Site icon Vistara News

Congress Manifesto : ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ರಚನೆ; ಸಿದ್ದರಾಮಯ್ಯ ಸಹಿತ 16 ಮಂದಿಗೆ ಹೊಣೆ

siddaramaiah Manifo committee

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯನ್ನು (Parliament Elections 2024) ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಪಕ್ಷ (Congress Party) ಅದಕ್ಕೆ ಪೂರ್ವಭಾವಿಯಾಗಿ ಜನರನ್ನು ಸೆಳೆಸಲು ಘೋಷಿಸಬೇಕಾದ ಪ್ರಣಾಳಿಕೆಗಳ ರಚನೆಗೆ (Congress Manifesto) ಮುಂದಾಗಿದೆ. 16 ಸದಸ್ಯರ ‘ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿ’ (Congress Manifesto Committee) ಯನ್ನು ರಚಿಸಲಾಗಿದ್ದು, ಅದರಲ್ಲಿ ‌ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಅವಕಾಶ ನೀಡಲಾಗಿದೆ.

ಪಿ ಚಿದಂಬರಂ ಅವರು ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದರೆ ಟಿ.ಎಸ್‌. ಸಿಂಗ್‌ ದೇವ್‌ ಅವರು ಸಂಚಾಲಕರಾಗಿದ್ದಾರೆ. ಅವರ ಬಳಿಕದ ಮೂರನೇ ಸ್ಥಾನದಲ್ಲಿ ಸಿದ್ದರಾಮಯ್ಯ ಅವರ ಹೆಸರಿದೆ. ಪ್ರಣಾಳಿಕೆ ಸಮಿತಿಯಲ್ಲಿ ಒಟ್ಟು 16 ಮಂದಿ ಇದ್ದಾರೆ.

ಪಂಚ ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ಭಾರಿ ವಿಜಯವನ್ನು ಗಳಿಸಿದ ಸಿದ್ದರಾಮಯ್ಯ ಅವರ ಅನುಭವವನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿರುವುದರ ಸೂಚನೆ ಇದಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಇತ್ತೀಚೆಗೆ ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಕೂಡಾ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿತ್ತು. ಇದೀಗ ಇದೀಗ ಇಡೀ ರಾಷ್ಟ್ರಕ್ಕೆ ಅನ್ವಯವಾಗುವಂತೆ ಯೋಜನೆಗಳನ್ನು ಘೋಷಿಸಬೇಕಾಗಿದೆ. ಅದಕ್ಕಾಗಿ ಸಿದ್ದರಾಮಯ್ಯ ಅವರಂಥ ಅನುಭವಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಈ ಸಮಿತಿಯಲ್ಲಿ ಚಿದಂಬರಂ, ಟಿ.ಎಸ್‌. ಸಿಂಗ್‌ ದೇವ್‌, ಸಿದ್ದರಾಮಯ್ಯ ಅವರಲ್ಲದೆ ನಾಲ್ಕನೇ ಸ್ಥಾನದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ಐದನೇ ಸ್ಥಾನದಲ್ಲಿ ಆನಂದ್‌ ಶರ್ಮಾ, ಆರನೇ ಸ್ಥಾನದಲ್ಲಿ ಜೈರಾಮ್‌ ‌ ರಮೇಶ್‌, ಏಳನೇ ಸ್ಥಾನದಲ್ಲಿ ಶಶಿ ತರೂರ್‌ ಇದ್ದಾರೆ. ಸಮಿತಿಯ ಉಳಿದ ಸದಸ್ಯರೆಂದರೆ ಘಾಯ್‌ಕಂಗಂ, ಗೌರವ್‌ ಗೊಗೊಯಿ, ಪ್ರವೀಣ್‌ ಚಕ್ರವರ್ತಿ, ಇಮ್ರಾನ್‌ ಪ್ರತಾತ್‌ಗಢಿ, ಕೆ. ರಾಜು, ಓಂಕಾರ್‌ ಸಿಂಗ್‌ ಮಾರ್ಕಂ, ರಂಜೀತ್‌ ರಂಜನ್‌, ಜಿಗ್ನೇಶ್‌ ಮೇವಾನಿ, ಗುರುದೀಪ್‌ ಸಪ್ಪಲ್.‌

ಖರ್ಗೆ ಅವರಿಗೆ ಧನ್ಯವಾದ ಹೇಳಿದ ಸಿದ್ದರಾಮಯ್ಯ

ಈ ನಡುವೆ ತಮ್ಮನ್ನು ಪ್ರಣಾಳಿಕೆ ಸಮಿತಿಗೆ ನೇಮಕ ಮಾಡಿರುವುದಕ್ಕಾಗಿ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ನಮ್ಮ ಸರ್ಕಾರದ ‘ಕರ್ನಾಟಕ ಮಾದರಿ’ ಆಡಳಿತ ಇಂದು ಪಕ್ಷಾತೀತವಾಗಿ ದೇಶದ ಜನ ಗುರುತಿಸುತ್ತಿದ್ದಾರೆ. ಪ್ರಣಾಳಿಕೆ ರಚನೆಯಲ್ಲಿ ನನಗೆ ಅವಕಾಶ ನೀಡಿರುವುದು ಈ ‘ಕರ್ನಾಟಕ ಮಾದರಿ ಆಡಳಿತ’ಕ್ಕೆ ಎಐಸಿಸಿ ನೀಡಿರುವ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದ ಜನತೆಗೂ ಸಿಗಲಿ ಕರ್ನಾಟಕ ಮಾದರಿ ಎಂದ ಸಿದ್ದರಾಮಯ್ಯ

ಪಕ್ಷದ ಪ್ರಣಾಳಿಕೆ ಎನ್ನುವುದು ಕೇವಲ ಮತದಾರರಿಗೆ ನೀಡುವ ಭರವಸೆಗಳ ಪಟ್ಟಿ ಅಲ್ಲ, ಜನತೆಗೆ ನಾವು ನೀಡುವ ವಚನವಾಗಿದ್ದು ಅದನ್ನು ಅನುಷ್ಠಾನಕ್ಕೆ ತರುವುದು ನಿಜವಾದ ರಾಜಧರ್ಮ ಎಂದು ನಾನು ತಿಳಿದುಕೊಂಡವನು.
ಹಿಂದಿನ ನಮ್ಮ ಸರ್ಕಾರ ‘ಸರ್ವರಿಗೂ ಸಮಪಾಲು – ಸಮಬಾಳು’ ನೀಡುವ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಅನುಷ್ಠಾನಗೊಳಿಸಿ ಮಾದರಿ ಆಡಳಿತವನ್ನು ನೀಡಿ ಜನತೆಯ ವಿಶ್ವಾಸಾರ್ಹತೆಯನ್ನು ಗಳಿಸಿದ್ದೆವು. ಅದೇ ಹಾದಿಯಲ್ಲಿ ಈಗಿನ ಸರ್ಕಾರ ಕೂಡಾ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಕೂಡಾ ಕರ್ನಾಟಕ ಮಾದರಿ ಆಡಳಿತದ ಅನುಕೂಲಗಳನ್ನು ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version