Site icon Vistara News

CM Siddaramaiah: ಸಿದ್ದರಾಮಯ್ಯ ಅತ್ಯಂತ ಪೆದ್ದ ಸಿಎಂ: ಬಸವರಾಜ ಬೊಮ್ಮಾಯಿ ಕಿಡಿ

Basavaraj Bommai

ಬೆಂಗಳೂರು: ಕಾಂಗ್ರೆಸ್ ಶಾಸಕರ ಕಣ್ಣಿಗೆ ಅತ್ಯಂತ ಪೆದ್ದ ಸಿಎಂ ಎಂದರೆ ಅದು ಸಿದ್ದರಾಮಯ್ಯ (CM Siddaramaiah) ಆಗಿದ್ದಾರೆ. ಯಾರು ಪೆದ್ದರು? ಯಾರು ಬುದ್ಧಿವಂತರು ಎಂದು ಜನ ತೀರ್ಮಾನ ಮಾಡ್ತಾರೆ. ಸಿದ್ದರಾಮಯ್ಯ ಸರ್ಟಿಫಿಕೇಟ್ ಕೊಡಬೇಕಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ‌ ಅವರು ರಾಜಕೀಯವಾಗಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಈ ಪ್ರತಿಕ್ರಿಯೆ ನೀಡಿದರು.

ಒಂಬತ್ತು ತಿಂಗಳಿಂದ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಕಣ್ಣಿನಲ್ಲಿ ಅತ್ಯಂತ ಪೆದ್ದ ಮುಖ್ಯಮಂತ್ರಿ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಆಗಿದ್ದಾರೆ. ರಾಜ್ಯ ಮತ್ತು ಕೇಂದ್ರದ ಸಂಬಂಧವನ್ನು ಸಿಎಂ ಸಿದ್ದರಾಮಯ್ಯ ಹಾಳು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ವೈಫಲ್ಯಗಳಿಂದ ಕೂಡಿದೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಮೇವಿಗೆ ಕೊರತೆ ಇದೆ. ಗ್ಯಾರೆಂಟಿಗಳು ಸರಿಯಾಗಿ ಜನರಿಗೆ ತಲುಪಿಲ್ಲ. ಹೀಗಾಗಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಇದನ್ನು ಮುಚ್ಚಿಕೊಳ್ಳಲು ರಾಜಕೀಯ ಸ್ಟಂಟ್ ಮಾಡಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಮೋದಿ ಅವರ ಕಾಲದಲ್ಲಿ ಅತಿ ಹೆಚ್ಚು ಅನುದಾನವು ಕರ್ನಾಟಕಕ್ಕೆ ಬಂದಿದೆ. ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆ, ಬರಗಾಲ ನಿರ್ವಹಣೆಯಲ್ಲಿ ವಿಫಲವಾಗಿದೆ. ಒಂದು ನಯಾಪೈಸೆ ಕೆಲಸ ಆಗುತ್ತಿಲ್ಲ, ಜನ ಭ್ರಮನಿರಸನರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭಯ ಕಾಡುತ್ತಿದೆ. ಲೋಕಸಭೆ ಚುನಾವಣೆ ಸೋಲಿನ ಕಾರಣಕ್ಕೆ ದೆಹಲಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆಕ್ರೋಶವನ್ನು ವ್ಯಕ್ತಪಡಿಸಿದರು.

ಯಡಿಯೂರಪ್ಪ, ಬೊಮ್ಮಾಯಿ ಪೆದ್ದರು ಎಂದಿದ್ದ ಸಿಎಂ

ನವ ದೆಹಲಿಯ ಜಂತರ್‌ ಮಂತರ್‌ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಒಂದು ರೂಪಾಯಿ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಮ್ಮೆಯೂ ಕೇಂದ್ರದ ಬಳಿ ಹಣವನ್ನು ಕೇಳಿಲ್ಲ. ಮಹದಾಯಿ, ಮೇಕೆದಾಟು ಯೋಜನೆ ಬಗ್ಗೆ ಮಾತನಾಡುತ್ತಿಲ್ಲ. ಇವೆಲ್ಲ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ಮಾಜಿ ಸಿಎಂಗಳಾದ ಬಿ.ಎಸ್‌. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಪೆದ್ದು ಪೆದ್ದಾಗಿ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ‌ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಅವರಷ್ಟು ಪೆದ್ದ ಕಾಂಗ್ರೆಸ್‌ನಲ್ಲಿ ಬೇರೆ ಯಾರೂ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Congress Protest: ಕೇಂದ್ರದಿಂದ ಅನ್ಯಾಯ; ಬಜೆಟ್‌ ಬಳಿಕ ಶ್ವೇತಪತ್ರ ಹೊರಡಿಸುವೆ ಎಂದ ಸಿಎಂ ಸಿದ್ದರಾಮಯ್ಯ

ಶ್ವೇತಪತ್ರ ಹೊರಡಿಸುತ್ತೇನೆಂದ ಸಿಎಂ

15ನೇ ಆರ್ಥಿಕ ಆಯೋಗವನ್ನು ರಚನೆ ಮಾಡಿದ್ದು ಇದೇ ಪಿಎಂ ನರೇಂದ್ರ ಮೋದಿ. ನಾವು ಸಮರ್ಥ ವಾದ ಮಂಡನೆ ಮಾಡಿದರೂ ಕೇಳಲಿಲ್ಲ. ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಅಂತ ನಮ್ಮ ಸಂಸದರು ಒಂದು ದಿನವೂ ಮಾತನಾಡಿಲ್ಲ. ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚು ಕೊಡುತ್ತಿದ್ದಾರೆ. ಮಾನದಂಡಗಳ ಮೇಲೆ ಪರಿಹಾರ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ಹಂಚಿಕೆ ಮಾಡಿದ್ದಾರೆ. ಇದು ತಪ್ಪು. 1972ರ ಅಂಕಿ-ಅಂಶಗಳ ಪ್ರಕಾರ ಹಂಚಿಕೆ ಮಾಡಬೇಕಿತ್ತು. ಬಜೆಟ್ ಬಳಿಕ ಶ್ವೇತ ಪತ್ರ ಹೊರಡಿಸುತ್ತೇವೆ. ಇನ್ನು
ಬಜೆಟ್ ಕೂಡಾ ಒಂದು ಶ್ವೇತ ಪತ್ರ ಇದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Exit mobile version