಬಗೆಹರಿಯುತ್ತಿದ್ದಂತೆ ಸಿಎಂ ಪರವಾಗಿ ಜೈಕಾರ ಕೂಗಿದ್ದಾನೆ!
ಅರ್ಜಿ ಸ್ವೀಕಾರ ವಿಳಂಬ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದಾನೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಆಯುಕ್ತ ದಯಾನಂದ್, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್, ಸರ್ವರ್ ಸಮಸ್ಯೆಯನ್ನು ಗಮನಕ್ಕೆ ತಂದು ವ್ಯಕ್ತಿಯ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶಗೊಂಡರು. ಬಳಿಕ ಸಮಸ್ಯೆ ಬಗೆಹರಿಯುತ್ತಿದ್ದಂತೆ ಸಿದ್ದರಾಮಯ್ಯಗೆ ಅದೇ ವ್ಯಕ್ತಿ ಜೈಕಾರ ಕೂಗಿದ್ದಾನೆ.
ಇದನ್ನೂ ಓದಿ: Janatha Darshan : 3 ತಿಂಗಳಲ್ಲಿ ಜನಸ್ಪಂದನ ಅರ್ಜಿಗೆ ಪರಿಹಾರ ಕೊಡಿ; ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ
ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿಕೆ
ನೆಲಮಂಗಲದ ಕ್ಯಾನ್ಸರ್ ರೋಗಿ ಚೌಡೇಶ್ವರಿಗೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಈ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಆರ್ಥಿಕ ನೆರವು ಕೋರಿದ ಅಂಧ ಶರಣ ಬಸವ ಕುಮಾರ್
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಶರಣ ಬಸವ ಕುಮಾರ್ ಅವರಿಗೆ ಎರಡೂ ಕಣ್ಣುಗಳು ಕಾಣದಾಗಿದ್ದು, ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಕೋರಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಅಭಯವನ್ನಿತ್ತರು. ಈ ವೇಳೆ ಸಂಡೂರು ಶಾಸಕ ಈ. ತುಕಾರಾಮ್ ಅವರು ಮುಖ್ಯಮಂತ್ರಿಗಳ ಜತೆ ಉಪಸ್ಥಿತರಿದ್ದರು.
ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆಗಾಗಿ ಮೊರೆ
ತುಮಕೂರಿನ ಮಾಡಗಶಿರಾ ಗ್ರಾಮದ ಶಾಂತಿಬಾಯಿ ಅವರು ತಮ್ಮ ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆ ಮಾಡಿಸಲು ನೆರವು ಕೋರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಜಿ ಸಲ್ಲಿಸಿದರು. ಮಗುವಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ಸಿಎಂ ಸಿದ್ದರಾಮಯ್ಯ ಅವರು ನೆರವು ನೀಡುವ ಅಭಯ ನೀಡಿದರು.
ಥಲೆಸ್ಸೆಮಿಯಾ ಕಾಯಿಲೆಗೆ ಚಿಕಿತ್ಸೆ ನೀಡಲು ಮನವಿ
ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆಗೆ ತುತ್ತಾಗಿದ್ದಾನೆ. ಈತನನ್ನು ಜನಸ್ಪಂದನ ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಅವರು ಆರ್ಥಿಕ ಸಹಾಯವನ್ನು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಲಾಗುವುದು ಎಂದು ಅರ್ಜಿಯನ್ನು ಸ್ವೀಕರಿಸಿ ಭರವಸೆ ನೀಡಿದರು.
ಇದನ್ನೂ ಓದಿ: CM Janaspandana: ವಿಶೇಷ ಚೇತನರಿದ್ದ ಜಾಗಕ್ಕೇ ತಿಂಡಿ ತಂದು ಕೊಟ್ಟ ಅಧಿಕಾರಿಗಳು!
ಮೂತ್ರಪಿಂಡ ವೈಫಲ್ಯಕ್ಕೆ ಆರ್ಥಿಕ ನೆರವು ಕೋರಿದ ಬೆಂಗಳೂರು ನಿವಾಸಿ
ಬೆಂಗಳೂರಿನ ಜೆ.ಜೆ ನಗರ ನಿವಾಸಿ ಎಂ.ಶ್ರೀಧರ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಪರಿಹಾರ ನೀಡುವ ಭರವಸೆ ನೀಡಿದರು.