Site icon Vistara News

Lakshmi Hebbalkar: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಿಎಂ ಕರೆದು ಬುದ್ಧಿ ಹೇಳಲಿ: ಎಚ್.ಡಿ. ಕುಮಾರಸ್ವಾಮಿ ತರಾಟೆ

Lakshmi Hebbalkar and HD Kumaraswamy

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ತರಾಟೆಗೆ ತೆಗೆದುಕೊಂಡಿದ್ದು, ಇಂತಹ ಅಸಂಬದ್ಧ ಹೇಳಿಕೆಗಳನ್ನು ನೀಡುವ ಸಚಿವರಿಗೆ ಮುಖ್ಯಮಂತ್ರಿ ಕರೆದು ಬುದ್ಧಿ ಹೇಳಲಿ ಎಂದು ಕಿಡಿಕಾರಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ಇದು ಎಂದೋ ಮುಗಿದು ಹೋಗಿರುವ ವಿಷಯ. ಅದನ್ನು ಮತ್ತೆ ಮತ್ತೆ ಕೆಣಕುವ ಅಗತ್ಯ ಏನಿದೆ? ಬಹುಶಃ ಅವರಿಗೆ ಮಹಾರಾಷ್ಟ್ರದ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗಿಲ್ಲ. ನೆರೆ ರಾಜ್ಯದ ಮೇಲೆ ಅವರಿಗೆ ವ್ಯಾಮೋಹ ಜಾಸ್ತಿ ಅಂತ ಕಾಣುತ್ತದೆ ಎಂದು ಕಿಡಿಕಾರಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಸಚಿವರೇ ಇಂತಹ ಅನಗತ್ಯ, ವಿವಾದಾಸ್ಪದ ವಿಷಯಗಳನ್ನು ಮಾತಾಡಿದರೆ ನೀವೇ ನೀರು ಎರೆದ ಹಾಗೆ ಅಲ್ಲವಾ? ಸಿಎಂ ಸಿದ್ದರಾಮಯ್ಯ ಅವರಿಗೆ ಮಂತ್ರಿಗಳ ಮೇಲೆ ಹಿಡಿತ ಇದ್ದರೆ ಅವರನ್ನು ಕರೆದು ಸರಿಯಾಗಿ ಬುದ್ಧಿ ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯ ಮಾಡಿದರು.

ಅಭಿವೃದ್ಧಿ ಕುಂಠಿತವಾಗಿದೆ

ಗ್ಯಾರಂಟಿ ಹೆಸರಲ್ಲಿ ಸರ್ಕಾರ ರಚನೆ ಮಾಡಿರುವುದರಿಂದ‌ ಈ ಮಂತ್ರಿಗಳಿಗೆ ಯಾವುದೇ ಅಭಿವೃದ್ಧಿ ರಾಜ್ಯದಲ್ಲಿ ಕಾಣುತ್ತಿಲ್ಲ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರೇ ಈ ಮಾತನ್ನು ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

8 ತಿಂಗಳು ಆಗಿದೆ ಸರ್ಕಾರ ಬಂದು. ಬರ ಪರಿಹಾರ ವಿಚಾರದಲ್ಲಿ ಸರ್ಕಾರ ಹೇಗೆ ನಡೆದುಕೊಳ್ಳುತಿದೆ ಎನ್ನುವುದನ್ನು ಜನ ನೋಡುತ್ತಿದ್ದಾರೆ. 2 ಸಾವಿರ ಹಣ ಕೊಡಲು 105 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಅದು ಎಷ್ಟು ಜನರಿಗೆ ಹೋಗುತ್ತದೆ. ಬರದಿಂದ 30 ಸಾವಿರ ಕೋಟಿ ನಷ್ಟ ಆಗಿದೆ ಅಂತ ಹೇಳಿ 105 ಕೋಟಿ ಬಿಡುಗಡೆ ಮಾಡಿದರೆ ಸಾಕಾ? ಇಷ್ಟು ಹಣದಿಂದ ಯಾವ ಪುರುಷಾರ್ಥ ಸಾಧಿಸುತ್ತಾರೆ? ರೈತರನ್ನು ಬದುಕಿಸೋಕೆ ಸಾಧ್ಯನಾ? ಎಂದು ಎಚ್.ಡಿ. ಕುಮಾರಸ್ವಾಮಿ ಖಾರವಾಗಿ ಪ್ರಶ್ನೆ ಮಾಡಿದರು.

ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಕನ್ನಡ ಭಾಷೆಗೆ ಬಹಳಷ್ಟು ವರ್ಷಗಳ ಇತಿಹಾಸವಿದೆ ಎಂಬುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ನಮ್ಮ ಭಾಷೆ, ಕಲೆ, ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ನಾವು ಈ ನಾಡಿನಲ್ಲಿ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಹೇಳಿದ್ದರು. ಅಂದರೆ, ಏಕೀಕರಣ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿತು ಎಂಬ ಅರ್ಥದಲ್ಲಿ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು.

ಇದನ್ನೂ ಓದಿ: Lakshmi Hebbalkar: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತೇ? ವಿವಾದ ಸುಳಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್; ಬೆನ್ನಿಗೆ ನಿಂತ ಸಚಿವರು!

ಸ್ಪಷ್ಟೀಕರಣ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

‌ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟೀಕರಣ ನೀಡಿದ್ದಾರೆ. “ನಾನು ಕಾರದಗಾದ ಕನ್ನಡ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡಬಯಸುತ್ತೇನೆ. ನಾನು ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡಿದ್ದೇನೆ. ಗಡಿ ಭಾಗದಲ್ಲಿ ಇಷ್ಟೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು – ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ. ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕೆಂದು ಮಾಧ್ಯಮದ ಸ್ನೇಹಿತರಲ್ಲಿ ವಿನಂತಿಸುತ್ತೇನೆ. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು.

Exit mobile version