ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಸರ್ಕಾರದಲ್ಲಿ ಮಗ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹಸ್ತಕ್ಷೇಪ ಹೆಚ್ಚಾಗಿದ್ದು, ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಲಭ್ಯವಾಗಿರುವ ವಿಡಿಯೊ ಸಾಕ್ಷಿ ಬಗ್ಗೆ ಈಗ ಪ್ರತಿಪಕ್ಷಗಳು ಮುಗಿಬಿದ್ದಿವೆ. ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ಆದರೆ, ಈ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಆ ವಿಡಿಯೊವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇದು ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗಾಗಿ ಮಾತನಾಡಿದ ವಿಡಿಯೊ ಆಗಿದೆ. ಲಂಚ-ಕಮಿಷನ್ ವ್ಯವಹಾರದಲ್ಲಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ (HD Kumaraswamy) ಕಾಣುವುದೆಲ್ಲವೂ ಲಂಚದ ವ್ಯವಹಾರವೇ ಎಂದು ಕುಟುಕಿದ್ದಾರೆ. ಜತೆಗೆ ಇದು, ಶಾಸಕ ಸ್ಥಾನವನ್ನು ತ್ಯಾಗ ಮಾಡಿದ ಯತೀಂದ್ರ ಅವರನ್ನು ಕುಗ್ಗಿಸುವ ಹುನ್ನಾರ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಂಭಾಷಣೆಯನ್ನು ವರ್ಗಾವಣೆ ವಸೂಲಿ ಎಂಬ ಅರ್ಥ ಬರುವಂತೆ ತಿರುಚುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರು ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಪೋಸ್ಟ್‌ನಲ್ಲೇನಿದೆ?
ಅಧಿಕಾರ ಇದ್ದಾಗ ಲಂಚ-ಕಮಿಷನ್ ವ್ಯವಹಾರದಲ್ಲಿ ಮೂರು ಹೊತ್ತು ಮುಳುಗೇಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕಾಮಾಲೆ ಕಣ್ಣಿಗೆ ನೋಡಿದ್ದು, ಕೇಳಿದ್ದೆಲ್ಲದರಲ್ಲಿಯೂ ಲಂಚದ ವ್ಯವಹಾರಗಳೇ ಕಾಣಿಸುತ್ತಿದೆ. ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ನಡೆದಿರುವ ನನ್ನ ಮತ್ತು ನನ್ನ ಮಗನ ನಡುವಿನ ಫೋನ್ ಸಂಭಾಷಣೆಗೆ ವರ್ಗಾವಣೆಯಲ್ಲಿ ವಸೂಲಿಯ ಕತೆ ಕಟ್ಟಿ ಕುಮಾರಸ್ವಾಮಿ ಕುಣಿದಾಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ಕ್ಷುಲ್ಲಕ ನಡವಳಿಕೆ ಬಗ್ಗೆ ನಾನು ಕನಿಕರವನ್ನಷ್ಟೇ ವ್ಯಕ್ತಪಡಿಸಬಲ್ಲೆ.
ಸಂಭಾಷಣೆಯನ್ನು ತಿರುಚಲಾಗಿದೆ
ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರು ಮತ್ತು ಕೆಡಿಪಿ ಸದಸ್ಯರಾಗಿರುವ ಮಾಜಿ ಶಾಸಕ ಡಾ.ಯತೀಂದ್ರ ಅವರು ಆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಿಎಸ್‌ಆರ್ ಹಣವನ್ನು ಬಳಸಿಕೊಂಡು ಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರು ಫಲಾನುಭವಿ ಶಾಲೆಗಳ ಪಟ್ಟಿ ಬಗ್ಗೆ ನನ್ನ ಜತೆ ಮಾತನಾಡಿದ್ದರು. ಕ್ಷೇತ್ರದ ಜನರ ಎದುರಿನಲ್ಲಿಯೇ ನಡೆದಿರುವ ಈ ಸಂಭಾಷಣೆಯನ್ನು ವರ್ಗಾವಣೆಗಾಗಿ ವಸೂಲಿ ಎಂಬ ಅರ್ಥ ಬರುವ ಹಾಗೆ ತಿರುಚಿರುವ ಕುಮಾರಸ್ವಾಮಿ ಅವರು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ.
ಪ್ರತಿನಿತ್ಯ ಸುಳ್ಳು ಆರೋಪ
ಕುಮಾರಸ್ವಾಮಿಯವರು ರಾಜಕೀಯಕ್ಕೆ ಪ್ರವೇಶ ಮಾಡಿದ ದಿನದಿಂದ ನಿರಂತರವಾಗಿ ಕಪೋಲ ಕಲ್ಪಿತ ಆರೋಪಗಳ ಮೂಲಕ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ಬಾಯಿಗೆ ಬಂದಂತೆ ಮಾತನಾಡುತ್ತಾ ಬರುತ್ತಿದ್ದುದನ್ನು ರಾಜ್ಯದ ಜನ ಕಂಡಿದ್ದಾರೆ. ಈಗ ತಂದೆಯಾದ ನನಗೆ ನೋವು ಕೊಡಬೇಕೆಂಬ ಏಕೈಕ ದುರುದ್ದೇಶದಿಂದ ಡಾ.ಯತೀಂದ್ರ ಅವರನ್ನು ಗುರಿಯಾಗಿಸಿಕೊಂಡು ಪ್ರತಿನಿತ್ಯ ಸುಳ್ಳು ಆರೋಪಗಳನ್ನು ಹರಿಬಿಡುತ್ತಿರುವುದು ಕುಮಾರಸ್ವಾಮಿಯವರ ವಿಕೃತ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: Yathindra Siddaramaiah: ಯತೀಂದ್ರ ವರ್ಗಾವಣೆ ದಂಧೆ; ಮಾನ ಇದ್ದರೆ ಸಿಎಂ ರಾಜೀನಾಮೆ ಕೊಡಲಿ ಎಂದ ಎಚ್‌ಡಿಕೆ
ತ್ಯಾಗಮಯಿ ಯತೀಂದ್ರ ಅವರ ನೈತಿಕತೆ ಕುಗ್ಗಿಸುವ ಹುನ್ನಾರ
ಶಾಸಕ ಸ್ಥಾನವನ್ನೇ ತ್ಯಾಗ ಮಾಡಿದರೂ ಜನಸೇವೆಯಿಂದ ಹಿಂದೆ ಸರಿಯದ ಡಾ.ಯತೀಂದ್ರ ಅವರು ವರುಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರನ್ನು ನೈತಿಕವಾಗಿ ಕುಗ್ಗಿಸುವ ದುರುದ್ದೇಶದಿಂದ ಕುಮಾರಸ್ವಾಮಿಯವರು ಪ್ರತಿನಿತ್ಯ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.
ತಮ್ಮ ಪತ್ನಿ ಮತ್ತು ಮಗ ಕೂಡಾ ರಾಜಕೀಯ ಕ್ಷೇತ್ರದಲ್ಲಿದ್ದಾರೆ ಎನ್ನುವುದನ್ನು ಎಚ್.ಡಿ. ಕುಮಾರಸ್ವಾಮಿ ಮರೆತಂತಿದೆ. ನಾನು ಕುಮಾರಸ್ವಾಮಿಯವರ ಮಟ್ಟಕ್ಕೆ ಇಳಿದು ಅವರ ರೀತಿ ಅವರ ಪತ್ನಿ ಮತ್ತು ಮಗನ ಬಗ್ಗೆ ಮಾತನಾಡಲಾರೆ. ಕನಿಷ್ಠ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾದರೂ ಮಗನಿಗೆ ಬುದ್ಧಿ ಹೇಳಿ ರಾಜ್ಯದ ಜನರಿಂದ ಮಗ ಛೀಮಾರಿಗೆ ಈಡಾಗುತ್ತಿರುವುದನ್ನು ತಪ್ಪಿಸಬೇಕೆಂದು ಕೋರುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾ ಮೂಲಕ ಕಿಡಿಕಾರಿದ್ದಾರೆ.