ಬೆಂಗಳೂರು: ಬಾಯಿ ಮೂಲಕ 400 ಸ್ಥಾನಗಳನ್ನು ಗೆಲ್ಲುವ ಮಾತನಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಸೋಲಿನ ಭಯವಿದೆ. ಹೀಗಾಗಿ ಅವರು ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ (Congress Bank account Frozen) ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ (Central Government) ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
CM Siddaramaiah : ಸರ್ವಾಧಿಕಾರಿ ಧೋರಣೆ, ಚು. ಆಯೋಗ ಮಧ್ಯ ಪ್ರವೇಶ ಮಾಡಲಿ
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನುಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಆಗ್ರಹಪಡಿಸುತ್ತೇನೆ ಎಂದು ಸಿದ್ದರಾಮಯ್ಯ (CM Siddaramaiah) ಅವರು ಹೇಳಿದ್ದಾರೆ.
ನಮ್ಮ ಖಾತೆಯಲ್ಲಿರುವುದು ಉದ್ಯಮಿಗಳ ಹಣವಲ್ಲ, ಜನ ಸಾಮಾನ್ಯರ ಹಣ
ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ? ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದ್ದಾರೆ.
ಚುನಾವಣಾ ಬಾಂಡ್ ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎನ್ನುವುದು ಸಿದ್ದರಾಮಯ್ಯ ಅವರ ಆಗ್ರಹವಾಗಿದೆ.
ಇದನ್ನೂ ಓದಿ : Sonia Gandhi: ಆರ್ಥಿಕವಾಗಿ ಕಾಂಗ್ರೆಸ್ ಮುಗಿಸಲು ಮೋದಿ ಪ್ರಯತ್ನ ಎಂದ ಸೋನಿಯಾ ಗಾಂಧಿ!
ನರೇಂದ್ರ ಮೋದಿ ಮುಖವಾಡ ಅಷ್ಟೆ, ಅವರ ಹಿಂದಿದೆ ದುಷ್ಟ ಶಕ್ತಿ ಎಂದ ಸಿದ್ದರಾಮಯ್ಯ
“ಪ್ರಧಾನಿ ನರೇಂದ್ರಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.
“ಪ್ರಧಾನಿ @narendramodi ಅವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮುನ್ನಡೆಸುವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ @RahulGandhi ಅವರು ಹೇಳಿರುವುದು ಸರಿಯಾಗಿದೆ. ಆ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು…
— Siddaramaiah (@siddaramaiah) March 21, 2024