ಬೆಂಗಳೂರು: ಬರ ಪರಿಹಾರದ ಚರ್ಚೆಗಾಗಿ ದಿಲ್ಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmad Khan) ಅವರು ಐಷಾರಾಮಿ ವಿಮಾನದಲ್ಲಿ (Luxurious flight) ಮರಳಿ ಬೆಂಗಳೂರಿಗೆ ಬಂದಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಯಾವ ಫ್ಲೈಟ್‌ನಲ್ಲಿ ಓಡಾಡುತ್ತಾರೆ..? ಅವರದು ಐಷಾರಾಮಿ ಫ್ಲೈಟ್ ಅಲ್ವಾ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ವಿಡಿಯೊವೊಂದನ್ನು ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರಿ ಚರ್ಚೆಗೆ ಕಾರಣವಾಗಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕರು ಈ ವೀಡಿಯೋ ಶೇರ್ ಮಾಡಿಕೊಂಡಿರುವ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಇದಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಮೋದಿ ಯಾವ ಫ್ಲೈಟ್‌ನಲ್ಲಿ ಓಡಾಡುತ್ತಾರೆ..? ದೇಶದಲ್ಲಿ ಯಾವುದೇ ಸ್ಥಿತಿ ಇದ್ದರೂ ಮೋದಿ ಓಡಾಡುವ ಫ್ಲೈಟ್ ಎಂತದ್ದು? ಮೊದಲು ಅದನ್ನು ಬಿಜೆಪಿಯವರಿಗೆ ಕೇಳಿ.. ಅವರದು ಐಷಾರಾಮಿ ಫ್ಲೈಟ್ ಅಲ್ವಾ? ಎಂದು ಪ್ರಶ್ನಿಸಿದರು. ಬಿಜೆಪಿಯವರಿಗೆ ಬೇರೆ ವಿಷಯವಿಲ್ಲದೆ ಇಂಥ ವಿಚಾರಗಳನ್ನು ದೊಡ್ಡದಾಗಿ ಮಾಡುತ್ತಾರೆ ಎಂದರು.
ಪ್ರವಾಸಿ ತಾಣ ಬಂದ್ ಮಾಡುವ ಸ್ಥಿತಿ ಬಂದಿಲ್ಲ ಎಂದ ಸಿಎಂ
ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಅವರು, ಕೋವಿಡ್‌ನಿಂದ ಪ್ರವಾಸಿ ತಾಣಗಳನ್ನು ಬಂದ್ ಮಾಡುವ ವಿಚಾರ ಇಲ್ಲ ಎಂದರು. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಆರು ಜನರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಅವರಿಗೆ ಟ್ರಾವಲ್ ಹಿಸ್ಟರಿ ಇಲ್ಲ. ಅವರಿಗೆ ಬೇರೆ ಬೇರೆ ರೋಗದ ಹಿನ್ನಲೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಹೇಳಿದ ಅವರು, ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಚ್ಚರಿಕೆಯಿಂದ ಇರಬೇಕು ಎಂದರು
ಸಂಸದರ ಅಮಾನತ್ತು ಪ್ರಜಾಪ್ರಭುತ್ವದ ಕಗ್ಗೊಲೆ
ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂಸದರನ್ನು ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷದವರ ವಾದವನ್ನು ಕೇಳಬೇಕು. ಜನರ ತೀರ್ಪಿನಂತೆ ಸಂಸದರು ಲೋಕಸಭೆ ಅಥವಾ ವಿಧಾನಸಭೆಗೆ ಬಂದಿರುತ್ತಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಸಭಾಧ್ಯಕ್ಷರು ಸೇರಿದಂತೆ ಯಾರಿಗೂ ಸಾಧ್ಯವಿಲ್ಲ ಎಂದರು.
ಲೋಕಸಭೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಅಮಾನತ್ತು ಮಾಡಿರಲಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಕೇಂದ್ರ ಸರ್ಕಾರದವರು ಪ್ರಭಾಪ್ರಭುತ್ವವನ್ನು ಹಾಗೂ ಜನರ ಭಾವನೆಯನ್ನು ಗೌರವಿಸುತ್ತಿಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜನರು ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ ಎಂದರು.
ಇದನ್ನೂ ಓದಿ: BY Vijayendra: ಬರದ ನಡುವೆ ಸಿದ್ದರಾಮಯ್ಯ ಐಷಾರಾಮಿ ವಿಮಾನ ಪ್ರಯಾಣ: ವಿಜಯೇಂದ್ರ ಕಿಡಿ
ಪ್ರಧಾನಿ ಅಭ್ಯರ್ಥಿ INDIA ಸಭೆಯಲ್ಲಿ ತೀರ್ಮಾನ
INDIA ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಪ್ರಸ್ತಾಪ ಮಾಡಲಾಗಿರುವ ಕುರಿತು ಅಭಿಪ್ರಾಯ ಕೇಳಿದ್ದಕ್ಕೆ, INDIA ಸಭೆಯಲ್ಲಿ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.