Site icon Vistara News

Organ donors: ಅಂಗಾಂಗ ದಾನಿ ಕುಟುಂಬಗಳ ಕಣ್ಣೀರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ

Cm Siddaramaiah distributes letters of appreciation to families of organ donors

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿ ಗುರುವಾರ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಅಂಗಾಂಗ ದಾನಿಗಳ (Organ donors) ಕುಟುಂಬದವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶಂಸಾ ಪತ್ರ ನೀಡಿದರು. ಈ ವೇಳೆ ಒಬ್ಬೊಬ್ಬರದ್ದು ಒಂದೊಂದು ಕಣ್ಣೀರಿನ ಕಥೆ ಇತ್ತು. ಇದಕ್ಕೆ ಮರುಗಿದ ಸಿಎಂ ಎಲ್ಲರಿಗೂ ಸಾಂತ್ವನ ಹಾಗೂ ಧೈರ್ಯ ಹೇಳಿದರು.

ಅಪಘಾತಕ್ಕೀಡಾದ ಶರವಣ ಅವರ ಪತ್ನಿ, ಪ್ರಶಂಸಾ ಪತ್ರ ಸ್ವೀಕರಿಸುವಾಗ ಅಗಲಿದ ತಮ್ಮ ಪತಿಯನ್ನು ನೆನೆದು ಕಣ್ಣೀರಾದರು. ಕೊಲೆಗೀಡಾದ ರಾಮನಗರದ ಕೆ.ಜಿ. ನವೀನ್‌ ಕುಟುಂಬದವರಿಗೆ ಅವರ ಸಾವಿಗೆ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ನಿಮ್ಮ ಸಂಕಷ್ಟದ ವೇಳೆ ಸರ್ಕಾರ ಇರಲಿದೆ

ನೀವು ಕೈಗೊಂಡ ನಿರ್ಧಾರ ಸುಲಭವಲ್ಲ. ಆದರೆ ಇತರರ ಜೀವ ಉಳಿಸುವ ಕೆಲಸ ನೀವು ಮಾಡಿದ್ದೀರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ನಿಮಗೆ ಯಾವುದೇ ಸಂಕಷ್ಟ ಎದುರಾದರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸ್ಥೈರ್ಯ ತುಂಬಿದರು.

ತಮ್ಮ ಹಿಂದಿನ ಅವಧಿಯಲ್ಲಿ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದನ್ನು ಸ್ಮರಿಸಿದ ಸಿಎಂ ಸಿದ್ದರಾಮಯ್ಯ, ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಅಂಗಾಂಗ ದಾನ ಕೋರಿ, ನೋಂದಾಯಿಸಿಕೊಂಡವರ ಸಂಖ್ಯೆ 8000ಕ್ಕೂ ಹೆಚ್ಚಿದ್ದು, ಕಳೆದ ಒಂದು ವರ್ಷದಲ್ಲಿ ಕೇವಲ 178 ಅಂಗಾಂಗ ದಾನ ನಡೆದಿದೆ. ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಇದು ಇನ್ನಷ್ಟು ಹೆಚ್ಚಾಗಬೇಕಾಗಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು, ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: Caste Census Report: ಜಾತಿಗಣತಿ ವರದಿಗೆ ಶಾಮನೂರು ಕೆಂಡಾಮಂಡಲ; ಖಾಸಗಿ ಸರ್ವೇ ಮಾಡಿಸುವ ಎಚ್ಚರಿಕೆ!

ಒಬ್ಬರಿಂದ 8 ಜನರಿಗೆ ಜೀವದಾನ

ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿಗಳು ಜಿಲ್ಲೆಗಳಲ್ಲಿ ಅಂಗಾಂಗ ದಾನಿಗಳ ಕುಟುಂಬದವರಿಗೆ ಪ್ರಶಂಸಾ ಪತ್ರ ನೀಡಲಿದ್ದಾರೆ. ಒಬ್ಬ ವ್ಯಕ್ತಿ ಅಂಗಾಂಗ ದಾನದ ಮೂಲಕ ಎಂಟು ಜನರಿಗೆ ಜೀವದಾನ ಮಾಡಬಹುದು ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಹಾಗೂ ಆಯುಕ್ತ ಡಿ. ರಂದೀಪ್‌ ಮತ್ತಿತರರು ಉಪಸ್ಥಿತರಿದ್ದರು.

Exit mobile version