Site icon Vistara News

CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

Cm Siddaramaiah hits out at BJP for Gaurantee Scheme

ಮಂಗಳೂರು: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಒಳಗೊಂಡಂತೆ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ನಮ್ಮ ಸರ್ಕಾರ ಬಜೆಟ್‌ನಲ್ಲಿ ಮೀಸಲಿರಿಸಿದೆ. ಈ ಬಿಜೆಪಿಯವರಿಗೆ (BJP Karnataka) ಬಜೆಟ್‌, ಆರ್ಥಿಕತೆ ಬಗ್ಗೆ ಏನು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದರು.

ಮಂಗಳವಾರ ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದರು. ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿ ಸುಳ್ಳು ಹೇಳುತ್ತಿದೆ. ನೀರಾವರಿಗೆ 18,000 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಅದು ಕಡಿಮೆಯೇ? ಏನೂ ಮಾಡಿಲ್ಲ ಎಂದರೆ ಏನು? ಗ್ಯಾರಂಟಿಗಳನ್ನು ಒಳಗೊಂಡಂತೆ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಿದೆ ಎಂದು ವಿವರಿಸಿದರು.

ಬಿಜೆಪಿಯವರು ಬಜೆಟ್ ಓದುವುದಿಲ್ಲ, ಆರ್ಥಿಕತೆ ಬಗ್ಗೆ ತಿಳಿದೂ ಇಲ್ಲ

ಬಿಜೆಪಿಯವರು ಬಜೆಟ್ ಓದುವುದಿಲ್ಲ, ಆರ್ಥಿಕತೆ ಬಗ್ಗೆ ಅವರಿಗೆ ತಿಳಿದೂ ಇಲ್ಲ. ಅಭಿವೃದ್ಧಿ ಶೂನ್ಯ ಎನ್ನುತ್ತಾರೆ. ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು, ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್ ಹೇಳಿದ್ದರು. ಈ ಬಗ್ಗೆ ಬಿಜೆಪಿಗೆ ತಿಳಿದಿದೆಯೇ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ನಿನ್ನೆ (ಮೇ 20) ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಸಾಧನೆಗಳನ್ನು ಜನರ ಮುಂದಿರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮೇ 20ಕ್ಕೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಸರ್ಕಾರದ ಸಾಧನೆಗಳ ಬಗ್ಗೆ ಕೈ ನಾಯಕರು ಸ್ಮರಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿದ್ದ 5 ಗ್ಯಾರಂಟಿಗಳನ್ನು (Congress Guarantee) ಜಾರಿ ಮಾಡಿರುವ ಕಾಂಗ್ರೆಸ್‌ ಸರ್ಕಾರ, ಪಂಚ ಗ್ಯಾರಂಟಿಗಳು ಜಾರಿಯಾದಾಗಿನಿಂದ ಈವರೆಗೆ ಬಳಕೆಯಾಗಿರುವ ಅನುದಾನದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಇದರ ಒಟ್ಟು ಮೊತ್ತ 44816 ಕೋಟಿ ರೂಪಾಯಿ ಆಗಿದೆ.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಲ್ಲಿ 5 ಕೆಜಿ ಅಕ್ಕಿಯ ಜತೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ತಲಾ 170 ರೂ. ನೀಡುವ ʼಅನ್ನಭಾಗ್ಯ ಯೋಜನೆʼ, ಮನೆ ಯಜಮಾನಿಗೆ ಮಾಸಿಕ 2000 ರೂ. ಮಾಸಾಶನ ನೀಡುವ ʼಗೃಹ ಲಕ್ಷ್ಮಿ ಯೋಜನೆʼ, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್‌ ಒದಗಿಸುವ ʼಗೃಹ ಜ್ಯೋತಿ ಯೋಜನೆʼ, ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ʼಶಕ್ತಿ ಯೋಜನೆʼಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದೆ. ಇನ್ನು ಐದನೇ ಗ್ಯಾರಂಟಿಯಾದ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ., ಡಿಪ್ಲೊಮಾ ಮಾಡಿದವರಿಗೆ 1500 ರೂ. ನೀಡುವ ಯುವ ನಿಧಿ ಯೋಜನೆ ಅನುಷ್ಠಾನದ ಹಂತದಲ್ಲಿದೆ.

ಇದನ್ನೂ ಓದಿ | Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇನ್ನೊಬ್ಬ ಎಸ್‌ಪಿಪಿ ನೇಮಕ; ಹೈಕೋರ್ಟ್‌ನಲ್ಲಿ ವಾದಕ್ಕೆ ಸಜ್ಜಾದ ಸರ್ಕಾರ

ಗ್ಯಾರಂಟಿಗಳಿಗೆ ಆಗಿರುವ ವೆಚ್ಚ

ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಮೇ 19ರವರೆಗೆ ಬಳಕೆಯಾಗಿರುವ ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 23,098 ಕೋಟಿ ರೂ., ಗೃಹಜ್ಯೋತಿ ಯೋಜನೆಗೆ 10,207 ಕೋಟಿ ರೂ., ಶಕ್ತಿ ಯೋಜನೆಗೆ 4,054 ಕೋಟಿ ರೂ., ಅನ್ನ ಭಾಗ್ಯ ಯೋಜನೆಗೆ 7,364 ಕೋಟಿ ರೂ. ಹಾಗೂ ಯುವ ನಿಧಿ ಯೋಜನೆಗೆ 93 ಕೋಟಿ ರೂ. ವೆಚ್ಚವಾಗಿದೆ. ಶಕ್ತಿ ಯೋಜನೆಯಲ್ಲಿ 211.5 ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಸರ್ಕಾರಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.

Exit mobile version