ಬೆಂಗಳೂರು: ರಾಜ್ಯದಲ್ಲಿ ಬರಗಾಲ (Drought in Karnataka) ತಾಂಡವವಾಡುತ್ತಿದೆ. ಮಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ರೈತರಿಗೆ ದಿಕ್ಕು ತೋಚದಂತೆ ಆಗಿದೆ. ರಾಜ್ಯದ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಎಲ್ಲ ಬೆಳವಣಿಗೆ ನಡುವೆ ರಾಜ್ಯ ಸರ್ಕಾರ ದುಂದು ವೆಚ್ಚವನ್ನು ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬರಗಾಲದ ಈ ಸಂಕಷ್ಟದ ಸಮಯದಲ್ಲಿ ಸಿಎಂ ನಿವಾಸದ ವೈಭವಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಅವಶ್ಯಕತೆ ಇತ್ತೇ ಎಂದು ಜನ ಪ್ರಶ್ನೆ ಮಾಡುವಂತಾಗಿದೆ. ಅಲ್ಲದೆ, ತುರ್ತು ಬರ, ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಅನುದಾನಗಳ ಬಳಕೆಗೆ ನೀಡಲಾಗುವ 4G ವಿನಾಯಿತಿಯನ್ನು ಸಹ ಇದಕ್ಕೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಇದಕ್ಕೆಲ್ಲ ಕಡಿವಾಣ ಹಾಕಬಹುದಿತ್ತು ಎಂಬ ಮಾತುಗಳು ಕೇಳಿಬಂದಿವೆ.
ಸಿಎಂ ಪ್ರವೇಶಕ್ಕೂ ಮುನ್ನ ಸರ್ಕಾರಿ ನಿವಾಸ ಕಾವೇರಿ ನವೀಕರಣಗೊಂಡಿದೆ. ಕಾವೇರಿ ನಿವಾಸಕ್ಕೆಂದು ಪೀಠೋಪಕರಣಗಳ ಖರೀದಿ ಮಾಡಲಾಗಿದೆ. ಇದಕ್ಕೆ ಮೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ಲಭ್ಯವಾಗಿರುವುದು ಪೀಠೋಪಕರಣಗಳ ಖರೀದಿಯ ಮಾಹಿತಿ ಮಾತ್ರವೇ ಆಗಿದೆ.
ಉಳಿದಂತೆ ನಿವಾಸದ ನವೀಕರಣಕ್ಕೆ ಸಹ ಕೋಟಿ ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಈ ಪೀಠೋಪಕರಣಗಳ ಖರೀದಿಗೆ 4 G ವಿನಾಯಿತಿಯನ್ನು ಲೋಕೋಪಯೋಗಿ ಇಲಾಖೆ ನೀಡಿದೆ. ತುರ್ತು ಬರ ಪರಿಹಾರ, ಪ್ರಕೃತಿ ವಿಕೋಪದ ವೇಳೆ ತುರ್ತು ಕೆಲಸಗಳಿಗಾಗಿ 4G ವಿನಾಯಿತಿ ನೀಡಲಾಗುತ್ತದೆ. ಆದರೆ, ಈಗ ಸಿಎಂ ನಿವಾಸಕ್ಕೆ ಪೀಠೋಪಕರಣಗಳ ಖರೀದಿಗೆ 4G ವಿನಾಯಿತಿ ಸಹ ನೀಡಲಾಗಿದೆ.
ಅಂದರೆ ಸಿಎಂ ನಿವಾಸದ ನವೀಕರಣ ತುರ್ತು ಬರ ಪರಿಹಾರ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಎದುರಾಗುವಷ್ಟು ದೊಡ್ಡ ಸಮಸ್ಯೆ ಆಗಿತ್ತೇ? ಇಂತಹ ಸಂದರ್ಭದಲ್ಲಿ ದುಂದು ವೆಚ್ಚ ಮಾಡಬೇಕಾ? ಈ ಅನುದಾನಗಳನ್ನು ಸಮರ್ಪಕ ರೀತಿಯಲ್ಲಿ ಖರ್ಚು ಮಾಡಿದ್ದರೆ ಜನರ ಉಪಯೋಗಕ್ಕೆ ಬರುತ್ತಿರಲಿಲ್ಲವೇ ಎಂಬ ಪ್ರಶ್ನೆ ಈಗ ಎದ್ದಿದೆ.
ಬರ್ಬರ ಕ್ಷಾಮಕ್ಕೆ ತುತ್ತಾಯ್ತು 223 ತಾಲೂಕು!
ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ (Drought in Karnataka) ತುತ್ತಾಗಿದೆ. ಮಳೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ ಮತ್ತೂ 7 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ (Karnataka Government) ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಬರಕ್ಕೆ ತುತ್ತಾದ ತಾಲೂಕುಗಳ ಸಂಖ್ಯೆ ಬರೋಬ್ಬರಿ 223!
ರಾಜ್ಯದಲ್ಲಿ ಒಟ್ಟು 236 ತಾಲೂಕುಗಳು ಇದ್ದು, ಇವುಗಳಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದರಿಂದ ಇನ್ನು ಬಾಕಿ ಉಳಿದಿರುವುದು ಕೇವಲ 13 ತಾಲೂಕುಗಳು ಮಾತ್ರ! ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ತಾಲೂಕುಗಳೂ ಬರಕ್ಕೆ ತುತ್ತಾಗಿ ಶ್ರೀಗಂಧದ ಬೀಡು ಕರ್ನಾಟಕ “ಬರದ ನಾಡು” ಎಂಬ ಹಣೆಪಟ್ಟಿಯನ್ನು ಹೊತ್ತುಕೊಳ್ಳಲಿದೆ.
ಇದನ್ನೂ ಓದಿ: Three phase power : ರೈತರಿಗೆ ಗುಡ್ ನ್ಯೂಸ್; ಇನ್ನು ಪ್ರತಿ ದಿನ ಏಳು ತಾಸು ವಿದ್ಯುತ್ ಪೂರೈಕೆ
ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮತ್ತೆ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅದರಂತೆ ಔರಾದ್, ಬೀದರ್, ಚಿಟಗುಪ್ಪ, ಹುಮುನಾಬಾದ್, ಕಮಲನಗರ, ಸಿಂಧನೂರು ಮತ್ತು ತಿಕೋಟಾ ತಾಲೂಕುಗಳನ್ನು ಬರಪೀಡಿತ ಎಂದು ಉಲ್ಲೇಖಿಸಿ ಆದೇಶಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು ರಾಜ್ಯಲ್ಲಿ 223 ಬರ ಪೀಡಿತ ತಾಲೂಕುಗಳು ಆದಂತಾಗಿವೆ.