ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಎರಡನೇ ಸಿಎಂ ಜನಸ್ಪಂದನ (CM Janaspandana) ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿತ್ತು. ರಾಜ್ಯದ ಮೂಲೆ ಮೂಲೆಯಿಂದ ಜನಸಾಗರವೇ ಹರಿದುಬಂದಿದ್ದು, ಸರಿಸುಮಾರು. 11 ಸಾವಿರ ಅರ್ಜಿಗಳು ಸ್ವೀಕೃತವಾಗಿವೆ. ಒಟ್ಟು 20 ಸಾವಿರ ಮಂದಿ ಭಾಗಿಯಾಗಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಾಗರಿಕರ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಸಾಕಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಘೋಷಿಸಿದರು.
ಈ ಜನಸ್ಪಂದನೆ ವೇಳೆ ಸ್ಥಳದಲ್ಲೇ ಮೂವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಟ್ಟು 10 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ನರಸಿಂಹ ಮೂರ್ತಿ ಚಿಕಿತ್ಸೆಗೆ 4 ಲಕ್ಷ ರೂ. ಸಹಾಯಧನ
ರಾಮನಗರ ಜಿಲ್ಲೆಯ ವಿಜಯಕುಮಾರ್ ಬಿನ್ ನರಸಿಂಹಮೂರ್ತಿ ಎಂಬುವವರಿಗೆ ಕಿಡ್ನಿ ಕಸಿ ಚಿಕಿತ್ಸೆಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ ಮಂಜೂರು ಮಾಡಿದರು.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಸನಗೌಡ ಬಿರಾದಾರ್ ಬೋನ್ ಮ್ಯಾರೋ ಕಸಿಗಾಗಿ 4 ಲಕ್ಷ ರೂ.ಗಳ ಧನಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ ಮಂಜೂರು ಮಾಡಿದರು.
ತುಮಕೂರು ಜಿಲ್ಲೆಯ 8 ವರ್ಷದ ಶಾಂಭವಿ ಎಂಬ ಮಗುವಿಗೆ ಶ್ರವಣ ಸಾಧನಕ್ಕಾಗಿ 50 ಸಾವಿರ ರೂ.ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ ಮಂಜೂರು ಮಾಡಿದರು.
ಅಪಘಾತಕ್ಕೆ ಒಳಗಾದ ಲೋಕೇಶ್ ಪುಟ್ಟನಾಯಕ ಅವರಿಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ 50 ಸಾವಿರ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳದಲ್ಲಿಯೇ ಘೋಷಿಸಿ ಪರಿಹಾರ ಬಿಡುಗಡೆ ಪತ್ರವನ್ನು ನೀಡಿದರು.
ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನ ಎಂಟು ವರ್ಷದ ಎನ್.ಕೃಷ್ಣ ಅವರಿಗೆ 1 ಲಕ್ಷ ರೂಪಾಯಿಗಳ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸ್ಪಂದನದ ಸ್ಥಳದಲ್ಲಿಯೇ ಘೋಷಿಸಿದರು.
ಇದನ್ನೂ ಓದಿ: Janatha Darshan : 3 ತಿಂಗಳಲ್ಲಿ ಜನಸ್ಪಂದನ ಅರ್ಜಿಗೆ ಪರಿಹಾರ ಕೊಡಿ; ಅಧಿಕಾರಿಗಳಿಗೆ ಸಿಎಂ ಸ್ಪಷ್ಟ ಸೂಚನೆ
ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಕೋರಿಕೆ
ನೆಲಮಂಗಲದ ಕ್ಯಾನ್ಸರ್ ರೋಗಿ ಚೌಡೇಶ್ವರಿಗೆ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದ್ದು, ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಈ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ನಿಧಿ ಶಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಆರ್ಥಿಕ ನೆರವು ಕೋರಿದ ಅಂಧ ಶರಣ ಬಸವ ಕುಮಾರ್
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಶರಣ ಬಸವ ಕುಮಾರ್ ಅವರಿಗೆ ಎರಡೂ ಕಣ್ಣುಗಳು ಕಾಣದಾಗಿದ್ದು, ಸ್ವಂತ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಕೋರಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡುವುದಾಗಿ ಅಭಯವನ್ನಿತ್ತರು. ಈ ವೇಳೆ ಸಂಡೂರು ಶಾಸಕ ಈ. ತುಕಾರಾಮ್ ಅವರು ಮುಖ್ಯಮಂತ್ರಿಗಳ ಜತೆ ಉಪಸ್ಥಿತರಿದ್ದರು.
ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆಗಾಗಿ ಮೊರೆ
ತುಮಕೂರಿನ ಮಾಡಗಶಿರಾ ಗ್ರಾಮದ ಶಾಂತಿಬಾಯಿ ಅವರು ತಮ್ಮ ಬುದ್ಧಿಮಾಂದ್ಯ ಮಗುವಿಗೆ ಚಿಕಿತ್ಸೆ ಮಾಡಿಸಲು ನೆರವು ಕೋರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಅರ್ಜಿ ಸಲ್ಲಿಸಿದರು. ಮಗುವಿನ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮರುಗಿದ ಸಿಎಂ ಸಿದ್ದರಾಮಯ್ಯ ಅವರು ನೆರವು ನೀಡುವ ಅಭಯ ನೀಡಿದರು.
ಥಲೆಸ್ಸೆಮಿಯಾ ಕಾಯಿಲೆಗೆ ಚಿಕಿತ್ಸೆ ನೀಡಲು ಮನವಿ
ರಾಯಚೂರಿನ ಮೂರು ವರ್ಷದ ಶುಶಾಂತ್ ಥಲೆಸ್ಸೆಮಿಯಾ ಕಾಯಿಲೆಗೆ ತುತ್ತಾಗಿದ್ದಾನೆ. ಈತನನ್ನು ಜನಸ್ಪಂದನ ಕಾರ್ಯಕ್ರಮಕ್ಕೆ ಕರೆತಂದ ತಾಯಿ ಲಲಿತಾ ಅವರು ಆರ್ಥಿಕ ಸಹಾಯವನ್ನು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ಒದಗಿಸಲಾಗುವುದು ಎಂದು ಅರ್ಜಿಯನ್ನು ಸ್ವೀಕರಿಸಿ ಭರವಸೆ ನೀಡಿದರು.
ಇದನ್ನೂ ಓದಿ: CM Janaspandana: ವಿಶೇಷ ಚೇತನರಿದ್ದ ಜಾಗಕ್ಕೇ ತಿಂಡಿ ತಂದು ಕೊಟ್ಟ ಅಧಿಕಾರಿಗಳು!
ಮೂತ್ರಪಿಂಡ ವೈಫಲ್ಯಕ್ಕೆ ಆರ್ಥಿಕ ನೆರವು ಕೋರಿದ ಬೆಂಗಳೂರು ನಿವಾಸಿ
ಬೆಂಗಳೂರಿನ ಜೆ.ಜೆ ನಗರ ನಿವಾಸಿ ಎಂ.ಶ್ರೀಧರ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೋರಿ ಮನವಿ ಸಲ್ಲಿಸಿದರು. ಸಮಸ್ಯೆ ಆಲಿಸಿದ ಸಿಎಂ ಸಿದ್ದರಾಮಯ್ಯ ಅವರು, ಪರಿಹಾರ ನೀಡುವ ಭರವಸೆ ನೀಡಿದರು.