Site icon Vistara News

CM Siddaramaiah : ಬಿಜೆಪಿಲಿ ಭಿನ್ನಮತ ಭುಗಿಲೆದ್ದಿದ್ದು ನೋಡ್ಕೊಳ್ಳಿ; ಬಿಎಸ್‌ವೈಗೆ ಸಿಎಂ ಸಲಹೆ

BSY Siddaramaiah

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರಿಂದ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಇನ್ನು ಸ್ವಲ್ಪ ದಿನದಲ್ಲೇ ಬಿಜೆಪಿಯಲ್ಲಿ ಏನೇನಾಗಲಿದೆ ಎಂದು ಎಲ್ಲರೂ ನೋಡಬಹುದು ಎಂದು ಹೇಳಿದರು.

ಇಂದು ಚುನಾವಣೆ ನಡೆದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆಗೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿ ನಿಮ್ಮ ಪಕ್ಷದ ಪರಿಸ್ಥಿತಿಯನ್ನು ಮೊದಲು ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಚುನಾವಣೆಯಲ್ಲಿ ಕೇವಲ 66 ಸೀಟು ಪಡೆದು ವಿರೋಧ ಪಕ್ಷದಲ್ಲಿ ಕುಳಿತಿದ್ದಾರೆ. ಅವರ ಮಗ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿರುವುದರಿಂದ ಅವರ ಪಕ್ಷದ ಅನೇಕ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

ಆರ್‌. ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ. ಜನರ ಆಶೀರ್ವಾದದಿಂದ ಸರ್ಕಾರ ರಚಿಸಿರುವ ನಮ್ಮ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುತ್ತಿದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡದೇ, ಶಾಂತಿಯುತವಾದ ವಾತಾವರಣವನ್ನು ಸರ್ಕಾರ ನಿರ್ಮಿಸುತ್ತಿದೆ ಎಂದರು.

ಭ್ರಷ್ಟಾಚಾರದ ಆರೋಪಗಳಿಗೆ ಅಧಿವೇಶನದಲ್ಲಿ ಉತ್ತರ

ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಚಳವಳಿ ಪ್ರಾರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಜನ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಆದರೆ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿರುವುದು ಅವರನ್ನು ಆತಂಕಕ್ಕೆ ದೂಡಿದ್ದು, ಇದರಿಂದ ಅರ್ಥವಿಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಆ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ

ಮಾಜಿ ಸಿಎಂ ಕುಮಾರಸ್ವಾಮಿಯವರು ವಿವೇಕಾನಂದ ಎಂಬುವವರ ವರ್ಗಾವಣೆ ಬಗ್ಗೆ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿವೇಕಾನಂದ ಎಂಬುವವರು ಮೈಸೂರು ಗ್ರಾಮಾಂತರ ಕ್ಷೇತ್ರಶಿಕ್ಷಣಾಧಿಕಾರಿಗಳಾಗಿದ್ದಾರೆ. ಅವರ ಬಗ್ಗೆ ಮಾತನಾಡಲಾಗಿದೆಯೆ ಹೊರತು ಪೋಲಿಸ್ ಅಧಿಕಾರಿ ಬಗ್ಗೆಯಲ್ಲ, ವಿವಿಪುರಂ
ಇನ್ಸ್ ಪೆಕ್ಟರ್ ವಿವೇಕಾನಂದ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ, ವರ್ಗಾವಣೆಯಾಗಿರುವ ಬಗ್ಗೆ ಸ್ಥಳೀಯ ಶಾಸಕರನ್ನು ಕೇಳಲಿ ಎಂದರು.

ಇದನ್ನೂ ಓದಿ: CM Siddaramaiah : ಕುಮಾರಸ್ವಾಮಿ ಹೆಸರಿನ ಕ್ರಿಮಿನಲ್‌ಗಳೂ ಇದ್ದಾರೆ; ಅವರೂ ಇವರೂ ಒಂದೇನಾ?: ಸಿಎಂ ಪ್ರಶ್ನೆ

ಸುಳ್ಳು ಆರೋಪಗಳಿಗೆ ಉತ್ತರ ನೀಡುವುದಿಲ್ಲ

ಕಾಂಗ್ರೆಸ್ ನವರು ಕೌರವ ಸಂಸ್ಕೃತಿಯನ್ನು ನನ್ನ ಬಳಿ ತೋರಿಸುವುದು ಬೇಡ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಉತ್ತರಿಸುತ್ತಾ, ಕುಮಾರಸ್ವಾಮಿಯವರು ಎಂದಿಗೂ ತಾವು ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಿಲ್ಲ. ದ್ವೇಷ ಹಾಗೂ ಅಸೂಯೆಯ ರಾಜಕಾರಣ ಮಾಡುತ್ತಿದ್ದಾರೆ. 38 ಸ್ಥಾನದಲ್ಲಿದ್ದ ಜೆಡಿಎಸ್ ನವರು ಈಗ 19 ಸ್ಥಾನಕ್ಕೆ ಇಳಿದಿದ್ದಾರೆ. ಅವರು ಮಾಡುವ ಸುಳ್ಳು ಆರೋಪಗಳಿಗೆ ಉತ್ತರ ನೀಡುವ ಅವಶ್ಯಕತೆ ಇಲ್ಲ ಎಂದರು.

ವಿದ್ಯುತ್‌ ಕಳವು ಮಾಡಿರುವ ಕುಮಾರಸ್ವಾಮಿಗೆ ನೈತಿಕತೆ ಇದೆಯಾ?

ಪೆನ್ ಡ್ರೈವ್ ನಲ್ಲಿ ಸಾಕಷ್ಟು ಮಾಹಿತಿಗಳಿದ್ದು, ಆಡಳಿತ ಪಕ್ಷದವರು ಅದನ್ನು ಬಹಿರಂಗಗೊಳಿಸದಂತೆ ಮನವಿ ಮಾಡಿದ್ದಾರೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಪೆನ್ ಡ್ರೈವ್ ಹೇಳಿಕೆಯ ನಂತರ ವಿಧಾನಸಭೆ ಅಧಿವೇಶನ ನಡೆದರೂ, ಅದರ ಬಗ್ಗೆ ಅವರು ಪ್ರಸ್ತಾಪ ಮಾಡಲಿಲ್ಲವೇಕೆ? ಪೆನ್ ಡ್ರೈವ್ ಬಹಿರಂಗಗೊಳಿಸಬೇಡಿ ಎಂದು ಮನವಿ ಮಾಡಿದವರು ಯಾರು ಎಂಬ ಮಾಹಿತಿಯನ್ನು ನೀಡಲಿ. ಮಾಜಿ ಮುಖ್ಯಮಂತ್ರಿಯಾಗಿದ್ದುಕೊಂಡು ವಿದ್ಯುತ್ ಕಳವು ಮಾಡಿರುವ ಕುಮಾರಸ್ವಾಮಿಯವರಿಗೆ ಇಂತಹ ಹೇಳಿಕೆಗಳನ್ನು ನೀಡಲು ಯಾವ ನೈತಿಕತೆಯೂ ಇಲ್ಲ. ದಂಡ ಕಟ್ಟುವ ಮೂಲಕ ವಿದ್ಯುತ್ ಕಳುವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಚಿಕ್ಕದಾದರೂ ಅಪರಾಧ ಅಪರಾಧವೇ ಎಂದರು.

Exit mobile version