Site icon Vistara News

CM Siddaramaiah: ಮೌಲ್ವಿ ಫೋಟೊ ಹಾಕಿ ಮೋದಿ ಟಾರ್ಗೆಟ್‌ ಮಾಡಿದ ಯತ್ನಾಳ್‌ ಎಂದ ಸಿದ್ದರಾಮಯ್ಯ

PM Narenda modi and Moulvi thanveer Peera

ಬೆಂಗಳೂರು: ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ (Moulvi thanveer Peera) ಸಂಪರ್ಕದ ಬಗ್ಗೆ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagowda Pateel Yatnal) ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧವಾಗಿ ಮಾಡಿರುವ ಆರೋಪವು ರಾಜಕೀಯವಾಗಿ ಹಲವು ಆಯಾಮಗಳಿಗೆ ತಳುಕು ಹಾಕುವ ಪ್ರಯತ್ನಗಳಿಗೆ ಕಾರಣವಾಗುತ್ತಿದೆ. ಯತ್ನಾಳ್‌ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡುತ್ತಲೇ ಬರುತ್ತಿದ್ದಾರೆ. ಯತ್ನಾಳ್‌ ಈ ಫೋಟೊ ಹಾಕಿದ್ದರ ಹಿಂದಿನ ಸತ್ಯ ಏನು ಎಂಬುದನ್ನು ಈಗ ಸಿದ್ದರಾಮಯ್ಯ ಹೇಳಿದ್ದಾರೆ. ಯತ್ನಾಳ್‌ ನನ್ನ ವಿರುದ್ಧ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಕಾಲೆಳೆದಿದ್ದಾರೆ.

ಐಸಿಸ್‌ ಸಂಘಟನೆ ಜತೆ ಮುಸ್ಲಿಂ ಮೌಲ್ವಿ ತನ್ವೀರ್‌ ಪೀರಾ (Moulvi thanveer Peera) ಸಂಪರ್ಕ ಹೊಂದಿದ್ದು, ಅವರ ಜತೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ ಸಿದ್ದರಾಮಯ್ಯ ‌ವೇದಿಕೆ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಆಗ್ರಹಿಸಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿ, ಯತ್ನಾಳ ಒಬ್ಬ ಮಹಾನ್ ಸುಳ್ಳುಗಾರ. ತನ್ವೀರ್‌ ಪೀರಾ ಅವರ ಜತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಸುಮ್ಮನಿದ್ದರು? ಎಂದು ಪ್ರಶ್ನೆ ಮಾಡಿದ್ದಾರೆ. ತನಿಖೆ ನಡೆಸಿ ಪ್ರೂವ್‌ ಮಾಡಿ ಎಂದು ಸವಾಲು ಹಾಕಿದ್ದರು. ಈಗ ಈ ವಿವಾದವನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಪೋಸ್ಟ್‌ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

NIA ಅಧಿಕಾರಿಗಳಿಗೆ ಎಲ್ಲ ಮಾಹಿತಿ ಕೊಟ್ಟಿದ್ದೇನೆ.. | Basanagouda Patil Yatnal | Vistara News

ಇದನ್ನೂ ಓದಿ: Belagavi Winter Session: ಗ್ಯಾರಂಟಿಗೆ 11000 ಕೋಟಿ ರೂ. ಬಳಕೆ; ಯಾವುದಕ್ಕೆ ಎಷ್ಟು? ಲೆಕ್ಕ ಕೊಟ್ಟ ಸರ್ಕಾರ!

ಸಿಎಂ ಸಿದ್ದರಾಮಯ್ಯ ಪೋಸ್ಟ್‌ನಲ್ಲೇನಿದೆ?

“ಮೌಲ್ವಿ ತನ್ವೀರ್ ಹಾಶ್ಮಿ ಅವರ ಜತೆಗಿನ ನನ್ನ ಫೋಟೊವನ್ನು ಹಿಡಿದುಕೊಂಡು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ.

ಮೌಲ್ವಿ ಹಾಶ್ಮಿ ಅವರ ಜತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಫೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ?

ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಹೋಗಿರುವುದರಿಂದ ಯತ್ನಾಳ್ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜತೆಗಿನ ನನ್ನ ಪೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ. ಈ ಆರೋಪದ ನಂತರ ಮೌಲ್ವಿ ಅವರ ಜತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧದ ವಿವರವೂ ಹೊರಬರಲಿದೆ ಎನ್ನುವುದು ಅವರಿಗೆ ಖಂಡಿತ ಗೊತ್ತಿತ್ತು. ಅವೆಲ್ಲವೂ ಬಯಲಾಗಿ ಪ್ರಧಾನಿ ಮತ್ತು ಬಿಜೆಪಿ ನಾಯಕರು ಮುಜುಗರಕ್ಕೀಡಾಗಲಿ ಎನ್ನುವ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುವ ಆಟ ಆಡಿದ್ದಾರೆ.

ಸಂಬಂಧದ ವಿವರವನ್ನು ಮೋದಿ ದೇಶದ ಮುಂದಿಡಬೇಕು

ಮೌಲ್ವಿ ಹಾಶ್ಮಿ ಅವರ ಜತೆಗಿನ ನನ್ನ ಸ್ನೇಹ ಸಂಬಂಧವನ್ನು ನಾನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. ಹಾಶ್ಮಿಯವರೂ ಕೂಡಾ ಅವರ ಮೇಲಿನ ಆರೋಪದ ತನಿಖೆಯನ್ನು ಕೇಂದ್ರ ಸರ್ಕಾರವೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಮೌಲಿ ತನ್ವೀರ್ ಹಾಶ್ಮಿ ಅವರಿಗೆ ನಿಜವಾಗಿ ಐಸಿಎಸ್ ಜತೆ ಸಂಬಂಧ ಇದ್ದರೆ ಆ ಬಗ್ಗೆ ತನಿಖೆಗೆ ಪ್ರಧಾನಿಯವರು ತಕ್ಷಣ ಆದೇಶ ನೀಡಬೇಕು ಮತ್ತು ಹಾಶ್ಮಿ ಮತ್ತು ತನ್ನ ಸಂಬಂಧದ ವಿವರವನ್ನು ದೇಶದ ಮುಂದಿಡಬೇಕು. ಇದು ಎರಡೂ ಮಾಡದೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮವನ್ನಾದರೂ ಕೈಗೊಳ್ಳಬೇಕು.

ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು?

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ ಎರಡು ಸಾವಿರ ಕೋಟಿ ರೂಪಾಯಿ ಕೊಡಬೇಕಾಗುತ್ತದೆ ಎನ್ನುವ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ. ಈ ರೀತಿ ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು? ಬಿಜೆಪಿಯಲ್ಲಿರುವ ಯಾವ ‘ಜೀ’’ ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ.

ಇದನ್ನೂ ಓದಿ: Belagavi Winter Session: ಮೋಡ ಬಿತ್ತನೆಗೆ ಮುಂದಾದ ಸರ್ಕಾರ; ಶೀಘ್ರ ತೀರ್ಮಾನವೆಂದ ಡಿಕೆಶಿ

ಕೇಂದ್ರ ಸರ್ಕಾರ ತನಿಖೆ ನಡೆಸಬೇಕು

ಇಂದಿನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಮೌಲ್ವಿ ತನ್ವೀರ್ ಹಾಶ್ಮಿ ಕುಟುಂಬದ ಜತೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವ್ಯಾಪಾರಿ ಸಂಬಂಧ ಕೂಡಾ ಇದೆ ಎನ್ನುವುದು ಬಯಲಾಗಿದೆ. ಯತ್ನಾಳ್ ಅವರ ಆರೋಪದಂತೆ ತನ್ವೀರ್ ಹಾಶ್ಮಿ ಅವರಿಗೆ ಐಸಿಸ್ ಜೊತೆ ಸಂಬಂಧ ಇರುವುದಾಗಿದ್ದರೆ ಅವರ ಜತೆಗೆ ವ್ಯವಹಾರದ ಪಾಲುದಾರರಾಗಿರುವ ಯತ್ನಾಳ್ ಅವರಿಗೆ ಅದು ಗೊತ್ತಿರಲಿಲ್ಲವೇ? ಗೊತ್ತಿದ್ದೂ ಸುಮ್ಮನಿರಲು ಕಾರಣವೇನು? ಇಷ್ಟು ಸಮಯದ ನಂತರ ಇಂತಹ ಆರೋಪ ಮಾಡಲು ಕಾರಣಗಳೇನು ಎನ್ನುವುದನ್ನು ಕೂಡಾ ಕೇಂದ್ರ ಸರ್ಕಾರ ತನಿಖೆ ನಡೆಸಬೇಕು” ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸುದೀರ್ಘ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.

Exit mobile version